ಧಾರ್ಮಿಕ ಆಚರಣೆಗಳಿಂದ ನೆಮ್ಮದಿ: ಖಾದ್ರಿ
ಬ್ಯಾಡಗಿ: ಪಟ್ಟಣದ ಮುಸ್ಲಿಂ ಬಾಂಧವರು ರಂಜಾನ್ ಹಬ್ಬದ ಅಂಗವಾಗಿ ಸ್ಥಳೀಯ ಈದ್ಗಾ ಮೈದಾನದಲ್ಲಿ ಶುಕ್ರವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇಲ್ಲಿನ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ನೇತೃತ್ವದಲ್ಲಿ ಸ್ಥಳೀಯ ಚಾವಡಿ ರಸ್ತೆಯಲ್ಲಿರುವ ಜಾಮಿಯಾ ಮಸ್ಜಿದ್‌ನಿಂದ ಆರಂಭವಾದ ಮೆರವಣಿಗೆ ಮುಖ್ಯರಸ್ತೆ, ಹಂಸಭಾವಿ ರಸ್ತೆ, ರಟ್ಟಿಹಳ್ಳಿ ರಸ್ತೆಯ ಮೂಲಕ ಪಟ್ಟಣದ ಆಶ್ರಯ ಬಡಾವಣೆ ಸಮೀಪದ ಈದ್ಗಾ ಮೈದಾನದ ವರೆಗೆ ಸಾಗಿತು.
ಸಾವಿರಾರು ಮುಸ್ಲಿಂ ಬಾಂಧವರು ಅಲ್ಲಾ ಹಾಗೂ ಮಹ್ಮದ್ ಪೈಗಂಬರ ಕುರಿತು ಘೋಷಣೆ ಹಾಕುತ್ತಾ ಮೆರವಣಿಗೆ ಯುದ್ದಕ್ಕೂ ಸಾಗಿದರು. ಸುಮಾರು ತಾಸಿಗೂ ಹೆಚ್ಚು ಕಾಲ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮೌಲಾನಾ ಆಶ್ರಫ್ ಉಲ್ ಖಾದ್ರಿ ಅವರಿಂದ ಅಜಾ ನೆರವೇರಿತು. ಬಳಿಕ ಮುಸ್ಲಿಂ ಬಾಂಧವರು ಪರಸ್ಪರ ಅಪ್ಪಿಕೊಳ್ಳುವ ಮೂಲಕ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಿದರು. 30 ದಿನಗಳಿಂದ ನಡೆಸುತ್ತಿದ್ದ ಉಪವಾಸ ವ್ರತ ಈ ಮೂಲಕ ಮುಕ್ತಾಯಗೊಂಡಿತು.
ಮೌಲಾನಾ ಆಶ್ರಫ್ ಉಲ್ ಖಾದ್ರಿ ಮಾತನಾಡಿ, ಪ್ರತಿದಿನ ಖುರಾನ್ ಧರ್ಮಗ್ರಂಥವನ್ನು ಪಠಣ ಮಾಡುವುದರಿಂದ ಮನಸ್ಸಿನಲ್ಲಿರುವ ಕಲ್ಮಶಗಳನ್ನು ದೂರ ಮಾಡಿಕೊಳ್ಳಬಹುದು. ಹಬ್ಬದ ಆಚರಣೆಗಳು ಜನರನ್ನು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸುವ ಮೂಲಕ ಮಾನಸಿಕ ನೆಮ್ಮದಿ ನೀಡುತ್ತವೆ. ಪ್ರತಿಯೊಬ್ಬರೂ ಶಾಂತಿ, ನೆಮ್ಮದಿ, ಸಮೃದ್ಧಿ ಹಾಗೂ ಸಹೋದರತೆಯ ತತ್ವದಡಿ ಬದುಕು ಸಾಗಿಸುವಂತೆ ಅಲ್ಲಾನನ್ನು ಮನದಲ್ಲಿ ನೆನೆದು ಸಾಮೂಹಿಕ ಪ್ರಾರ್ಥನೆ ಮಾಡುವಂತೆ ಸಲಹೆ ನೀಡಿದರು.
ದೇವರ ಮೇಲೆ ನಂಬಿಕೆಯಿರಲಿ
ಶಾಸಕ ಬಸವರಾಜ ಶಿವಣ್ಣನವರ ಅವರು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯ ಕೋರಿದರು. ಧಾರ್ಮಿಕ ಆಚರಣೆಯಲ್ಲಿ ತೊಡಗುವುದರಿಂದ ಏಕಾಗ್ರತೆ ಮೂಡಿಸಲು ಸಾಧ್ಯವಾಗುತ್ತದೆ. ಉಪವಾಸ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದರು.
ಎಲ್ಲ ಧರ್ಮದ ಉದ್ದೇಶಗಳು ಒಂದೇ ಅಗಿದ್ದು, ಯಾವುದೇ ಫಲಾಪೇಕ್ಷೆ ಇಲ್ಲದೆ ಲೋಕಕಲ್ಯಾಣಕ್ಕಾಗಿ ಎಲ್ಲರೂ ಸಹಬಾಳ್ವೆ ನಡೆಸಬೇಕಾಗಿದೆ. ಆದರೆ ಇಲ್ಲದ ವಿಚಾರಗಳಿಗೆ ಪ್ರಚೋದನೆಗೆ ಒಳಗಾಗುವ ಕೆಲವು ಯುವಕರು ಮಾಡುವ ಕ್ಷುಲ್ಲಕ ತಪ್ಪಿನಿಂದಾಗಿ ಸಮಾಜದಲ್ಲಿ ಸಾಮರಸ್ಯ ಹಾಳಾಗುತ್ತಿದೆ. ಅಂಥವರು ಕಾನೂನಿನ ಕಣ್ಣಿಗೆ ಮಣ್ಣೆರಚಿದರೂ ದೇವರು ನೀಡುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ಎಂ.ಆರ್. ಕಳ್ಳಾಳ, ಹುಸೇನ್ ಸಾಬ್ ದೊಡ್ಮನಿ, ಬಾಬುಸಾಬ್ ಬಡಿಗೇರ, ರಾಜಾಭಕ್ಷ ಕೂರಗುಂದ, ಆರ್.ಜಿ. ಕಳ್ಯಾಳ, ಮುನಾಫ್ ಸಾಬ್ ಎರೆಶೀಮಿ, ಯೂಸುಫ್ ಸಾಬ್ ಬೇಪಾರಿ, ನಿಸಾರ್ ಅಹ್ಮದ ಹಾವನೂರ, ಡಾ. ಎ.ಎಂ. ಸೌದಾಗರ, ಜಿನ್ನಾ ಹಲಗೇರಿ, ಅಜೀಜ್ ಬಿಜಾಪುರಿ, ಎಂ.ಐ. ಮಲ್ಲೂರ, ಇಮಾಮ್ ಹುಸೇನ್ ಮುಲ್ಲಾ, ಹಾಜಿ ಶಾನವಾಜ್ ಕಲ್ಮನಿ ಇದ್ದರು.