ಮಾಧ್ಯಮಗಳಿಂದ ಬದುಕು ವಿರೂಪ
ಹಾವೇರಿ: ದೂರದರ್ಶನ ಮತ್ತು ಸಿನೆಮಾ ಮಾಧ್ಯಮಗಳು ನಮ್ಮ ಸಾಂಸ್ಕೃತಿಕ ಬದುಕನ್ನು ವಿಕಾಸಗೊಳಿಸುವ ಬದಲು ವಿರೂಪಗೊಳಿಸಿವೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಹನುಮಂತಗೌಡ ಗೊಲ್ಲರ ಹೇಳಿದರು.
ಇಲ್ಲಿಗೆ ಸಮೀಪದ ಹಿರೇಕುರುವತ್ತಿಯ ಚಕ್ಕಿ ಚನ್ನಪ್ಪ ಪ್ರೌಢಶಾಲೆಯಲ್ಲಿ ನಂದಿ ಪ್ರಕಾಶನ ಹಾಗೂ ಮಕ್ಕಳ ಸಾಹಿತ್ಯ ವೇದಿಕೆ ಜಂಟಿಯಾಗಿ ಸಂಘಟಿಸಿದ್ದ ಹಿರಿಯ ಸಾಹಿತಿ ಗಂಗಾಧರ ನಂದಿಯವರ 70ನೇ ವಸಂತೋತ್ಸವದ ಅಂಗವಾಗಿ ಗಮನ ವಚನೋತ್ಸವದಲ್ಲಿ ಅವರು ಮಾತನಾಡಿದರು.
ನಮ್ಮ ಬದುಕಿಗೆ ಏನೆಲ್ಲ ಸೌಲಭ್ಯಗಳಿದ್ದರೂ ಸಾಹಿತ್ಯ ಸೌಲಭ್ಯವಿದ್ದಂತೆ ಆಗುವುದಿಲ್ಲ. ಉಳಿದ ಸೌಲಭ್ಯಗಳಿಂದ ದೊರಕುವ ಸುಖವೇ ಬೇರೆ, ಸಾಹಿತ್ಯದ ಸುಖವೇ ಬೇರೆ. ವಿದ್ಯಾರ್ಥಿಗಳು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕು ಎಂದರು.
ನಿವೃತ್ತ ಮುಖ್ಯಧ್ಯಾಪಕ ಎಂ.ಬಿ. ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಚನ ಸಾಹಿತ್ಯ ಇಂದಿಗೂ, ಎಂದೆಂದಿಗೂ ಸರ್ವಕಾಲಿಕವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಫ.ಗು. ಹಳಕಟ್ಟಿ ಪ್ರಶಸ್ತಿ ಪುರಸ್ಕೃತರಾದ ಬಸಮ್ಮ ಹಳಕೊಪ್ಪ ಹಾಗೂ ಮಹದೇವ ಮೈಲಾರ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರನ್ನು ಸುಲೋಚನಾ ನಂದಿ ದಂಪತಿಗಳು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ. ಜಿ.ಶಿವಪ್ಪ ಅಧ್ಯಕ್ಷತೆ ವಹಿಸಿ ವಚನಗಳನ್ನು ಹಾಡಿದ ಮಕ್ಕಳಿಗೆ ಬಹುಮಾನ ವಿತರಿಸಿದರು. ಮುಖ್ಯ ಶಿಕ್ಷಕ ನಾಗರಾಜ ಪಾಟೀಲ, ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಡಾ. ಎ.ಬಿ. ಚರಂತಿಮಠ, ಗಿರಿಜಮ್ಮ ಶಿವಪ್ಪ, ಶಿವಣ್ಣ ಬಣಕಾರ, ಕಮಲಾಕರ ಹೆಗಡೆ, ವಾಗೀಶ ಹೂಗಾರ ವೇದಿಕೆಯಲ್ಲಿದ್ದರು.
ಪಾರ್ವತಿ, ಪೂಜಾ ಪ್ರಾರ್ಥನೆ ಗೀತೆ ಹಾಡಿದರು. ಬಿ. ಮಂಜುನಾಥ ಸ್ವಾಗತಿಸಿದರು. ಸುರೇಶ ಕಾರ್ಯಕ್ರಮ ನಿರೂಪಿಸಿದರು. ಜಿ.ಕೊಟ್ರೇಶಪ್ಪ ವಂದಿಸಿದರು.