ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಬಿಜೆಪಿ ಬೆಂಬಲಿಸಲು ಕೆಜೆಪಿ ವಿರೋಧ

Lingaraj Badiger
Updated On : 13 Aug 2013, 10:50 am

ಹಾವೇರಿ: ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಯಿಂದ ಆ. 22ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಕರ್ನಾಟಕ ಜನತಾ ಪಕ್ಷ ಸೋಮವಾರ ನಗರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಪಾಳೆಯಲ್ಲಿ ಹರ್ಷ ಮೂಡಿಸಿದೆ.
ಕೆಜೆಪಿಯಿಂದ ಸ್ಪರ್ಧೆಗಿಳಿದಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಸಿ.ಎಂ. ಉದಾಸಿ ಮುಂತಾದವರ ಆದೇಶದಂತೆ ಆ. 5ರಂದು ನಾಮಪತ್ರ ಹಿಂದಕ್ಕೆ ಪಡೆದಿದ್ದರು. ಅಂದಿನಿಂದಲೇ ಹಾವೇರಿ ಜಿಲ್ಲೆಯ ಕೆಜೆಪಿ ಮತದಾರರಲ್ಲಿ ಯಾವ ಅಭ್ಯರ್ಥಿ ಪರವಾಗಿ ಮತ ಚಲಾಯಿಸಬೇಕೆಂಬ ಗೊಂದಲ ಮೂಡಿತ್ತು. ಅದಕ್ಕೆ ತೆರೆ ಎಳೆಯಬೇಕೆಂಬ ಉದ್ದೇಶದಿಂದಲೇ ಮಾಜಿ ಸಚಿವ ಸಿ.ಎಂ. ಉದಾಸಿ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ನಗರದ ಖಾಸಗಿ ಹೋಟೆಲ್‌ನಲ್ಲಿ ಕೆಜೆಪಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು.
ಬಿಜೆಪಿ ವಿರುದ್ಧ ಗುಟುರು: ಮಾಜಿ ಶಾಸಕ ಜಿ. ಶಿವಣ್ಣ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಬಿಜೆಪಿ ಜಿಲ್ಲಾಧ್ಯಕ್ಷರೇ ಕಾರಣ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷರೇ ಪ್ರಚಾರ ಕೈಗೊಂಡಿದ್ದರು. ಇಂಥ ಕ್ಷುಲ್ಲಕ ರಾಜಕಾರಣ ಶೋಭೆ ತರಲ್ಲ. ಈಗ ಕಾಲ ಬದಲಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರೇ ನಡೆದುಕೊಂಡಂತೆ ತಾವು ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದುಕೊಂಡರೆ ಏನಾಗುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು.
ತಮ್ಮ ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದಂತೆ ತಾವು ಅನೇಕ ಬಾರಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಮಾಜಿ ಸಚಿವ, ಹಾಲಿ ಶಾಸಕ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದರೂ ಏನೂ ಪ್ರಯೋಜನವಾಗಿಲ್ಲ. ಮಾನಸಿಕವಾಗಿ ವಿಧಾನಪರಿಷತ್ ಚುನಾವಣೆಯಲ್ಲಿ ತಮಗೆ ಬಿಜೆಪಿ ಬೆಂಬಲಿಸುವ ಇಚ್ಛೆಯಿಲ್ಲ. ಆದರೆ, ಕೆಜೆಪಿಯ ಹಿರಿಯ ನಾಯಕರ ಆದೇಶ ಪಾಲಿಸುತ್ತೇವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರನ್ನ್ನು ಕರೆಯಿಸಿ: ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣದಾರ ಬಿಜೆಪಿ ಜಿಲ್ಲಾಧ್ಯಕ್ಷರನ್ನು ಸಭೆಗೆ ಕರೆಯಿಸಿ ಎಂದು ಕೆಜೆಪಿ ಕಾರ್ಯಕರ್ತರು ತಾಕೀತು ಮಾಡಿದ ಪರಿಣಾಮ ಸಭೆಯಲ್ಲಿ ಗೊಂದಲ ಮೂಡಿತು.
ಶಾಸಕ ಬಸವರಾಜ ಬೊಮ್ಮಾಯಿ ವೇದಿಕೆಗೆ ಬಂದಾಗ ಕಾರ್ಯಕರ್ತರ ಆಕ್ರೋಶ ಮೇರೆ ಮೀರಿತು. ಮಾಜಿ ಸಿಎಂ ಬಿಎಸ್‌ವೈ ಅವರ ಬೆನ್ನ್ನಿಗೆ ಚೂರಿ ಹಾಕಿದ ಶಾಸಕರಿಗೆ ಹಾಗೂ ಆ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಕೆಜೆಪಿ ಬೆಂಬಲ ನೀಡುವುದು ಬೇಡ ಎಂದರು.
ಪರಿಸ್ಥಿತಿ ಕೈಮಿರುತ್ತಿರುವುದನ್ನ್ನು ಮನಗಂಡ ಮಾಜಿ ಸಚಿವ ಉದಾಸಿ, ನಿಮ್ಮ ಭಾವನೆ ಅರ್ಥವಾಗುತ್ತಿದೆ. ಕಾರ್ಯಕರ್ತರಿಗೆ ಅವಮಾನವಾಗುವ ಯಾವುದೇ ರೀತಿಯ ತೀರ್ಮಾನ ನಾವು ಕೈಗೊಳ್ಳುವುದಿಲ್ಲ. ಬದಲಾದ ರಾಜಕೀಯ ಸನ್ನ್ನಿವೇಶ ಹಾಗೂ ದೇಶ, ರಾಜ್ಯದ ಹಿತದೃಷ್ಟಿಯಿಂದ ಕೆಲ ತೀರ್ಮಾನಗಳನ್ನು ಕೈಗೊಳ್ಳುವುದು ಅನಿವಾರ್ಯ. ಅದಕ್ಕೆ ನಿಮ್ಮೆಲ್ಲರ ಸಹಕಾರ ಮುಖ್ಯ ಎಂದು ಮನವೊಲಿಸಲು ಯತ್ನಿಸಿದರು.
ಗೊಂದಲದ ಗೂಡು!: ಶಾಸಕ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ವಿಧಾನ ಪರಿಷತ್ ಅಭ್ಯರ್ಥಿ ಪ್ರದೀಪ ಶೆಟ್ಟರ್ ವೇದಿಕೆಗೆ ಆಗಮಿಸಿದಾಗ ಕೆಲವರು ಬಿಜೆಪಿಗರು ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ಸಮ್ಮತ ವ್ಯಕ್ತಪಡಿಸಿದರು. ಇನ್ನೂ ಕೆಲವರು, ಬಿಎಸ್‌ವೈ ಅವರನ್ನು ್ನಮೂಲೆ ಗುಂಪು ಮಾಡಿದವರು ಈಗ್ಯಾಕೆ ಬಂದಿದ್ದಾರೆ ಎಂದು ಗೊಣಗಿದರು.
ತರಾತುರಿಯಲ್ಲಿ ಸಭೆ ಮುಕ್ತಾಯ: ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸುವುದಕ್ಕೆ ಬಹುತೇಕರು ಅಸಮ್ಮತಿ ತೋರಿದಾಗ, ಮಾಜಿ ಸಚಿವ ಉದಾಸಿ ಮಾತನಾಡಿ, ಆ. 22ರಂದು ನಡೆಯಲಿರುವ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ಸೂಚಿಸಬೇಕೆಂಬ ಬಗ್ಗೆ ಆ. 13ರ ಸಂಜೆ ಕೆಜೆಪಿ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿ, ತರಾತುರಿಯಲ್ಲಿ ಸಭೆ ಮುಗಿಸಿ ಹೊರ ನಡೆದರು.
ಪ್ರದೀಪ್ ತರಾಟೆಗೆ: ವಿಧಾನಸಭೆ ಚುನಾವಣೆಯಲ್ಲಿ ಕೆಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ರಚಿಸಿದ್ದ ಸಂಚನ್ನು ನೆನಪಿಸಿಕೊಂಡ ಕೆಜೆಪಿ ಕಾರ್ಯಕರ್ತರು, ಪರಿಷತ್ ಚುನಾವಣೆ ಬಂದಿದ್ದರಿಂದ ಈಗ ಕೆಜೆಪಿ ಮತದಾರರು, ಜನಪ್ರತಿನಿಧಿಗಳು ನಿಮಗೆ ನೆನಪಿಗೆ ಬಂದರೇ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಸೋದರ, ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ಎಲ್ಲ ಸನ್ನ್ನಿವೇಶಕ್ಕೆ ಸಾಕ್ಷಿಯಾದ ಬೊಮ್ಮಾಯಿ, ಕೆಜೆಪಿ ಕಾರ್ಯಕರ್ತರ ವಾಗ್ದಾಳಿಯಿಂದ ಪ್ರದೀಪ ಅವರನ್ನು ರಕ್ಷಿಸಲು ಮುಂದಾದಲ್ಲಿ ಎಲ್ಲಿ ತಮ್ಮ ಮೇಲೆ ತಿರುಗಿ ಬೀಳುವರೋ ಎಂಬ ಭಯದಲ್ಲಿ ಮೂಕ ಪ್ರೇಕ್ಷಕರಂತೆ ನಿಂತಿದ್ದು ಕಂಡುಬಂತು.
ಬೆಂಬಲಿಸಲು ಒಲ್ಲದ ಕಾರ್ಯಕರ್ತರು
ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವ ಉದ್ದೇಶದಿಂದ ಕೆಜೆಪಿ ಮುಖಂಡ ಸಿ.ಎಂ. ಉದಾಸಿ, ಮಾಜಿ ಸಿಎಂ ಬಿಎಸ್‌ವೈ ಅವರ ಅಣತಿಯಂತೆ ಸಭೆ ಆಯೋಜಿಸಿ ಕಾರ್ಯಕರ್ತರ ಮನವೊಲಿಸುವ ಉದ್ದೇಶದಿಂದ ಸಭೆ ಆಯೋಜಿಸಿದ್ದರು. ಆದರೆ, ಬಿಜೆಪಿಯನ್ನು ಯಾವ ಕಾರಣಕ್ಕೂ ಬೆಂಬಲಿಸಬಾರದು ಎಂಬ ಮನಸ್ಥಿತಿಯನ್ನು ಕೆಜೆಪಿ ಕಾರ್ಯಕರ್ತರು ಸಾರಿ ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಆಗಿರುವ ಹಿನ್ನ್ನಡೆಯಂತೆಯೇ ಅವಿಭಜಿತ ಧಾರವಾಡ ಜಿಲ್ಲೆಯಿಂದ ನಡೆಯುತ್ತಿರುವ ಪರಿಷತ್ ಚುನಾವಣೆಯಲ್ಲೂ ಕಮಲ ಪಕ್ಷಕ್ಕೆ ಬಿಸಿ ಮುಟ್ಟಿಸುವ ಮೂಲಕ ಬಿಎಸ್‌ವೈ ತಾಕತ್ತು ಏನು ಎಂಬುದು ತೋರ್ಪಡಿಸಬೇಕೆಂಬ ಹಠ ಕಾರ್ಯಕರ್ತರಲ್ಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸಭೆಯಲ್ಲಿ ನಡೆದಿರುವ ಈ ಎಲ್ಲ ವಿದ್ಯಮಾನಗಳನ್ನು ಗಮನಿಸಿದಾಗ ಕೆಜೆಪಿ ಅಧಿಕೃತವಾಗಿ ಬಿಜೆಪಿ ಬೆಂಬಲಿಸುವಂತೆ ಕಾರ್ಯಕರ್ತರಿಗೆ ತಿಳಿಸಿದರೂ ಆ. 22ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಎಷ್ಟರ ಮಟ್ಟಿಗೆ ಮತವಾಗಿ ಮಾರ್ಪಡಲಿದೆ ಎಂಬುದನ್ನು ಕಾದು ನೋಡಬೇಕಿದೆ.
-ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement