ಯಾತ್ರಿಕರ ರಕ್ಷಣೆ ಮರೆತ ರೇಲ್ವೆ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 9
ಜಿಲ್ಲೆಯ ರೇಲ್ವೆ ನಿಲ್ದಾಣಗಳಲ್ಲಿ ಸಂಭವಿಸುವ ಆಕಸ್ಮಿಕ ರೇಲ್ವೆ ಅಪಘಾತದಲ್ಲಿ ಸಿಲುಕಿ ಹಾಕಿಕೊಂಡು ಜೀವನ್ಮರಣ ಮಧ್ಯೆ ಹೋರಾಟ ನಡೆಸುವ ವ್ಯಕ್ತಿಗಳ ರಕ್ಷಣೆಗೆ ಧಾವಿಸಲು ಎಷ್ಟು ಜನ ರೇಲ್ವೆ ಪೊಲೀಸ್ ಸಿಬ್ಬಂದಿ ಇದ್ದಾರೆ ಎಂಬುದು ಗೊತ್ತೇ?
ಕೇವಲ ಇಬ್ಬರು! ಹುಬ್ಬೇರಿಸಬೇಡಿ, ಈ ಮಾತು ಸತ್ಯ!
ಜಿಲ್ಲೆಯ ಯಾವುದೇ ರೇಲ್ವೆ ನಿಲ್ದಾಣದಲ್ಲಿ ಸಂಭವಿಸುವ ಆಕಸ್ಮಿಕ ಅಪಘಾತದಲ್ಲಿ ಸಿಲುಕಿ ಮಾರಣಾಂತಿಕ ಗಾಯಗೊಳ್ಳುವ ವ್ಯಕ್ತಿಗಳನ್ನು ಈ ಇಬ್ಬರು ಪೇದೆಗಳೇ ಆಸ್ಪತ್ರೆಗೆ ಸಾಗಿಸಬೇಕು. ಇದರಿಂದಾಗಿ ಈ ಇಬ್ಬರು ಸಿಬ್ಬಂದಿ ಎಡೆಬಿಡದೆ ಕರ್ತವ್ಯ ನಿರ್ವಹಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.
ಹತ್ತಾರು ರೈಲುಗಳು
ನಿತ್ಯವೂ ಹಗಲು-ರಾತ್ರಿ ಎನ್ನದೆ ಹಾವೇರಿ ಜಿಲ್ಲೆಯ ರೇಲ್ವೆ ನಿಲ್ದಾಣಗಳಿಂದ ಗೂಡ್ಸ್ ಹಾಗೂ ಪ್ರಯಾಣಿಕರ ಹತ್ತಾರು ರೈಲುಗಳು ಸಂಚರಿಸುತ್ತಿರುತ್ತವೆ. ಸಾವಿರಾರು ಜನರು ರೈಲುಗಳಲ್ಲಿ ಪ್ರಯಾಣಿಸುತ್ತಿರುತ್ತಾರೆ. ಅವರ ಜೀವ ರಕ್ಷಣೆಯ ಮಹತ್ತರ ಜವಾಬ್ದಾರಿ ವಹಿಸುವಲ್ಲಿ ರೇಲ್ವೆ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂಬ ಸಾಮಾನ್ಯ ಆರೋಪ ವ್ಯಾಪಕವಾಗಿ ಕೇಳಿ ಬರಲಾರಂಭಿಸಿದೆ.
ಮತ್ತಿತರ ಪ್ರಕರಣಗಳು...
ರೇಲ್ವೆ ನಿಲ್ದಾಣದಲ್ಲಿ ಆಕಸ್ಮಿಕ ಸಂಭವಿಸುವ ಅಪಘಾತಗಳು ಹಾಗೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳುವವರ ಉದಾಹರಣೆಗಳು ಯಥೇಚ್ಛವಾಗಿ ಕಂಡು ಬರುತ್ತವೆ. ಆಗೆಲ್ಲ ಗಾಯಾಳುಗಳನ್ನು ಹಾಗೂ ಶವಗಳನ್ನು ಆಸ್ಪತ್ರೆಗಳಿಗೆ ಸಾಗಿಸಿ ಪ್ರಕರಣ ದಾಖಲಿಸಿಕೊಳ್ಳುವ ಜವಾಬ್ದಾರಿಯೂ ರೇಲ್ವೆ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಬ್ಬರು ಪೇದೆಗಳದ್ದೇ ಆಗಿದೆ.
ಅನಾಮಧೇಯ ಶವಗಳ ಪರಿವಾರದವರನ್ನು ಹುಡುಕುವ ಪ್ರಯತ್ನವನ್ನೂ ಅವರೇ ಮಾಡಬೇಕು. ಜಿಲ್ಲೆಯ ಐದು ತಾಲೂಕುಗಳಲ್ಲಿರುವ ನಿಲ್ದಾಣಗಳಲ್ಲಿ ಇಂತಹ ಅನಾಹುತಗಳು ಆಗಾಗ ಆಗುತ್ತವೆ. ಈ ಪ್ರಕರಣಗಳನ್ನೇ ನಿರ್ವಹಿಸುವಲ್ಲಿ ಸಾಕುಬೇಕಾಗಿ ಹೋಗುತ್ತಿದೆ ಎಂದು ಪೇದೆಯೊಬ್ಬರು ಕನ್ನಡಪ್ರಭದೊಂದಿಗೆ ಮಾತನಾಡಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ರಾಣಿಬೆನ್ನೂರಲ್ಲಿ...
ರೇಲ್ವೆ ನಿಲ್ದಾಣಗಳಲ್ಲಿ ಸಂಭವಿಸುವ ಅಪಘಾತ ಮುಂತಾದ ಅನಾಹುತಗಳ ನಿರ್ವಹಣೆ ಮಾಡಲು ನಿಯೋಜಿಸಲಾಗಿರುವ ರೇಲ್ವೆ ಪೇದೆಗಳಿಬ್ಬರು ರಾಣೆಬೆನ್ನೂರನಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಎಲ್ಲಿಯಾದರೂ ಅಪಘಾತಗಳು ಸಂಭವಿಸಿದೆ ಎಂಬ ಸುದ್ದಿ ತಿಳಿದ ಮೇಲೆ ಈ ಸಿಬ್ಬಂದಿ ಆ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ರಕ್ಷಿಸಬೇಕಾಗುತ್ತದೆ.
ಮಾರಣಾಂತಿಕ ಗಾಯಗೊಂಡ ವ್ಯಕ್ತಿಗಳಿಗೆ ಈ ಪೇದೆಗಳ ತಕ್ಷಣ ಸಹಾಯ ಲಭ್ಯವಾಗುವುದಿಲ್ಲ. ಈ ಕಾರಣಕ್ಕಾಗಿಯೇ ರೇಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಆಕಸ್ಮಿಕ ಅಪಘಾತದಲ್ಲಿ ಸಿಲುಕಿ ಮಾರಣಾಂತಿಕ ಗಾಯಗೊಂಡಿರುವ ಅನೇಕರು ತಕ್ಷಣಕ್ಕೆ ಚಿಕಿತ್ಸೆ ಹಾಗೂ ಸಹಾಯ ಲಭ್ಯವಾಗದೆ ಸಾವನ್ನಪ್ಪಿರುವ ಉದಾಹರಣೆಗಳು ಇವೆ.
ಹುಬ್ಬಳ್ಳಿಯಿಂದ...
ಹಾವೇರಿ ಜಿಲ್ಲೆಯ ಯಾವುದೇ ನಿಲ್ದಾಣದಲ್ಲಿ ಆಕಸ್ಮಿಕವಾಗಿ ದೊಡ್ಡ ಪ್ರಮಾಣದ ಅಪಘಾತ ಸಂಭವಿಸಿದಾಗ, ಗಾಯಾಳುಗಳಿಗೆ ಆಸ್ಪತ್ರೆಗೆ ಸಾಗಿಸಲು ಅಗತ್ಯ ರೇಲ್ವೆ ಪೊಲೀಸ್ ಸಿಬ್ಬಂದಿ ಬೇಕಾದಲ್ಲಿ ಹುಬ್ಬಳ್ಳಿಯಿಂದ ಆಗಮಿಸಬೇಕು. ಅಲ್ಲಿಯವರೆಗೂ ಗುಂಡಿಗೆ ಇದ್ದವರು ಮಾತ್ರ ಬದುಕುಳಿಯುತ್ತಾರೆ ಎಂದು ಬೇರೆಯಾಗಿ ಹೇಳಬೇಕಿಲ್ಲ.
ಆಶ್ಚರ್ಯಕರ ಸಂಗತಿ ಎಂದರೆ, ಮಾರಣಾಂತಿಕ ಅಥವಾ ತೀವ್ರವಾಗಿ ಗಾಯಗೊಳ್ಳುವ ವ್ಯಕ್ತಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ಸಾಗಿಸಲು ಜಿಲ್ಲೆಯಲ್ಲಿ ಅಂಬ್ಯುಲೆನ್ಸ್ ಸೇವೆಯೂ ಇಲ್ಲ! ಅಪಘಾತ ಮಾತ್ರವಲ್ಲದೆ ರೈಲಿನಲ್ಲಿ ಪ್ರಯಾಣಿಸುವಾಗ ಆಕಸ್ಮಿಕವಾಗಿ ಹೃದಯಾಘಾತ ಸಂಭವಿಸಿದಲ್ಲಿ ಅಂತಹ ವ್ಯಕ್ತಿಗೆ ತಕ್ಷಣಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಲು ಸಾಧ್ಯವೇ ಇಲ್ಲ.
ವಿಲಿವಿಲಿ ಒದ್ದಾಡಿದ್ದ...
ಇತ್ತೀಚಿಗಷ್ಟೇ ಹಾವೇರಿಯ ಜಿಲ್ಲಾ ಕೇಂದ್ರದ ರೇಲ್ವೆ ನಿಲ್ದಾಣದಲ್ಲಿ ಚಲಿಸುತ್ತಿರುವ ರೈಲಿನಡಿ ಆಕಸ್ಮಿಕವಾಗಿ ಸಿಲುಕಿದ್ದ ಕೂಲಿ ಕಾರ್ಮಿಕ ವಿನಾಯಕ ಮಹೇಂದ್ರಕರ್ ಎಂಬುವನ ಬಲಗೈ ಹಾಗೂ ಬಲಗಾಲು ತುಂಡಾಗಿ ರೈಲು ಹಳ್ಳಿಗಳ ಮಧ್ಯೆ ಎರಡೂವರೆ ತಾಸಿಗೂ ಹೆಚ್ಚು ಕಾಲ ವಿಲಿವಿಲಿ ಒದಾಡುತ್ತಿದ್ದರೂ ರೇಲ್ವೆ ಪೊಲೀಸ್ ಅಥವಾ ಇಲಾಖೆ ಸಿಬ್ಬಂದಿ ರಕ್ಷಣೆಗೆ ಆಗಮಿಸಿರಲಿಲ್ಲ. ರಕ್ಷಣೆ ನೀಡಲು ಸಾರ್ವಜನಿಕರೂ ಮುಂದಾಗದೆ ಆ ಗಾಯಾಳು ಒದ್ದಾಡುತ್ತಿರುವ ದೃಶ್ವವನ್ನು ಮೊಬೈಲ್ಗಳಲ್ಲಿ ಸೆರೆ ಹಿಡಿಯಲು ಮುಂದಾಗಿದ್ದು ವಿಚಿತ್ರವಾದರೂ ಸತ್ಯ.
ಪ್ರಯಾಣಿಕರಿಗೆ ಸುರಕ್ಷಿತ ಸೇವೆ ಒದಗಿಸಿಕೊಡುವುದು ರೇಲ್ವೆ ಇಲಾಖೆಯ ಆದ್ಯ ಕರ್ತವ್ಯ. ಹಾವೇರಿ ಜಿಲ್ಲಾ ಕೇಂದ್ರವಾಗಿ ದಶಕಗಳೇ ಸಂದಿವೆ. ಆದಾಗ್ಯೂ, ಇಲ್ಲಿ ಪ್ರತ್ಯೇಕ ರೇಲ್ವೆ ಪೊಲೀಸ್ ಠಾಣೆ ಈವರೆಗೂ ಇಲ್ಲದಿರುವುದು ಜನಪ್ರತಿನಿಧಿಗಳಿಗೆ ಹಾಗೂ ರೇಲ್ವೆ ಇಲಾಖೆ ಶ್ರೀಸಾಮಾನ್ಯರ ಬಗ್ಗೆ ಹೊಂದಿರುವ ಕಾಳಜಿಗೆ ಕನ್ನಡಿ ಹಿಡಿದಂತಿದೆ.
ಈಗಲಾದರೂ ಜಿಲ್ಲೆಯ ಶಾಸಕರು ಹಾಗೂ ಸಂಸದರು ಹಾವೇರಿಯಲ್ಲಿ ಪ್ರತ್ಯೇಕ ರೇಲ್ವೆ ಪೊಲೀಸ್ ಠಾಣೆ ಸ್ಥಾಪನೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವರೇ?
-ಬಿ.ಕೆ. ಮಹೇಂದ್ರ