ಶೋಷಣೆ ತಪ್ಪಿಸಲು ಸಂಘಟಿತರಾಗಿ
ಹಾನಗಲ್ಲ: ಶಿಕ್ಷಣ ವಂಚಿತರಾಗಿ ಕೂಲಿಯನ್ನೇ ನಂಬಿಕೊಂಡು ಬದುಕುತ್ತಿರುವ ಅಸಂಘಟಿತ ಕಾರ್ಮಿಕರು ಮಧ್ಯವರ್ತಿಗಳಿಂದ ಶೋಷಣೆಗೆ ಒಳಗಾಗುತ್ತಿದ್ದು, ಅನ್ಯಾಯದ ವಿರುದ್ಧ ಸಿಡಿದೇಳಲು ಸಂಘಟಿತರಾಗುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಒಕ್ಕೂಟದ ಕಾರ್ಯದರ್ಶಿ ಎಂ.ಡಿ. ಉಬೇದುಲ್ಲಾ ಅಭಿಪ್ರಾಯಪಟ್ಟರು.
ತಾಲೂಕಿನ ಅಕ್ಕಿಆಲೂರಿನ ಬೀಡಿ ಕಾರ್ಮಿಕರ ಸಂಘದ ಕಾರ್ಯಾಲಯದಲ್ಲಿ ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿ ಹಾಗೂ ಲಾಗ್‌ಬುಕ್ ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ದಿನಗಳಲ್ಲಿ ಕೂಲಿ ಕಾರ್ಮಿಕರ ಬದುಕು ದುಸ್ತರವಾಗಿದೆ. ಜನತೆಯ ಆರ್ಥಿಕ ಸ್ಥಿತಿಯನ್ನು ಅರಿತು ಜನಪರ ನೀತಿಯನ್ನು ಅನುಸರಿಸಬೇಕಾದ ಸರ್ಕಾರಗಳು ಜನವಿರೋಧಿ ನೀತಿ ಮೂಲಕ ಬಡ ಕಾರ್ಮಿಕರ ಪಾಲಿಗೆ ಮುಳ್ಳಾಗುತ್ತಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಅಣ್ಣಪ್ಪ ಚಿಕ್ಕಣ್ಣನವರ, ಕಾರ್ಮಿಕರು ರಾಜಕೀಯವಾಗಿ ಪ್ರಜ್ಞಾವಂತರಾಗುವ ಅಗತ್ಯವಿದೆ. ರಾಜ್ಯ ರಾಜಕೀಯದಲ್ಲಿ ದಿನ ಬೆಳಗಾದರೆ ನಡೆಯುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ರಾಜಕಾರಣಿಗಳು ತಮ್ಮ ಸ್ವಹಿತಾಸಕ್ತಿಗೆ ಕಾರ್ಮಿಕರನ್ನು ಬಲಿಪಶು ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ಹೊಂದಿರುವ ನಾಯಕರ ಕೊರತೆಯಿಂದಾಗಿ ಕಾರ್ಮಿಕರ ರಕ್ಷಣೆ ಮಾಡುವವರೇ ಇಲ್ಲದಂತಾಗಿದೆ ಎಂದು ವಿಷಾದಿಸಿದರು.
ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಕರೀಂ ಹುಬ್ಬಳ್ಳಿ, ಮುಸ್ಲಿಂ ಹಿತಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಕ್ಬೂಲ ಅಹ್ಮದ ಹೊಂಕಣ, ಮುಸ್ತಾಕ ಅಹ್ಮದ ಕಾರಡಗಿ, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಜಾಹೀದಾಬಿ ಅಂದಲಗಿ, ಗ್ರಾಪಂ ಸದಸ್ಯ ಬಸೀರಖಾನ ಪಠಾಣ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಲ್ಲೇಶಪ್ಪ ಮಾದರ, ನಗರ ಕಾಂಗ್ರೆಸ್ ಅಧ್ಯಕ್ಷ ಇಂದೂಧರ ಸಾಲಿಮಠ, ಕಾಂಗ್ರೆಸ್ ಮುಖಂಡರಾದ ಟಾಕನಗೌಡ ಪಾಟೀಲ, ರವಿಕುಮಾರ ಬೆಲ್ಲದ, ಅನಿಲ ಕನವಳ್ಳಿ, ಬಸವರಾಜ ಹಾಲಭಾವಿ, ನೂರ ಅಹ್ಮದ ಖೇಣಿ, ಅಲ್ತಾಫ್ ಶಿರಹಟ್ಟಿ, ಅಬ್ದುಲ್ ಕರೀಂ ಹಿತ್ತಲಮನಿ, ಶಹಜಾದ್ ಬಂಕಾಪುರ ಪಾಲ್ಗೊಂಡಿದ್ದರು.