ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬುದ್ಧಗಯಾ ಸ್ಫೋಟ: ಆರೋಪಿಗಳ ಶೀಘ್ರ ಬಂಧಿಸಿ

Lingaraj Badiger
Updated On : 12 Aug 2013, 11:22 am

ಹಾವೇರಿ: ಬುದ್ಧಗಯಾದಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಪಾಲ್ಗೊಂಡಿದ್ದ ನಾಲ್ವರು ಶಂಕಿತರ ಹೆಸರನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಸ್ಫೋಟದ ಆರೋಪಿಗಳನ್ನು ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ರಾಮರಾಜ್ಯ ನಿರ್ಮಾಣ ಪರಿಷತ್ತಿನ ದಕ್ಷಿಣ ಭಾರತ ಸಂಚಾಲಕರೂ ಆಗಿರುವ ಪ್ರಣವಾನಂದ ರಾಮ್ ಸ್ವಾಮೀಜಿ ಆಗ್ರಹಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಗುಪ್ತಚರ ಇಲಾಖೆ ಸ್ಫೋಟದ ಬಗ್ಗೆ ಮುಂಚಿತವಾಗಿಯೇ ಎಚ್ಚರಿಸಿದ್ದರೂ ಘಟನೆ ತಡೆಗಟ್ಟುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಕೆಲ ತಿಂಗಳ ಹಿಂದೆ ಅಮೆರಿಕಾದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಕಾರಣರಾದ ಭಯೋತ್ಪಾದಕರನ್ನು ಅಲ್ಲಿನ ಸರ್ಕಾರ ಮೂರೇ ದಿನಗಳಲ್ಲಿ ಕೊಂದು ಹಾಕಿತು. ಭಯೋತ್ಪಾದಕರ ವಿಷಯದಲ್ಲಿ ಕಠೋರ ನೀತಿ ಅನುಸರಿಸಿ ಅಮೆರಿಕ ತನ್ನ ನಾಗರಿಕರನ್ನು ರಕ್ಷಿಸಿಕೊಳ್ಳುತ್ತಿದೆ. ಆದರೆ, ಭಾರತದಿಂದ ಅದು ಸಾಧ್ಯವಾಗುತ್ತಿಲ್ಲ. ಭಯೋತ್ಪಾದನೆ ತಡೆಗಟ್ಟುವಲ್ಲಿ ಕೇಂದ್ರ ಸಂಪೂರ್ಣ ವಿಫಲವಾಗಿದೆ ಎಂದರು.
ಗೋಮಾತೆ ಮೇಲೆ ಆ್ಯಸಿಡ್..
ಹುಬ್ಬಳ್ಳಿಯಲ್ಲಿ ಗೋವುಗಳ ಮೇಲೆ ಆ್ಯಸಿಡ್ ಎರಚಿದ್ದು ಖಂಡನೀಯ. ವಿಕೃತ ಮನಸ್ಸಿನ ಕಿಡಿಗೇಡಿಗಳನ್ನು ಪೊಲೀಸರು ಈವರೆಗೂ ಬಂಧಿಸಿಲ್ಲ. ಇದನ್ನೇ ನೆಪ ಮಾಡಿಕೊಂಡು ಹುಬ್ಬಳ್ಳಿ ಪಾಂಜಾರಪೋಳ ಸಂಸ್ಥೆಯಲ್ಲಿ ಪಾಲಿಕೆ ಸಿಬ್ಬಂದಿ 50ಕ್ಕೂ ಹೆಚ್ಚು ಗೋವುಗಳನ್ನು ಬಿಟ್ಟು ಬಂದಿದ್ದಾರೆ. ಅವುಗಳ ನಿರ್ವಹಣೆಗೆ ಖರ್ಚು ಮಾತ್ರ ಕೊಟ್ಟಿಲ್ಲ. ಕೂಡಲೇ ಹುಬ್ಬಳ್ಳಿ ಮಹಾನಗರ ಪಾಲಿಕೆ ನಿರ್ವಹಣಾ ವೆಚ್ಚವನ್ನು ಪಾಂಜಾರಪೋಳ ಸಂಸ್ಥೆಗೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮದನಿ ಬಿಡುಗಡೆ ಬೇಡ...
ಬೆಂಗಳೂರಿನ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಅಬ್ದುಲ್ ನಾಸೀರ್ ಮದನಿ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾದರೆ ರಾಮರಾಜ್ಯ ನಿರ್ಮಾಣ ಪರಿಷತ್ತಿನ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದ್ದಾರೆ. ಸುಪ್ರಿಂ ಕೋರ್ಟ್ ಕೂಡ ಮದನಿಗೆ ಜಾಮೀನು ನೀಡಲು ನಿರಾಕರಿಸಿದೆ. ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮದನಿಯನ್ನು ಬಿಡುಗಡೆ ಮಾಡಬೇಕೆಂದು ಕೇರಳದ ರಾಜಕೀಯ ಮುಖಂಡರು ಮನವಿ ಮಾಡಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಕರ್ನಾಟಕ ಸರ್ಕಾರ ಹೇಳಿಕೆ ನೀಡಿದ್ದು ಖಂಡನೀಯ. ಮದನಿ ಬಿಡುಗಡೆಗೆ ಸರ್ಕಾರ ಯಾವುದೇ ಪ್ರಯತ್ನ ಮಾಡಬಾರದು. ಆತನಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು. ಮದನಿ ಬಿಡುಗಡೆಗೆ ಮುಂದಾದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಟಿಪ್ಪು ಹೆಸರಲ್ಲಿ ವಿವಿ ಬೇಡ: ಟಿಪ್ಪು ಸುಲ್ತಾನರ ಹೆಸರಲ್ಲಿ ಶ್ರೀರಂಗಪಟ್ಟಣದಲ್ಲಿ ವಿವಿ ಸ್ಥಾಪಿಸಬಾರದು. ಟಿಪ್ಪು ಹಿಂದೂ ವಿರೋಧಿಯಾಗಿದ್ದರು. ಹಿಂದೂಗಳನ್ನು ಇಸ್ಲಾಂಗೆ ಮತಾಂತರ ಮಾಡುತ್ತಿದ್ದರು. ದೇವಸ್ಥಾನಗಳನ್ನ್ನು ಲೂಟಿ ಮಾಡಿದ್ದರು. ಶ್ರೀರಂಗ ಪಟ್ಟಣದಲ್ಲಿ ವಿವಿಗೆ ರಾಷ್ಟ್ರ ಭಕ್ತರ, ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಬೇಕು. ಇಲ್ಲವೇ ಶ್ರೀರಂಗ ಪಟ್ಟಣ ವಿಶ್ವವಿದ್ಯಾಲಯ ಎಂದು ನಾಮಕರಣ ಮಾಡಲಿ ಎಂದರು. ಪರಿಷತ್ತಿನ ಜಿಲ್ಲಾ ಸಂಚಾಲಕ ಶ್ರೀನಿವಾಸ ಸಂಕಿಪುಳೆ, ರಂಗನಗೌಡ ಪಾಟೀಲ, ಎನ್.ಕೆ. ಲಮಾಣಿ, ಹೆಗ್ಗಪ್ಪ ದೊಡ್ಡ ಕುರುಬರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement