ಸಾಲ ಮನ್ನಾ, ವಿಮೆ ಹಣ ಕೊಡಿಸಿ
ಬ್ಯಾಡಗಿ: ಹಿಂದಿನ ಸರ್ಕಾರ ಮನ್ನಾ ್ನಮಾಡಿದ ಸಾಲದ ಹಾಗೂ ಬೆಳೆವಿಮೆಯ ಹಣವನ್ನು ಬಿಡುಗಡೆ ಮಾಡುವಂತೆ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಕಾರ್ಯಕರ್ತರು, ಹಿಂದಿನ ಸರ್ಕಾರ ರು. 25 ಸಾವಿರದ ವರೆಗಿನ ಸಾಲ ಮನ್ನ್ನಾ ಮಾಡಿ ಆದೇಶ ಹೊರಡಿಸಿದೆ. ಆದರೆ ಆ ಹಣ ಈವರೆಗೂ ಸಹಕಾರ ಸಂಘಗಳಿಗೆ ಜಮೆಯಾಗಿಲ್ಲ. ಇದರಿಂದ ಸಂಘಗಳ ನಿತ್ಯದ ವ್ಯವಹಾರಕ್ಕೆ ತೀವ್ರ ಹಿನ್ನ್ನಡೆಯಾಗಿದೆ. ಕೂಡಲೇ ಸರ್ಕಾರ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ. ಸರ್ಕಾರದ ಇಕ್ಕಟ್ಟಿನ ನೀತಿಯಿಂದ ಸಂಘಗಳ ಮೂಲಕ ಹೊಸ ಸಾಲಗಾರರಿಗೆ ಸಾಲ ವಿತರಿಸುವಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ರೈತರು ಹಳೆ ಸಾಲ ಜಮೆ ಮಾಡಿದರೂ ಹೊಸದಾಗಿ ಸಾಲ ವಿತರಣೆಯಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕೂಡಲೇ ಬೆಳೆವಿಮೆ ಹಾಗೂ ಮನ್ನಾ ್ನಮಾಡಿದ ಸಾಲದ ಮೊತ್ತವನ್ನು ಬಿಡುಗಡೆ ಮಾಡುವಂತೆ ರೈತರು ಮನವಿ ಮಾಡಿದ್ದಾರೆ.
ಕಾಲುವೆ ಪೂರ್ಣಗೊಳಿಸಿ: ಬ್ಯಾಡಗಿ ಸ್ಪೈಸ್ ಪಾರ್ಕ್ ನಿರ್ಮಿಸಲು ಕೆಐಡಿಬಿ ರೈತರ ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ರೈತರ ಪಹಣಿ ಪತ್ರಿಕೆಯಲ್ಲಿನ ಬೋಜಾ ಕಡಿಮೆ ಮಾಡಬೇಕು. ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ಕಾಲುವೆಗಳ ಕಾಮಗಾರಿ ಪೂರ್ಣಗೊಳ್ಳದೆ ಈಗ ನಿರ್ಮಾಣವಾದ ಕಾಲುವೆಗಳಲ್ಲಿ ಹೆಚ್ಚಿನ ನೀರು ರೈತರ ಜಮೀನುಗಳಿಗೆ ನುಗ್ಗುತ್ತಿದೆ. ಇದರಿಂದ ಬೆಳೆಗಳು ಹಾಳಾಗುತ್ತಿವೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಬೇಡಿಕೆ ಈಡೇರಿಸದಿದ್ದರೆ ತಹಸೀಲ್ದಾರ್ ಕಚೇರಿ ಎದುರು ಹಸಿರು ಸೇನೆ ಹಾಗೂ ರೈತ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.