ಸಮರ್ಪಕ ಬಸ್ ವ್ಯವಸ್ಥೆ: ಎಸ್‌ಎಫ್‌ಐ ಮನವಿ
ಹಾನಗಲ್ಲ: ಭಾರತ ವಿದ್ಯಾರ್ಥಿ ಫೆಡರೇಷನ್ ಹಾನಗಲ್ಲ ತಾಲೂಕು ಘಟಕದ ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗಾಗಿ ಒತ್ತಾಯಿಸಿ ತಹಸೀಲ್ದಾರ್‌ಗೆ ಮನವಿ ಅರ್ಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಅವರು, ತಾಲೂಕಿನಲ್ಲಿ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಬಸ್‌ಗಳ ಮೂಲಕ ವಿವಿಧ ಶಾಲೆ, ಕಾಲೇಜುಗಳಿಗೆ ಓಡಾಡುತ್ತಾರೆ. ಆದರೆ ಸಕಾಲಿಕವಾಗಿ ಬಸ್ ವ್ಯವಸ್ಥೆ ಇಲ್ಲದ ಕಾರಣ ವರ್ಗಗಳಿಗೆ ಹಾಜರಾಗಲು ತೊಂದರೆ ಆಗುತ್ತಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ದೊರಕಬೇಕು. ವಿದ್ಯಾರ್ಥಿ ಮುಖಂಡರನ್ನು ಕರೆದು, ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಈ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಹಾಲಿ ಓಡಾಡುವ ಬಸ್‌ಗಳು ಕೂಡ ಸುಸ್ಥಿತಿಯಲ್ಲಿಲ್ಲ. ವಿದ್ಯಾರ್ಥಿಗಳು ಭಯದಲ್ಲಿಯೇ ಪ್ರಯಾಣ ಮಾಡುವಂತಾಗಿದೆ. ಕೂಡಲೇ ಬಸ್ ಪ್ರಯಾಣದ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.
ನಗರದಲ್ಲಿ ಪ್ರತಿಭಟನೆ ನಡೆಸಿ, ಮಹಾತ್ಮಾ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲಾಯಿತು. ಮುಖಂಡರಾದ ವಿನಾಯಕ ಕುರುಬರ, ಸುಭಾಸ ಮಾದರ, ಪ್ರಕಾಶ ಹೊಸಮನಿ, ಅಜರುದ್ದೀನ ಹರವಿ, ಭರಮಗೌಡ ಪಾಟೀಲ, ಮಂಜುನಾಥ ಗುಳೇದ, ಶಶಿಧರ, ಜೈನುಲ್ಲಾ ಭಾಷಾ, ಬಸವರಾಜ, ಶಿವರಾಜ, ಕರಬಸವರಾಜ ಮುಂತಾದವರಿದ್ದರು.