ಜಿಲ್ಲಾಧಿಕಾರಿ ಕಚೇರಿಗೆ ರೈತರ ಮುತ್ತಿಗೆ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 13
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಹಾವೇರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಮುರುಘರಾಜೇಂದ್ರ ಮಠದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ತೆರಳಿ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಲಾಯಿತು.
ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ರೈತರ ಬದುಕು ದುಸ್ತರವಾಗಿದೆ. ರಾಜ್ಯ ಸರ್ಕಾರ ರೈತರ ರು. 25 ಸಾವಿರ ಸಾಲವನ್ನು ಮನ್ನಾ ಮಾಡಿದೆ. ಆದರೆ ಅದರ ಹಣವನ್ನು ಈವರೆಗೂ ಸಹಕಾರಿ ಸಂಘಗಳಿಗೆ ಪಾವತಿಸಿಲ್ಲ. ಹೀಗಾಗಿ ರೈತರಿಗೆ ಹೊಸ ಸಾಲವೇ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುವರ್ಣಭೂಮಿ ಮುಂದುವರಿಸಿ
ಹಿಂದಿನ ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ ಸುವರ್ಣ ಭೂಮಿ ಯೋಜನೆಯನ್ನು ಹಾಲಿ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ಈ ಯೋಜನೆ ರೈತರ ಪರವಾಗಿತ್ತು. ಅತಿ ಸಣ್ಣ ರೈತರಿಗೆ ಕೊಂಚ ಅನುಕೂಲವಾಗುತ್ತಿತ್ತು. ಅದನ್ನು ಕೈಬಿಡುವ ಅಗತ್ಯವಾದರೂ ಏನಿತ್ತು? ಎಂದು ಕಿಡಿಕಾರಿದರು.
ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಯೊಂದು ರಾಜಕೀಯ ಪಕ್ಷದವರೂ ತಮ್ಮದು ರೈತಪರ ಪಕ್ಷ, ರೈತಪರ ಸರ್ಕಾರ ಎಂದು ಹೇಳಿಕೊಳ್ಳುತ್ತಲೇ ಬರುತ್ತಿದ್ದಾರೆ. ಆದರೆ ರೈತರಿಗಾಗಿ ಯಾವೊಂದು ಯೋಜನೆಯನ್ನೂ ಸರಿಯಾಗಿ ಜಾರಿಗೊಳಿಸುವುದಿಲ್ಲ. ಬರೀ ಹೇಳಿಕೆಗಳಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಳೆವಿಮೆ ಸಿಕ್ಕಿಲ್ಲ
ಎರಡು ವರ್ಷಗಳಿಂದ ರಾಜ್ಯದಲ್ಲಿ ಬರ ತಾಂಡವಾಡಿದೆ. ಜಿಲ್ಲೆಯಲ್ಲಿ ಬೆಳೆದ ಯಾವ ಬೆಳೆಯೂ ರೈತರ ಕೈಗೆ ಸಿಕ್ಕಿಲ್ಲ. ಈ ವರ್ಷ ಉತ್ತಮ ಮಳೆಯಾಗಿದೆ. ಆದರೆ ಕೆಲ ಪ್ರದೇಶಗಳಲ್ಲಿ ಅತಿವೃಷ್ಟಿಯಾಗಿ ಬೆಳೆ ಹಾನಿ ಅನುಭವಿಸುವಂತಾಗಿದೆ. ಕಳೆದ ಸಲ ಬೆಳೆವಿಮೆಯನ್ನು ಎಲ್ಲ ರೈತರಿಗೂ ನೀಡಬೇಕು ಎಂದು ಒತ್ತಾಯಿಸಿದರು.
ಕೆಲ ಬ್ಯಾಂಕುಗಳಲ್ಲಿ ರೈತರ ಬೆಳೆ ಸಾಲಕ್ಕೆ ಶೇ. 10.5ರಂತೆ ಬಡ್ಡಿ ವಿಧಿಸುತ್ತಿದ್ದು, ಶೇ. 4ರ ಬಡ್ಡಿ ಆಕರಿಸುವಂತೆ ಆದೇಶಿಸಬೇಕು. ರೈತರ ಜಾನುವಾರುಗಳು ಅಕಾಲಿಕ ಮರಣ ಹೊಂದಿದರೆ ಎಪಿಎಂಸಿ ವತಿಯಿಂದ ಪರಿಹಾರ ನೀಡಲು ಸೂಚಿಸಬೇಕು. ರೈತ ಸಂಜೀವಿನಿ ಯೋಜನೆ ಪರಿಹಾರವನ್ನು ರು. 1ರಿಂದ 5 ಲಕ್ಷಕ್ಕೇರಿಸಬೇಕು. ಗೋವಿನ ಜೋಳ ಬೆಂಬಲ ಬೆಲೆಯನ್ನು ರು. 3 ಸಾವಿರಕ್ಕೆ ಹಾಗೂ ಬತ್ತದ ಬೆಂಬಲ ಬೆಲೆ ರು. 3500ಕ್ಕೆ ನಿಗದಿಪಡಿಸಬೇಕು ಎಂದೂ ಆಗ್ರಹಿಸಲಾಯಿತು.
ಸಿದ್ದಪ್ಪ ವರ್ತುಳದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಅಕ್ಕಿವಳ್ಳಿ, ರಾಮಣ್ಣ ಕೆಂಚಳ್ಳೇರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.