ಯುವ ಕವಿಗೋಷ್ಠಿ, ಸಾಹಿತ್ಯ ಸಂವಾದ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 15
ಸಾಹಿತಿ ಕಲಾವಿದರ ಬಳಗ ಮತ್ತು ವಾರ್ತಾ ಇಲಾಖೆಯ ಆಶ್ರಯದಲ್ಲಿ ಸಾಹಿತ್ಯ ಸಂವಾದ-21 ಮತ್ತು ಯುವ ಕವಿಗೋಷ್ಠಿ ಇಲ್ಲಿಯ ವಾರ್ತಾ ಭವನದಲ್ಲಿ ಜರುಗಿತು. ಹುಬ್ಬಳ್ಳಿಯ ರಾಜ್ಯ ಸಮಾಚಾರ ಕೇಂದ್ರಕ್ಕೆ ಹಿರಿಯ ಅಧಿಕಾರಿಯಾಗಿ ಬಡ್ತಿ ಹೊಂದಿದ ಸಿ.ಪಿ. ಮಾಯಾಚಾರಿ ಜತೆ ಸಾಹಿತ್ಯ ಸಂವಾದ ನಡೆಯಿತು.
ಹಿರಿಯ ಕಲಾವಿದ ಸಿ.ಎ. ಕೂಡಲಮಠ ಸಂವಾದಕ್ಕೆ ಚಾಲನೆ ನೀಡಿ, ಯುವ ಜನಾಂಗಕ್ಕೆ ಸ್ಫೂರ್ತಿ ಕೊಡುವ ಮತ್ತು ವೈಚಾರಿಕ ಜಾಗೃತಿ ಮೂಡಿಸುವ ಸಂವಾದಗಳು ಹೆಚ್ಚು ಅರ್ಥಪೂರ್ಣ ಎಂದರು.
ಮಾಯಾಚಾರಿ ಮಾತನಾಡಿ, ಸಂವಾದಗಳು ವಿಚಾರಗಳನ್ನು ಕಟ್ಟಿಕೊಡುತ್ತವೆ. ಕಾವ್ಯಕ್ಕೆ ಪ್ರಯೋಗಶೀಲತೆ ಬಹಳ ಮುಖ್ಯ, ಭಾಷೆ ಮತ್ತು ಅನುಭವಗಳು ಕವಿತೆಯ ಒಳಸತ್ವಗಳಾದರೆ, ಪ್ರಯೋಗಶೀಲತೆ ಕಾವ್ಯದ ಬಾಹ್ಯ ಸೌಂದರ್ಯ ಹೆಚ್ಚಿಸುತ್ತದೆ. ಆ ದಿಶೆಯಲ್ಲಿ ಯುವ ಕವಿಗಳು ಕಾವ್ಯ ರಚಿಸಬೇಕೆಂದು ಸಲಹೆ ನೀಡಿದರು.
ವಾರ್ತಾಧಿಕಾರಿ ಎಂ. ಜುಂಜಣ್ಣ ಅಧ್ಯಕ್ಷತೆ ವಹಿಸಿ, ಹಾವೇರಿಯ ಸಾಂಸ್ಕೃತಿಕ ವಾತಾವರಣ ತುಂಬ ಪ್ರಬುದ್ಧವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಯಾಗಿದ್ದ ಎಸ್.ಬಿ. ಕಿನ್ನಾಳ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆ ಮೂಲಕ ನೌಕರರು ಒತ್ತಡ ಕಡಿಮೆ ಮಾಡಿಕೊಳ್ಳಬಹುದು ಎಂದರು.
ಸಿ.ಪಿ. ಮಾಯಾಚಾರಿ ಅವರನ್ನು ಸಾಹಿತಿ-ಕಲಾವಿದರ ಬಳಗದ ಪರವಾಗಿ ಸಿ.ಎ. ಕೂಡಲಮಠ, ಎಸ್.ಆರ್. ಹಿರೇಮಠ, ವಿ.ಎಂ. ಪತ್ರಿ, ಕವಿಪ್ರನಿ ನೌಕರರ ಸಂಘದ ಪರವಾಗಿ ಸ್ಥಳೀಯ ಸಮಿತಿಯ ಅಧ್ಯಕ್ಷ ಎಂ.ಎಸ್. ಕುಮ್ಮೂರ, ಕಾರ್ಯದರ್ಶಿ ಸಿ.ಎನ್. ಬಡ್ನಿ, ಅಶೋಕ ಸಾಳುಂಕೆ ಹಾಗೂ ಎಸ್.ವಿ. ಕುಲಕರ್ಣಿ ಸನ್ಮಾನಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಎಸ್.ಬಿ. ತಿನ್ನಾಳ, ಶಂಕರ ಸುತಾರ, ಸಿ.ವಿ. ಹಿರೇಮಠ, ಬಸವರಾಜ ಕಮತದ ಅವರೂ ಸನ್ಮಾನಿಸಿದರು.
ಯುವ ಕವಿಗೋಷ್ಠಿಯಲ್ಲಿ ಸುರೇಖಾ ನೆರಳೆಕರ, ದೀಪಾ ಗೋನಾಳ, ಕೃಷ್ಣಾ ಜವಳಿ, ಸೀತಾರಾಮ ಕಣೆಕಲ್, ಪುಟ್ನಂಜ ಯಲಗಚ್ಚ, ತೇಜಪ್ಪ ಮಡಿವಾಳ, ವೀರೇಶ ಹ್ಯಾಡ್ಲ, ಗುಡ್ಡಪ್ಪ ಚಟ್ರಮ್ಮನವರ, ಮಹಾಂತೇಶ ಮರಿಗೂಳಪ್ಪನವರ, ಚಂದ್ರಶೇಖರ ಸಾಕ್ರೆಗೌಳಿ, ಮೌಲಾಲಿ ಶಿಗ್ಲಿ ಕಾವ್ಯವಾಚನ ಮಾಡಿದರು. ಮಹೇಶ ವಾಗತ್ತಿ ಕವಿಗೋಷ್ಠಿ ನಡೆಸಿದರು.
ಸಿ.ಎನ್. ಬಡ್ನಿ ಪ್ರಾರ್ಥನೆ ಹಾಡಿದರು. ಎಸ್.ಆರ್. ಹಿರೇಮಠ ನಿರೂಪಿಸಿದರು. ವಿ.ಎಂ. ಪತ್ರಿ ವಂದಿಸಿದರು.