ಹದಗೆಟ್ಟ ರಸ್ತೆ: ಸಾರ್ವಜನಿಕರ ಪರದಾಟ
ಹಾನಗಲ್ಲ: ಕಾಮಗಾರಿ ವಿಳಂಬದಿಂದಾಗಿ ಹಾನಗಲ್ಲ ನಗರದ ಮುಖ್ಯ ಬೀದಿಯಾದ ತಡಸಗೊಂದಿ ರಸ್ತೆ ವಾಹನ ಓಡಾಟಕ್ಕೆ ತೀವ್ರ ಹದಗೆಟ್ಟಿದ್ದು, ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ಮುಚ್ಚಲು ಈವರೆಗೂ ಕ್ರಮ ಜರುಗಿಸದೇ ಸಾರ್ವಜನಿಕರು ಶಪಿಸುವಂತಾಗಿದೆ.
ತಡಸದಿಂದ ಹಾನಗಲ್ಲವರೆಗೆ ಲೋಕೋಪಯೋಗಿ ಇಲಾಖೆಯ ರಸ್ತೆ ಕಾಮಗಾರಿಯನ್ನು ಇದೇ ಇಲಾಖೆಯ ಕೆಶಿಪ್‌ಗೆ ವಹಿಸಲಾಗಿದೆ. ಆದರೆ, ಕಳೆದ ಒಂದು ವರ್ಷಕ್ಕೂ ಮೊದಲೆ ಕಾಮಗಾರಿ ಆರಂಭವಾಗಿ ನಿಂತು ಹೋಯಿತು. ಇದೇ ಕಾಮಗಾರಿಗೆ ಸಂಬಂಧಿಸಿದ ಹಾನಗಲ್ಲ ನಗರದಲ್ಲಿರುವ ಆನೆಕೆರೆಯಿಂದ ಬಸ್ ಡಿಪೋ ಕ್ರಾಸ್‌ವರೆಗಿನ ಎರಡು ಕಿ.ಮೀ ರಸ್ತೆ ವಾಹನ ಹಾಗೂ ಜನರ ಓಡಾಟಕ್ಕೆ ತೀವ್ರ ಅನಾನುಕೂಲವಾಗಿದೆ.
ಈ ರಸ್ತೆ ಅವಲಂಬಿಸಿಯೇ ಹಲವು ಶಾಲೆ, ಕಾಲೇಜುಗಳು, ನ್ಯಾಯಾಲಯ, ಬಸ್ ನಿಲ್ದಾಣ, ಬ್ಯಾಂಕುಗಳು ಇರುವುದಲ್ಲದೆ ಕಂದಾಯ ಇಲಾಖೆ, ಎಲ್ಲ ಇಲಾಖೆಗಳ ಕಚೇರಿಗಳಿಗೆ ಹೋಗುವ, ಬರುವ ಎಲ್ಲ ಸಾರ್ವಜನಿಕರಿಗೆ ಈ ರಸ್ತೆಯೇ ಪ್ರಮುಖ ರಸ್ತೆಯಾಗಿದೆ. ಒಂದು ತಿಂಗಳಿಂದ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಭಾರಿ ಪ್ರಮಾಣದ ಗುಂಡಿಗಳಾಗಿದ್ದು, ರಸ್ತೆ ಸಂಚಾರಕ್ಕೆ ಅಡೆತಡೆಯಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ರಸ್ತೆ ರಿಪೇರಿ ಕಾರ್ಯ ಮಾಡಲು ಸಾಧ್ಯವಿಲ್ಲ. ಕೆಸಿಪ್‌ಗೆ ರಸ್ತೆಯ ಕಾಮಗಾರಿ ಮಾಡಲು ಜವಾಬ್ದಾರಿ ವಹಿಸಿರುವುದರಿಂದ ಕೆಶಿಪ್‌ನವರೇ ಇದರ ದುರಸ್ತಿ ಮಾಡಬೇಕು. ಈ ವಿಷಯವನ್ನು ಕೆಸಿಪ್ ಗಮನಕ್ಕೂ ತರಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.
ಅಂದಾಜು ಎರಡು ಕಿ.ಮೀನಷ್ಟು ಉದ್ದವಿರುವ ಈ ರಸ್ತೆ ದುರಸ್ತಿಯಂತೂ ತೀರ ಅತ್ಯಗತ್ಯ. ಇದರೊಂದಿಗೆ ಬಸ್ ನಿಲ್ದಾಣ ಕಾಮಗಾರಿಯೂ ಸ್ಥಗಿತವಾಗಿರುವುದರಿಂದ ಬಸ್‌ಗಳು ಹಲವು ಬಾರಿ ರಸ್ತೆಯಲ್ಲಿಯೇ ನಿಲ್ಲುವ ಸ್ಥಿತಿ ಇದೆ. ಅಲ್ಲದೆ ಪಾದಚಾರಿ ಹಾದಿಯಲ್ಲಿ ಸಣ್ಣ-ಪುಟ್ಟ ವಸ್ತುಗಳ ವ್ಯಾಪಾರ ಆರಂಭವಾಗಿರುವುದರಿಂದ ಪಾದಚಾರಿಗಳ ಓಡಾಟ ಇನ್ನೂ ಕಷ್ಟಕರವಾಗಿದೆ. ಹಲವು ಬಾರಿ ಸಾರ್ವಜನಿಕರು ಕೆಸಿಪ್ ಅಧಿಕಾರಿಗಳಿಗೆ ಮಾಡಿದ ಮನವಿಗಳು ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೇ ರಸ್ತೆಯ ಗುತ್ತಿಗೆದಾರರು ದುರಸ್ತಿಗೆ ಮುಂದಾಗುತ್ತಿಲ್ಲ.
ಕೂಡಲೆ ತಡಸ-ಹಾನಗಲ್ಲ ರಸ್ತೆ ಕಾಮಗಾರಿ ಆರಂಭವಾಗಬೇಕು. ಹಾನಗಲ್ಲ ನಗರದಲ್ಲಿರುವ ಈ ಎರಡು ಕಿ.ಮೀ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ, ವಾಹನ ಓಡಾಟಕ್ಕೆ ಯೋಗ್ಯ ರಸ್ತೆಯನ್ನಾಗಿಸಬೇಕು ಎಂಬುದು ಸಾರ್ವಜನಿಕರ ಅಳಲಾಗಿದೆ.