ಇಂದು ಬಿಜೆಪಿ ಸಭೆ
ಹಾನಗಲ್ಲ: ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಉಪ ಚುನಾವಣೆಗಾಗಿ, ಹಾನಗಲ್ಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬಿಜೆಪಿ ಆ. 14ರಂದು ಪ್ರಚಾರಸಭೆ ಆಯೋಜಿಸಿದೆ. ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ್ ಮತದಾರರನ್ನು ಭೇಟಿ ಮಾಡಿ, ಮತ ಯಾಚಿಸಲಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವೀರಣ್ಣ ನಿಂಬಣ್ಣನವರ್ ತಿಳಿಸಿದ್ದಾರೆ. ತಾಲೂಕಿನ ಚಿಕ್ಕಾಂಶಿ-ಹೊಸೂರ ಗ್ರಾಮದಲ್ಲಿ ಬೆಳಗ್ಗೆ 9.30ಕ್ಕೆ ಪ್ರಥಮ ಸಭೆ ನಡೆಯಲಿದ್ದು, ಕೂಸನೂರ (11 ಗಂಟೆ), ಅಕ್ಕಿಆಲೂರ (ಮಧ್ಯಾಹ್ನ 1), ಬೆಳಗಾಲಪೇಟ (ಮಧ್ಯಾಹ್ನ 3.30ಕ್ಕೆ), ಹಾನಗಲ್ಲ (ಸಂಜೆ 5.30ಕ್ಕೆ) ಹಾಗೂ ಬೊಮ್ಮನಹಳ್ಳಿ (ಸಂಜೆ 7ಕ್ಕೆ)ಗಳಲ್ಲಿ ಪ್ರಚಾರ ಸಭೆ ಜರುಗಲಿವೆ. ಚುನಾವಣೆಯಲ್ಲಿ ಮತದಾರರಾಗಿರುವ ಜಿಪಂ, ತಾಪಂ, ಗ್ರಾಪಂ ಹಾಗೂ ಹಾನಗಲ್ಲ ಪುರಸಭೆಯ ಸದಸ್ಯರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಈ ಸಭೆಗಳಲ್ಲಿ ಪಾಲ್ಗೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ದಾನಮ್ಮ ದೇವಿದೇಗುಲಕ್ಕೆ ಭೂಮಿಪೂಜೆ
ರಾಣಿಬೆನ್ನೂರು: ನಗರದ ಗಂಗಾಪುರ ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಮಠದ ಆವರಣದಲ್ಲಿ ಗುಡ್ಡಾಪುರ ದಾನಮ್ಮದೇವಿ ದೇವಸ್ಥಾನ ನಿರ್ಮಿಸಲು ಮಠದ ಸಮಿತಿ ನಿರ್ಣಯಿಸಿದ್ದು, ಆ. 14ರಂದು ಮುಂಜಾನೆ 9.30ಕ್ಕೆ ಭೂಮಿಪೂಜೆ ಕಾರ್ಯಕ್ರಮ ನಡೆಯಲಿದೆ. ಹೊನ್ನಾಳಿ ಹಿರೇಕಲ್ಮಠದ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಲಿಂಗನಾಯಕನಹಳ್ಳಿಯ ಜಂಗಮ ಸುಕ್ಷೇತ್ರದ ಮನಿಪ್ರ ಚನ್ನ್ನವೀರ ಮಹಾಸ್ವಾಮಿಗಳು ಪೂಮಿಪೂಜೆ ಹಾಗೂ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವರು ಎಂದು ಮಠದ ಕಾರ್ಯದರ್ಶಿ ವಿ.ವಿ. ಹರಪನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ
ರಾಣಿಬೆನ್ನೂರು: ಕಂದಾಯ ಇಲಾಖೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ನಗರಸಭೆ, ತಾಲೂಕು ಪಂಚಾಯತ್, ಶಿಕ್ಷಣ ಇಲಾಖೆ ಮುಂತಾದ ಇಲಾಖೆಗಳ ಆಶ್ರಯದಲ್ಲಿ ಆ. 15ರಂದು ಬೆಳಗ್ಗೆ 9.30ಕ್ಕೆ ನಗರಸಭೆ ಕ್ರೀಡಾಂಗಣದಲ್ಲಿ 67ನೇ ಸ್ವಾತಂತ್ರ್ಯೋತ್ಸವ ಆಚರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ತಹಸೀಲ್ದಾರ್ ಕೆ.ಎಚ್. ಶಿವಕುಮಾರ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ಸಾರುವರು. ತಾಪಂ ಪ್ರಭಾರಿ ಇಒ ಡಾ ನಾಗನಗೌಡ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಲಕ್ಷ್ಮಣ, ನಗರಸಭೆಯ ಪ್ರಭಾರಿ ಪೌರಾಯುಕ್ತ ಬಿ.ಎಸ್. ಪಾಟೀಲ, ಪೊಲೀಸ್ ಉಪ ಅಧಿಕ್ಷಕ ಜಯಪ್ರಕಾಶ ಪಾಲ್ಗೊಳ್ಳುವರು.
22ರಂದು ಜಾನಪದ ದಿನ
ಹಾವೇರಿ: ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಜಾನಪದ ದಿನ ಕಾರ್ಯಕ್ರಮ ಆ. 22ರಂದು ಮಧ್ಯಾಹ್ನ 3 ಗಂಟೆಗೆ ಜರುಗಲಿದೆ. ಮೈಸೂರು ವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ ಸುಧಾಕರ ಉದ್ಘಾಟನೆ ನೆರವೇರಿಸಲಿದ್ದು, ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಾನಪದ ವಿದ್ವಾಂಸರಾದ ಕ್ಯಾತನಹಳ್ಳಿ ರಾಮಣ್ಣ, ಯು.ಎಸ್. ರಾಮಣ್ಣ ಹಾಗೂ ಕುಲಸಚಿವ ಪ್ರೊ ಸಿ.ಎ. ಸೋಮಶೇಖರಪ್ಪ ಪಾಲ್ಗೊಳ್ಳುವರು.