ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪಾಕಿಸ್ತಾನ ವಿರುದ್ಧ ಯುದ್ಧ ಸಾರಲಿ

Vishwanath S
Updated On : 9 Aug 2013, 11:34 am

ಗದಗ: ಭಾರತದ ಮೇಲೆ ಪದೇ ಪದೇ ಆಕ್ರಮಣ ಮಾಡುತ್ತಿರುವ ಪಾಕಿಸ್ತಾನದ ಹುಟ್ಟಡಗಿಸಲು ಭಾರತ ಸರ್ಕಾರ ಕೂಡಲೇ ಪಾಕಿಸ್ತಾನದೊಂದಿಗೆ ಯುದ್ಧ ಸಾರಬೇಕು ಎಂದು ಗದಗ ಜಿಲ್ಲಾ ಬಜರಂಗ ದಳದ ಸಂಚಾಲಕ ಮಾರುತಿ ಪವಾರ ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಭಾರತ ಶಾಂತಿ ಪ್ರಿಯ ದೇಶವಾಗಿದ್ದು, ಅದು ಅನೇಕ ದಶಕಗಳಿಂದಲೂ ನೆರೆಯ ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಭಾರತೀಯರು ಶಾಂತಿ ಪ್ರಿಯರು ಎಂದರೆ ಕೈಲಾಗದ ಹೇಡಿಗಳೆಂದು ಪಾಕಿಸ್ತಾನಿಯರು ಹಾಗೂ ನೆರೆಯ ದೇಶಗಳ ಭಯೋತ್ಪಾದಕರು ತಿಳಿದುಕೊಂಡಿದ್ದಾರೆ. ಈ ತಪ್ಪು ಭ್ರಾಂತಿಯಿಂದ ಕೂಡಿದ ನೆರೆಯ ದೇಶಗಳಿಗೆ ತಕ್ಕ ಪಾಠ ಕಲಿಸಲು ಪಾಕಿಸ್ತಾನದ ಮೇಲೆ ಯುದ್ಧ ಸಾರುವುದೊಂದೇ ಭಾರತಕ್ಕಿರುವ ದಾರಿಯಾಗಿದೆ. ನೆರೆಯ ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಸುವ ಮೂಲಕ ದೇಶದಲ್ಲಿ ಆಂತರಿಕ ಭದ್ರತೆಗೆ ತೀವ್ರ ಧಕ್ಕೆ ತಂದಿದೆ. ಆದರೆ ಕೇಂದ್ರದ ಯುಪಿಎ ಸರ್ಕಾರ ಅಲ್ಪಸಂಖ್ಯಾತರ ತುಷ್ಟಿಕರಣಕ್ಕಾಗಿ ಪಾಕಿಸ್ತಾನ ಎಷ್ಟೆ ಕಿರುಕುಳ ನೀಡಿದರೂ ಸಹ ಮೌನವಾಗಿ ಸಹಿಸುತ್ತಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಇದೇ ಪರಿಸ್ಥಿತಿ ಮುಂದುವರೆದಲ್ಲಿ ಭಾರತ ಮತ್ತೊಮ್ಮೆ ಪರಕೀಯರ ಕೈಯಲ್ಲಿ ಹೋಗುವುದು ನಿಶ್ಚಿತವಾಗಿದೆ. ಈಚೆಗೆ ಜಮ್ಮು ಕಾಶ್ಮೀರದಲ್ಲಿ ಗಸ್ತು ಕಾಯುತ್ತಿದ್ದ ಭಾರತೀಯ ಯೋಧರ ಹತ್ಯೆ ಪ್ರಕರಣ ಅತ್ಯಂತ ಖಂಡನೀಯವಾಗಿದೆ. ಪಾಕಿಸ್ತಾನದೊಂದಿಗೆ ಭಾರತ ಕೂಡಲೇ ಎಲ್ಲ ರಾಜತಾಂತ್ರಿಕ ವ್ಯವಸ್ಥೆಯನ್ನು ಕೊನೆಗೊಳಿಸಬೇಕು. ಭಾರತೀಯ ಸೈನಿಕರ ಹತ್ಯೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತ ಪ್ರಶ್ನಿಸಬೇಕೆಂದು ಆಗ್ರಹಿಸಿದರು.

ಭಾರತೀಯ ಯೋಧರ ಹತ್ಯೆ: ಖಂಡನೆ
ಗದಗ: ಜಮ್ಮು ಕಾಶ್ಮೀರದ ಪೂಂಛ ವಲಯದಲ್ಲಿ ನಡೆದಿರುವ ಐವರು ಭಾರತೀಯ ಯೋಧರ ಹತ್ಯೆಯನ್ನು ಕನ್ನಡ ಜಾಗೃತಿ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೋಕಾವಿ ಹೇಳಿದರು. ಈ ಕುರಿತು ಪ್ರಕಟಣೆ ನೀಡಿರುವ ಅವರು, 60 ವರ್ಷಗಳಿಂದ ನಮ್ಮ ದೇಶದ ಜಮ್ಮು ಕಾಶ್ಮೀರ ಪ್ರಾಂತ್ಯಗಳಲ್ಲಿ ನಡೆಯುತ್ತಿರುವ ಅಮಾಯಕ ನಾಗರಿಕರ ಮತ್ತು ಭಾರತೀಯ ಯೋಧರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯಗಳಿಂದ ಹಲವಾರು ಜನ ಸೈನಿಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಆದರೆ ಕೇಂದ್ರ ಸರ್ಕಾರ ಸೈನಿಕರ ಜೀವಕ್ಕೆ ಬೆಲೆ ಇಲ್ಲದಂತೆ ವರ್ತಿಸುತ್ತಿದೆ. ಪಾಕಿಸ್ತಾನದಿಂದ ಎಷ್ಟು ದಾಳಿಗಳೂ ನಡೆದರೂ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವ ಕೇಂದ್ರ ಸರ್ಕಾರ, ದೇಶದ ಭದ್ರತೆಯ ಹಿತಾಸಕ್ತಿಯಿಂದ ಈಗಲಾದರೂ ಮಹತ್ವದ ನಿರ್ಣಯ ಕೈಗೊಳ್ಳಬೇಕೆಂದು ಜಿಲ್ಲಾ ಉಪಾಧ್ಯಕ್ಷ ಪ್ರಭುರಾಜಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಸಂತೋಷ ಪಾಟೀಲ, ಕಾರ್ಯದರ್ಶಿ ಮಲ್ಲು ಗೊಲ್ಲರ, ವಿಜಯಕುಮಾರ ಮುದಿಯಪ್ಪನವರ ಹಾಗೂ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

ಸಮಾಲೋಚನಾ ಸಭೆ ಮಕ್ಕಳಿಗೆ ಪೂರಕ
ಶಿಗ್ಗಾಂವಿ: ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶೈಕ್ಷಣಿಕ ಸಮಾಲೋಚನಾ ಸಭೆಗಳು ಪೂರಕವಾಗಿದ್ದು, ಅದರ ಪ್ರಯೋಜನವನ್ನು ಮಕ್ಕಳಿಗೆ ಮುಟ್ಟಿಸುವ ಕಾರ್ಯ ಪ್ರಮುಖವಾಗಿದೆ ಎಂದು ತಾಲೂಕು ಶಿಕ್ಷಣ ಸಮನ್ವಯಾಧಿಕಾರಿ ಸಿ.ಪಿ. ಮೂಲಿಮನಿ ಹೇಳಿದರು. ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿಗ್ಗಾಂವಿ, ಸವಣೂರು ಹಾಗೂ ಹಾನಗಲ್ಲ ತಾಲೂಕಿನ ಉರ್ದು ಶಿಕ್ಷಣ ಸಂಯೋಜಕರ ಸಹಯೋಗದಲ್ಲಿ ನಡೆದ ಉರ್ದು ಸಮಾಲೋಚನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಶೈಕ್ಷಣಿಕ ಕುಂದು-ಕೊರತೆಗಳ ಬಗ್ಗೆ ಚರ್ಚಿಸುವ ಜೊತೆಗೆ ಅವುಗಳಿಗೆ ಪರಿಹಾರವನ್ನು ಇಂತಹ ಸಮಾಲೋಚನಾ ಸಮಾರಂಭದಲ್ಲಿ ಕಾಣಲು ಸಾಧ್ಯವಿದೆ. ಶಿಕ್ಷಕರು ಆಸಕ್ತಿ ವಹಿಸಿ ಶೈಕ್ಷಣಿಕ ಬದಲಾವಣೆ ಜತೆಗೆ ಮಕ್ಕಳ ಏಳ್ಗೆಗೆ ಸಹಕರಿಸಬೇಕು ಎಂದು ಹೇಳಿದರು. ತಾಲೂಕು ಉರ್ದು ಶಿಕ್ಷಣ ಸಂಯೋಜಕ ಎಂ.ಎಚ್. ಹೊಂಗಲ, ಉರ್ದು ಸಿಆರ್‌ಪಿ ಎಚ್.ಎಚ್. ರಟ್ಟಗೇರಿ, ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಎಂ.ಎ. ಮುಲ್ಲಾ, ಎಂ.ಎ. ಖವಾಸ ಮತ್ತಿತರರು ಉಪಸ್ಥಿತರಿದ್ದರು.

ಪತ್ರಕರ್ತ ಎನ್.ಎಸ್. ಪಾಟೀಲ್‌ಗೆ ಶ್ರದ್ಧಾಂಜಲಿ
ಶಿಗ್ಗಾಂವಿ: ತೀವ್ರ ಅನಾರೋಗ್ಯದಿಂದ ಗುರುವಾರ ನಿಧನರಾದ ಪತ್ರಕರ್ತ ಎನ್.ಎಸ್. ಪಾಟೀಲರಿಗೆ ಪಟ್ಟಣದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರು ಸಭೆ ಸೇರಿ ಶ್ರದ್ಧಾಂಜಲಿ ಸಲ್ಲಿಸಿದರು. ಹಿರಿಯ ಪತ್ರಕರ್ತ ಪಿ.ಎಮ್. ಸತ್ಯಪ್ಪನವರ ಮಾತನಾಡಿ, ಹಿರಿಯ ಪತ್ರಕರ್ತ ಎನ್.ಎಸ್. ಪಾಟೀಲ ಜತೆಗಿನ ಕೆಲ ನೆನಪುಗಳನ್ನು ಹಂಚಿಕೊಂಡರು. ವಿವಿಧ ಪತ್ರಿಕೆಯ ಜಿಲ್ಲಾ ವರದಿಗಾರರಾಗಿ, ಸ್ಥಾನಿಕ ಸಂಪಾದಕರಾಗಿ, ರಾಣಿಬೆನ್ನೂರಿನ ಜೆಎಸ್‌ಎಸ್ ಕಾಲೇಜಿನ ಉಪನ್ಯಾಸಕರಾಗಿ, ಹಾವೇರಿ ಕವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದರು. ಸಭೆ ನೇತೃತ್ವ ವಹಿಸಿದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಎಸ್. ಹಿರೇಮಠ ಮಾತನಾಡಿ, ಜಿಲ್ಲಾ ಮಟ್ಟದ ಪತ್ರಿಕೆಯೊಂದರಲ್ಲಿ ಆರಂಭದಿಂದಲೂ ಸೇವೆ ಸಲ್ಲಿಸುವ ಮೂಲಕ ಪತ್ರಿಕೆ ಬೆಳವಣಿಗೆಗೆ ಪಾಟೀಲರು ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ ಸರಳ ಸಜ್ಜನಿಕೆ ಜೀವಿಯಾಗಿದ್ದ ಪಾಟೀಲರು ಜಿಲ್ಲೆಯ ಪತ್ರಿಕಾ ಬಳಗದಲ್ಲಿ ಎನ್‌ಎಸ್ ಎಂದೆ ಖ್ಯಾತಿಯಾಗಿದ್ದರು. ಅವರು ತಮ್ಮ ಸೇವಾವೃತ್ತಿಯಲ್ಲಿ ಸಾಕಷ್ಟು ಕಿರಿಯ ಪತ್ರಕರ್ತ ಮಿತ್ರರಿಗೆ ಮಾರ್ಗದರ್ಶನ ನೀಡಿದ್ದಾರೆ. ಅವರ ಅಗಲಿಕೆ ಇಂದು ಪತ್ರಕರ್ತ ಮಿತ್ರರಿಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದರು. ಪತ್ರಕರ್ತರಾದ ಎಂ.ವಿ. ಗಾಡದ, ಮಹೇಶ ಹೆಸರೂರ, ವಿನಯ ಹುರಳಿಕುಪ್ಪಿ, ಬಸವರಾಜ ಹೊನ್ನಣ್ಣವರ, ಪರಮೇಶ ಲಮಾಣಿ, ರವಿ ಉಡುಪಿ, ವಿಶ್ವನಾಥ ಬಂಡಿವಡ್ಡರ, ಎನ್.ಡಿ. ಮರಿಗೌಡ್ರ, ರಾಮಕೃಷ್ಣ ಆಲದಕಟ್ಟಿ, ಎಸ್.ಬಿ. ಗೌಡರ, ಗೌಡಪ್ಪ ಬನ್ನಿ ಸದಾನಂದ ಹಿರೇಮಠ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement