ಈಶ್ವರ ದೇವರ ಕೆರೆ ಭರ್ತಿ: ಬಾಗಿನ ಅರ್ಪಣೆ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಆ. 8
ತಾಲೂಕಿನ ಅಕ್ಕಿಆಲೂರು ಗ್ರಾಮದ ನೂರಾರು ಎಕರೆ ಹೊಲ-ಗದ್ದೆಗಳಿಗೆ ನೀರಿನ ಆಶ್ರಯವಾಗಿರುವ ಈಶ್ವರ ದೇವರ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ ದಂಪತಿ ಗುರುವಾರ ಗಂಗಾಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು.
ಬಾಗಿನ ಅರ್ಪಿಸಿ ಮಾತನಾಡಿದ ಪ್ರಕಾಶಗೌಡ ಪಾಟೀಲ ಮಾತನಾಡಿ, ವರ್ಷದುದ್ದಕ್ಕೂ ಈ ಭಾಗದಲ್ಲಿ ನಡೆಯುವ ಕೃಷಿ ಚಟುವಟಿಕೆಗಳಿಗೆ ಈಶ್ವರ ದೇವರ ಕೆರೆಯೇ ಮೂಲಾಧಾರ. ಈ ಕೆರೆಯನ್ನೇ ಅವಲಂಬಿಸಿರುವ ನೂರಾರು ಮೀನುಗಾರರ ಕುಟುಂಬಗಳು ಹಾಗೂ ರೈತ ಸಮುದಾಯದಲ್ಲಿ ಸಂತಸ ಮೂಡಿದೆ ಎಂದು ನುಡಿದ ಅವರು, ಏರಿಯುದ್ದಕ್ಕೂ ತಡೆಗೋಡೆ ನಿರ್ಮಿಸುವ ಜೊತೆಗೆ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ರೂಪಿಸುವಲ್ಲಿ ಗಮನ ಹರಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ವಿಶಾಲಾಕ್ಷಿ ಪಾಟೀಲ, ಕಾಂಗ್ರೆಸ್ ಮುಖಂಡರಾದ ಸಿದ್ದನಗೌಡ ಪಾಟೀಲ, ರಫೀಕಸಾಬ್ ಹಿತ್ತಲಮನಿ, ಅನಿತಾ ಪಾಟೀಲ, ಮಂಜುನಾಥ ತಟ್ಟಿ, ವಿನಾಯಕ ಅರ್ಕಸಾಲಿ, ಈರಣ್ಣ ಕಬ್ಬೂರ, ಮಲ್ಲಿಕಾರ್ಜುನ ಸೂರಕೊಂಡರ, ಅನ್ನಪೂರ್ಣಾ ಪಾಟೀಲ, ನಿರ್ಮಲಾ ಪಾಟೀಲ ಮುಂತಾದವರು ಹಾಜರಿದ್ದರು.