ಇಂದು ನಾಗರ ಪಂಚಮಿ ಹಾಡುಗಳ ಸ್ಪರ್ಧೆ
ಶಿಗ್ಗಾಂವಿ: ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ವಿಸ್ತರಣೆ ಹಾಗು ಸಲಹಾ ಕೇಂದ್ರದ ವತಿಯಿಂದ ಆ. 14ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಜಗದ್ಗುರು ರಂಭಾಪುರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಾಗರ ಪಂಚಮಿ ಹಾಡುಗಳ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಜಾನಪದ ವಿವಿ ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಜಗದ್ಗುರು ರಂಭಾಪುರಿ ಪ್ರಥಮ ದರ್ಜೆ ಕಾಲೇಜಿನ ಆಡಳಿತಾಧಿಕಾರಿ ವಿಶ್ವನಾಥ ಕಂಬಾಳಿಮಠ, ಜಾನಪದ ವಿವಿ ಕುಲಸಚಿವ ಪ್ರೊ ಸಿ.ಎ. ಸೋಮಶೇಖರಪ್ಪ, ಸಂಯೋಜನಾಧಿಕಾರಿ ಡಾ ಶ್ರೀಶೈಲ್ ಹುದ್ದಾರ ಹಾಗೂ ಮೌಲ್ಯಮಾಪನ ವಿಭಾಗದ ನಿರ್ದೇಶಕ ಕುಲಸಚಿವ ಸ.ಚಿ. ರಮೇಶ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
67ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಿದ್ಧತೆ ಪೂರ್ಣ
ಹಾವೇರಿ: 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ಕಾರ್ಯಕ್ರಮ ಆ. 15ರಂದು ಬೆಳಗ್ಗೆ 9 ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿದೆ. ಸಣ್ಣ ಕೈಗಾರಿಕೆ, ಮುಜರಾಯಿ ಮತ್ತು ಸಕ್ಕರೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವ ಸಂದೇಶ ನೀಡುವರು. ಜಿಲ್ಲಾಧಿಕಾರಿ ಪಾಂಡುರಂಗ ನಾಯಕ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಕುಸುಗಲ್ಲ, ಎಸ್ಪಿ ಎನ್. ಶಶಿಕುಮಾರ ಹಾಗೂ ಅಪರ ಜಿಲ್ಲಾಧಿಕಾರಿ ಕೆ. ಚನ್ನ್ನಬಸಪ್ಪಭಾಗವಹಿಸುವರು. ಶಾಲಾ-ಕಾಲೇಜು, ಪೊಲೀಸ್, ಎನ್ಸಿಸಿ ಮುಂತಾದ ತುಕಡಿಗಳಿಂದ ಪಥ ಸಂಚಲನ ನಡೆಯಲಿದೆ. ಸ್ವಾತಂತ್ರ್ಯ ಯೋಧರನ್ನು ಸನ್ಮಾನಿಸಲಾಗುವುದು. ಅಂದು ಬೆಳಗ್ಗೆ 8 ಗಂಟೆಗೆ ನಗರದ ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮದ ಬಳಿಕ ಹುತಾತ್ಮ ಮೈಲಾರ ಮಹಾದೇವ ವೃತ್ತಕ್ಕೆ ಆಗಮಿಸಿ, ಅವರ ಪ್ರತಿಮೆಗೆ ಮಾರ್ಲಾಪಣೆ ಮಾಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಶಿಕ್ಷಣ ಇಲಾಖೆ ವತಿಯಿಂದ ಸಂಜೆ 6ರಿಂದ 8ರ ವರೆಗೆ ಜಿಲ್ಲಾ ಗುರುಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಶ್ರಾವಣ ಕಾರ್ಯಕ್ರಮ ಶುರು
ಹಿರೇಕೆರೂರು: ತಾಲೂಕಿನ ವಿವಿಧೆಡೆ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಗುಂಡಗಟ್ಟಿ ಗ್ರಾಮದ ಶನಿದೇವರ ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ರುದ್ರಾಭಿಷೇಕ ಜರುಗುವುದು. ಪ್ರತಿ ಶನಿವಾರ ಬೆಳಗ್ಗೆ 9ರಿಂದ ಸಂಜೆ ವರೆಗೆ ನವಗ್ರಹ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ಇದೆ. ಸೆ. 5ಕ್ಕೆ ಕುಂಭಾಭಿಷೇಕ ನಡೆಯಲಿದೆ. ಹಂಸಬಾವಿ ಶಿವಯೋಗಾಶ್ರವುದಲ್ಲಿ ಐರಾದಿ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಕುರಿತು ಪುರಾಣ ಪ್ರವಚನ ಆರಂಭಗೊಂಡಿದೆ. 11 ದಿನ ಸಂಜೆ 7.30ಕ್ಕೆ ಆಶ್ರಮದ ಪೀಠಾಧಿಪತಿ ಸಿದ್ದಲಿಂಗ ಸ್ವಾಮೀಜಿ ಪುರಾಣ ಪ್ರವಚನ ನಡೆಸಿಕೊಡುತ್ತಿದ್ದಾರೆ. ಸೆ. 17ಕ್ಕೆ ಪುರಾಣ ಮಂಗಲಗೊಳ್ಳುವುದು ಎಂದು ಷಣ್ಮುಖ ಮಳಿಮಠ ತಿಳಿಸಿದ್ದಾರೆ.
ದೇಶದ ಸಾರ್ವಭೌಮತ್ವದ ಪ್ರಶ್ನೆ ಬಂದಾಗ ತಕ್ಕ ಉತ್ತರ ಕೊಡೋಣ: ಹುಲ್ಲತ್ತಿ
ಬ್ಯಾಡಗಿ: ದೇಶಭಕ್ತರು ನಡೆಸಿದ ಹೋರಾಟದಿಂದಲೇ ಸ್ವಾತಂತ್ರ್ಯ ದೊರೆತಿದ್ದು, ಸಾರ್ವಭೌಮತ್ವದ ಪ್ರಶ್ನೆ ಬಂದಾಗ ತಕ್ಕ ಉತ್ತರ ನೀಡಬೇಕಾಗಿರುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಸೇವಾದಳದ ಅಧ್ಯಕ್ಷ ಬಸವಂತಪ್ಪ ಹುಲ್ಲತ್ತಿ ಹೇಳಿದರು.
ತಾಪಂ ಸಭಾಭವನದಲ್ಲಿ ತಾಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಭಾರತ ಸೇವಾದಳದ ಆಶ್ರಯದಲ್ಲಿ ಪಿಡಿಒ, ಕಾರ್ಯದರ್ಶಿಗಳಿಗಾಗಿ ಏರ್ಪಡಿಸಿದ್ದ ರಾಷ್ಟ್ರಧ್ವಜ ಆರೋಹಣ ಮತ್ತು ಅವರೋಹಣ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಷ್ಟ್ರಧ್ವಜ ಗೌರವಿಸುವ ವ್ಯಕ್ತಿಯನ್ನು ದೇಶಭಕ್ತ ಎಂದು ಪರಿಗಣಿಸಲಾಗುತ್ತದೆ. ಭಾರತದ ಕೀರ್ತಿ ಬಾನೆತ್ತರಕ್ಕೆ ಮುಟ್ಟುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ. ನಮ್ಮ ಧ್ಯೇಯಗಳು ಇಡೀ ವಿಶ್ವದಲ್ಲೇ ಶ್ರೇಷ್ಠ. ಬೇರೆ ದೇಶಗಳಿಗೂ ಅವುಗಳನ್ನು ತಲುಪಿಸುವ ಉದ್ದೇಶದಿಂದ ರಾಷ್ಟ್ರಧ್ವಜ ಮೇಲಕ್ಕೆ ಹಾರಿಸಲಾಗುತ್ತದೆ ಎಂದರು.
ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವುದು ವಾಡಿಕೆ. ಆದರೆ ಸರ್ಕಾರ ಆ. 16ರಿಂದ ಪ್ರತಿ ಗ್ರಾಪಂ ಕಾರ್ಯಾಲಯದ ಎದುರು ರಾಷ್ಟ್ರಧ್ವಜ ಹಾರಿಸಲು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ ಆರೋಹಣ, ಅವರೋಹಣದ ಕುರಿತಾದ ಮಾರ್ಗಸೂಚಿ ಪಾಲಿಸುವಂತೆ ಕರೆ ನೀಡಿದರು. ಸೇವಾದಳದ ಸಂಪನ್ಮೂಲ ವ್ಯಕ್ತಿ ಎಸ್.ಸಿ. ಕಲ್ಮಠ, ಜಿಲ್ಲಾಧಿನಾಯಕ ಪ್ರಕಾಶ ಗೋಣಿ, ಉಪಾಧ್ಯಕ್ಷ ಎನ್.ಜೆ. ಗುತ್ತಲ ತಾಪಂ ವ್ಯವಸ್ಥಾಪಕ ಪಿ.ಬಿ. ಮೂಲೇರ, ಎಸ್.ಯು. ಮಾಸ್ತಿ ಉಪಸ್ಥಿತರಿದ್ದರು. ವಿನಾಯಕ ಗಡ್ಡದ ಸ್ವಾಗತಿಸಿದರು, ಬಿ.ಪಿ. ಅಜಗಣ್ಣನವರ ವಂದಿಸಿದರು.