ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಜಾತಿ, ಧರ್ಮಕ್ಕಿಂತ ದೇಶ ಮುಖ್ಯ

Lingaraj Badiger
Updated On : 16 Aug 2013, 11:53 am

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಆ. 15
ಜಾತಿ-ಧರ್ಮಗಳಿಗಿಂತ ದೇಶ ಮುಖ್ಯ. ಆದರೆ, ಈಚೆಗೆ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವ ಯುವಕರು ರಾಷ್ಟ್ರಪ್ರೇಮದಿಂದ ವಿಮುಖವಾಗುತ್ತಿದ್ದಾರೆ ಎಂದು ಶಾಸಕ ಬಸವರಾಜ ಶಿವಣ್ಣನವರ ಆತಂಕ ವ್ಯಕ್ತಪಡಿಸಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ಗುರುವಾರ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ 67ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದೇಶಕ್ಕಾಗಿ ನಾವು ಬದುಕಿದ್ದೇವೆ ಎಂಬ ಉದಾತ್ತ ಮನೋಭಾವನೆಯನ್ನು ಯುವಕರು ಹೊಂದಬೇಕು. ಸತ್ಯ, ಅಹಿಂಸೆ, ಸೌಹಾರ್ದ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಯುವಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಪ್ರಗತಿ ಸಾಧ್ಯ. ದೇಶದ ಸಾರ್ವಭೌಮತ್ವ ಉಳಿಸಲು ಯುವಕರು ಪಣ ತೊಡಬೇಕೆಂದರು.
ಜ್ವಲಂತ ಸಮಸ್ಯೆಗಳು
ಹೋರಾಟದ ಫಲವಾಗಿ ಬ್ರಿಟಿಷರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಗಾಂಧೀಜಿ ಕಂಡ ಭವ್ಯ ಭಾರತ ನಿರ್ಮಾಣದ ಕನಸು ನನಸಾಗಿಸಲು ಎಲ್ಲರೂ ಕಾರ್ಯೋನ್ಮುಖವಾಗಬೇಕಿದೆ. ಅದರೆ ಸ್ವಾತಂತ್ರ್ಯ ಸಿಕ್ಕಿ 67 ವರ್ಷ ಸಂದರೂ ದೇಶ ಜನಸಂಖ್ಯೆ, ಅನಕ್ಷರತೆ, ಭಯೋತ್ಪಾದನೆ, ನಿರುದ್ಯೋಗ, ಬಡತನ ಮುಂತಾದ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಸುಭಾಸ್ ಪುಲಾರೆ, ವಿವಿಧ ಧರ್ಮ, ಜಾತಿ, ಮತ, ಪಂಥ ಹಾಗೂ ಸಂಸ್ಕೃತಿಯ ಜನರನ್ನು ಒಳಗೊಂಡಿರುವ ಈ ದೇಶ ಜಾತ್ಯತೀತ ತಳಹದಿ ಹಿನ್ನೆಲೆಯಲ್ಲಿ ಪ್ರಜಾಪ್ರ ಭುತ್ವ ವ್ಯವಸ್ಥೆ ಹೊಂದಿದ್ದು, ವಿವಿಧತೆಯಲ್ಲಿ ಏಕತೆಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ನಮ್ಮ ದೇಶಕ್ಕೆ ಸಲ್ಲುತ್ತದೆ ಎಂದರು.
ನಿವೃತ್ತ ಪ್ರಾಚಾರ್ಯ ವಿ.ಎಂ. ಕೋಗನೂರಮಠ ಅತಿಥಿ ಉಪನ್ಯಾಸ ನೀಡಿದರು. ಸ್ವಾತಂತ್ರ್ಯ ಹೋರಾಟಗಾರರಾದ ಎಸ್.ಆರ್. ಮಹಾರಾಜಪೇಟ, ಪುಟ್ಟಪ್ಪ ಹರಬೀಮನಿ, ಮಳ್ಳಪ್ಪ ಕೊಪ್ಪದ, ನಾಗಪ್ಪ ಕುಲಕರ್ಣಿ, ಮಾಜಿ ಸೈನಿಕರಾದ ವೀರಪ್ಪ ಧನ್ನೂರ, ರಾಜಶೇಖರ ಹೊಸಳ್ಳಿ, ಶಹನಾಯಿ ವಾದಕ ಚಂದ್ರಪ್ಪ ಭಜಂತ್ರಿ ಅವರನ್ನು ಸನ್ಮಾನಿಸಲಾಯಿತು.
ಇದಕ್ಕೂ ಮುನ್ನ ನಗರದ ಪ್ರಮುಖ ಬೀದಿಗಳಲ್ಲಿ ಮಹಾತ್ಮ ಗಾಂಧಿಯವರ ಭಾವಚಿತ್ರದ ಮೆರವಣಿಗೆ ಜರುಗಿತು, ಪೊಲೀಸ್, ಎನ್‌ಸಿಸಿ, ಸ್ಕೌಟ್ಸ್-ಗೈಡ್ಸ್, ಸೇವಾದಳ ಮತ್ತು ವಿವಿಧ ಶಾಲೆಯ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ತಾಪಂ ಅಧ್ಯಕ್ಷ ಚಿನ್ನವ್ವ ಪಾಸಿ, ಉಪಾಧ್ಯಕ್ಷ ಚಂದ್ರಣ್ಣ ಮುಚ್ಚಟ್ಟಿ, ಎಪಿಎಂಸಿ ಅಧ್ಯಕ್ಷ ರವೀಂದ್ರ ಪಟ್ಟಣಶೆಟ್ಟಿ, ಸದಸ್ಯ ರಮೇಶ್ ಸುತ್ತಕೋಟಿ, ಪುರಸಭೆ ಸದಸ್ಯರಾದ ಮುನಾಫ್ ಎರೆಶೀಮಿ, ರೋಹಿಣಿ ಹುಣಸೀಮರದ, ಮಂಜುನಾಥ ಬೋವಿ, ಸುಧಾ ಕಳ್ಳಿಹಾಳ, ನಜೀರ್ ಶೇಖ್, ಶಾಂತಮ್ಮ ಬೇವಿನಮಟ್ಟಿ, ತಾಲೂಕು ಬಿಜೆಪಿ ಧ್ಯಕ್ಷ ರಾಮಣ್ಣ ಉಕ್ಕುಂದ, ಕಾಂಗ್ರೆಸ್ ಅಧ್ಯಕ್ಷ ಹುಸೇನ್‌ಸಾಬ್ ದೊಡ್ಮನಿ, ಜೆಡಿಎಸ್ ಅಧ್ಯಕ್ಷ ಮೋಹನ ಬಿನ್ನಾಳ, ಕರವೇ ಅಧ್ಯಕ್ಷ ಎ.ಬಿ. ಪರಮೇಶ್ವರಪ್ಪ ಇದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ ಸ್ವಾಗತಿಸಿದರು. ಬಿ.ಎಫ್. ದೊಡ್ಡಮನಿ ನಿರೂಪಿಸಿದರು. ಸಮನ್ವಯಾಧಿಕಾರಿ ಜಿ. ಸುಮಾ ವಂದಿಸಿದರು. ಬಳಿಕ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement