ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ವಿಶ್ವಕರ್ಮ ಮಂಡಳಿ ಸ್ಥಾಪನೆ: ಸ್ವಾಗತ

Vishwanath S
Updated On : 11 Aug 2013, 11:54 am

ಶಿಗ್ಗಾಂವಿ: ವಿಶ್ವಕರ್ಮ ಸಮಾಜ ಅಭಿವೃದ್ಧಿ ನಿಗಮ ಮಂಡಳಿಯನ್ನು ಮಾಡಲು ಶ್ರಮಿಸಿದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜಾಧ್ಯಕ್ಷ ಕೆ.ಪಿ. ನಂಜುಂಡಿಯವರ ಶ್ರಮ ಸಾರ್ಥಕವಾಗಿದೆ ಎಂದು ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಕಾಳಪ್ಪ ಬಡಿಗೇರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ವಿಶ್ವಕರ್ಮ ಸಮಾಜಕ್ಕಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ ಮಂಡಳಿಯನ್ನು ಮಂಜೂರಾತಿ ಮಾಡಿಸುವಲ್ಲಿ ಅವರ ಪರಿಶ್ರಮ ಸಾಕಷ್ಟಿದೆ. ಸಮಾಜದಲ್ಲಿ ವಿವಿಧ ವೃತ್ತಿಗಳನ್ನು ನಿರ್ವಹಿಸುತ್ತಿರುವ ವಿಶ್ವಕರ್ಮರಲ್ಲಿ ಸಾಕಷ್ಟು ಬಡವರಿದ್ದು, ಸಮಾಜದ ಅಭಿವೃದ್ಧಿಗೆ ನಿಗಮ ರಚಿಸಿದ ಸರ್ಕಾರದ ನಿರ್ಧಾರವೂ ಸ್ವಾಗತಾರ್ಹ ಎಂದು ನುಡಿದರು. ಸಮಾಜದ ತಾಲೂಕು ಉಪಾಧ್ಯಕ್ಷ ನಾರಾಯಣಪ್ಪ ಬಡಿಗೇರ, ಶ್ರೀಶೈಲ ಅರ್ಕಸಾಲಿ, ಸಾನಂದ ಕಮ್ಮಾರ, ವೀರಭದ್ರಪ್ಪ ಕಮ್ಮಾರ, ಮೈಲಾರೆಪ್ಪ ಕಮ್ಮಾರ, ಪ್ರಕಾಶ ಬಡಿಗೇರ, ಮೌನೇಶ ಕಮ್ಮಾರ, ದೇವಿಂದ್ರ ಕಮ್ಮಾರ ಉಪಸ್ಥಿತರಿದ್ದರು.
ಚುಡಾವಣೆ ಪ್ರಶ್ನಿಸಿದ್ದಕ್ಕೆ ಹಲ್ಲೆ: ಇಬ್ಬರಿಗೆ ಗಾಯ
ಹಾವೇರಿ: ಹುಡುಗಿಯರನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ ಯುವಕರ ಮೇಲೆ ಹಲ್ಲೆ ಮಾಡಿ, ಇಬ್ಬರು ಗಾಯಗೊಂಡ ಘಟನೆ ನಗರದ ಕೊರವರ ಓಣಿ, ಅಕ್ಕಮಹಾದೇವಿ ಹೊಂಡದ ಬಳಿ ಶನಿವಾರ ಸಂಜೆ ನಡೆದಿದೆ. ಕೊರವರ ಓಣಿಯ ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಅಕ್ಕಮಹಾದೇವಿ ಹೊಂಡದಲ್ಲಿ ನಿತ್ಯ ಬಟ್ಟೆ ತೊಳೆಯುವುದು ರೂಢಿ. ಇಲ್ಲಿಗೆ ಬರುತ್ತಿದ್ದ ಯುವಕರ ಗುಂಪೊಂದು ಅವರನ್ನು ಚುಡಾಯಿಸಿ, ಕೀಟಲೆ ಕೊಡುತ್ತಿತ್ತು. ಇದರಿಂದ ಬೇಸತ್ತ ಮಹಿಳೆಯರು ತಮ್ಮ ಓಣಿಯ ಜನರ ಬಳಿ ಹೇಳಿಕೊಂಡಿದ್ದರು. ಶನಿವಾರವೂ ಅವರು ಬಟ್ಟೆ ಒಗೆಯಲು ಬಂದಾಗ ಯುವಕರ ಗುಂಪು ಚುಡಾಯಿಸಲು ಆರಂಭಿಸಿತು. ಇದನ್ನು ಓಣಿಯ ಮೂವರು ಪ್ರಶ್ನಿಸಿದರು. ಆಗ ಕುಪಿತಗೊಂಡ ಗುಂಪು ಮೂವರ ಮೇಲೂ ಹಲ್ಲೆ ನಡೆಸಿತು. ಅಲ್ಲಿದ್ದ ಎರಡು ಬೈಕ್‌ಗಳನ್ನೂ ಕೆಡವಿ ಹಾನಿ ಮಾಡಿತು. ಘಟನೆಯಲ್ಲಿ ಇಬ್ಬರು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನೊಂದು ಮೂಲದ ಪ್ರಕಾರ, ಈ ಪರಿಸರದಲ್ಲಿ ಒಂದು ಕಾಯಂ ಇಸ್ಪೀಟ್ ಅಡ್ಡೆ ಇದೆ. ಇಲ್ಲಿಗೆ ಜೂಜಾಡಲು ಬರುವ ಯುವಕರ ಗುಂಪು ಹುಡುಗಿಯರನ್ನು ಚುಡಾಯಿಸುವುದನ್ನೇ ಕಾಯಕವನ್ನಾಗಿ ಮಾಡಿಕೊಂಡಿತ್ತು. ಇದರಿಂದ ಬೇಸತ್ತು ಪ್ರಶ್ನಿಸಿದ್ದೇ ಈ ಘರ್ಷಣೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಹಾವೇರಿ ಶಹರ ಠಾಣೆ ಸಿಪಿಐ ಪಂಪಾಪತಿ ಸಿಬ್ಬಂದಿಯೊಂದಿಗೆ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಈ ಸಂಬಂಧ ಇನ್ನೂ ಪ್ರಕರಣ ದಾಖಲಾಗಿಲ್ಲ.
20ರಿಂದ ಮಡಿವಾಳ ಮಾಚಿದೇವ ಉತ್ಸವ
ರಾಣಿಬೆನ್ನೂರು: ತಾಲೂಕು ಅಗಸರ ಸಂಘ, ಅಗಸರ ಮಠ ಟ್ರಸ್ಟ್ ಕಮಿಟಿ, ಮಡಿವಾಳೇಶ್ವರ ಯುವಕ ಸಂಘ ಹಾಗೂ ಮಾಚಿದೇವ ಉತ್ಸವ ಸಮಿತಿ ಆಶ್ರಯದಲ್ಲಿ ಆ. 20 ಹಾಗೂ 21ರಂದು ವೀರಘಂಟಿ ಮಡಿವಾಳ ಮಾಚಿದೇವರ ಹಾಗೂ ಕಾಶಿ ವಿಶ್ವನಾಥ, ಗುರು ಗೋವಿಂದಾನಂದ ಮತ್ತು ಬ್ರಹ್ಮಾನಂದ ಸ್ವಾಮಿಗಳ 16ನೇ ವರ್ಷದ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿರುವುದಾಗಿ ಪ್ರಕಟಣೆ ತಿಳಿಸಿದೆ. ಆ. 20ರಂದು ಬೆಳಗ್ಗೆ ನಗರದ ವೀಣಾ ಚಿತ್ರ ಮಂದಿರದ ಹತ್ತಿರವಿರುವ ಅಗಸರ ಮಠದಲ್ಲಿ ಧ್ವಜಾರೋಹಣ ನೆರವೇರಲಿದೆ. ಬಳಿಕ ಚಿತ್ರದುರ್ಗದ ಗುರುಬಸವ ಮಾಚಿದೇವ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಬಿಜಾಪುರ ಜಿಲ್ಲೆ ದೇವರ ಹಿಪ್ಪರಗಿಯ ಮ.ನಿ.ಪ್ರ. ಮಡಿವಾಳೇಶ್ವರ ಮಹಾಸ್ವಾಮಿಗಳು, ಬೆಂಗಳೂರು ಮಡಿವಾಳ ಮಾಚಿದೇವ ವಿಶ್ವಸ್ಥ ಸಮಿತಿ ಟ್ರಸ್ಟ್‌ನ ಮಡಿವಾಳ ಮಾಚಿದೇವ ಶಿವಯೋಗಾನಂದಪುರಿ ಮಹಾಸ್ವಾಮಿಗಳು, ಮೂಡಬಿದಿರೆಯ ಲಕ್ಷ್ಮೀ ಸತ್ಯನಾರಾಯಣ ವೀರಾಂಜನೆಯ ಕ್ಷೇತ್ರ ಕಾರಂಜಿ ಮಠದ ಮುಕ್ತಾನಂದ ಮಹಾಸ್ವಾಮಿಗಳು ಹಾಗೂ ನಗರದ ದೊಡ್ಡಪೇಟೆಯ ವಿರಕ್ತಮಠದ ಮನಿಪ್ರ ಗುರುಬಸವ ಮಹಾಸ್ವಾಮಿಗಳು ಆಗಮಿಸುವರು. ಆ. 21ರಂದು ಬೆಳಗ್ಗೆ 5 ಗಂಟೆಗೆ ಮಡಿವಾಳ ಮಾಚಿದೇವರಿಗೆ ಅಭಿಷೇಕ, 7.15ಕ್ಕೆ ಕುಂಭದ ಪೂಜೆ, 8.35ಕ್ಕೆ ಮಡಿವಾಳ ಮಾಚಿದೇವರ ಉತ್ಸವದ ಮಹಾಪೂಜೆ ನಡೆದು, 9.30ಕ್ಕೆ ಮೆರವಣಿಗೆ ಆರಂಭವಾಗಲಿದೆ. ಮಧ್ಯಾಹ್ನ 1.30ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಾಲೂಕು ಅಗಸರ ಮಠ ಟ್ರಸ್ಟ್ ಕಮಿಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಸಂಗೊಳ್ಳಿ ರಾಯಣ್ಣ ಸಂಘದ ಸಭೆ
ಹಾವೇರಿ: ತಾಲೂಕು ವೀರ ಸಂಗೊಳ್ಳಿ ರಾಯಣ್ಣ ಯುವ ಸಂಘದ ಸಭೆ ಆ. 11ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಸಂಘದ ಅಧ್ಯಕ್ಷ ಶಿವಾನಂದ ಮಾಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಆ. 15ರಂದು ಸ್ವಾತಂತ್ರ ಸೇನಾನಿ ವೀರ ಸಂಗೊಳ್ಳಿ ರಾಯಣ್ಣನ ಜನ್ಮದಿನವನ್ನು ಅದ್ದೂರಿಯಾಗಿ, ಸಡಗರ ಸಂಭ್ರಮದಿಂದ ಆಚರಿಸುವ ಕುರಿತು ಚರ್ಚಿಸಲು ಈ ಸಭೆ ಕರೆಯಲಾಗಿದೆ. ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳು, ಸಮಾಜದ ಮುಖಂಡರು, ಸ್ಥಳಿಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ-ಸೂಚನೆ ನೀಡುವಂತೆ ಪ್ರಕಟಣೆ ತಿಳಿಸಿದೆ.
ನಾಗರ ಪಂಚಮಿ: ನಾಳೆ ಗಂಗಾದೇವಿಗೆ ಪೂಜೆ
ಹಾನಗಲ್ಲ: ನಾಗರ ಪಂಚಮಿ ನಿಮಿತ್ತ ಪಟ್ಟಣದ ಗಂಗಾಮತ ಸಮಾಜ ಬಾಂಧವರು ಆ. 12ರಂದು ಗಂಗಾದೇವಿಗೆ ಪೂಜೆ ಹಮ್ಮಿಕೊಂಡಿದ್ದಾರೆ. ಸೋಮವಾರ ಸಂಜೆ 5 ಗಂಟೆಗೆ ಪಟ್ಟಣದ ವಿವಿಧ ಬಡಾವಣೆಗಳಲ್ಲಿರುವ ಗಂಗಾಮತಸ್ಥರು ವಾದ್ಯ ವೈಭವಗಳಿಂದ ಮೆರವಣಿಗೆಯ ಮೂಲಕ ಪಟ್ಟಣದ ಮಧ್ಯ ಭಾಗಲ್ಲಿರುವ ಕಲ್ಲಬಾವಿಗೆ ತೆರಳಿ ಸಾಮೂಹಿಕವಾಗಿ ಗಂಗಾಮಾತೆಗೆ ಪೂಜೆ ಸಲ್ಲಿಸಲಿದ್ದಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಾಜದ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement