ಕಾಂಗ್ರೆಸ್ ಸೋಲಿಸಲು ಹೊಂದಾಣಿಕೆ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 16
ಜನವಿರೋಧಿ ನೀತಿ ಹೇರುತ್ತಿರುವ ಕಾಂಗ್ರೆಸ್ನ್ನು ದೇಶ ಹಾಗೂ ರಾಜ್ಯದಿಂದ ಮುಕ್ತ ಮಾಡಬೇಕೆಂಬ ಉದ್ದೇಶದಿಂದ ಕೆಜೆಪಿ ಮತ್ತು ಬಿಜೆಪಿ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿದ್ದು, ಇದು ಮುಂಬರುವ ಲೋಕಸಭೆ ಚುನಾವಣೆಯ ದಿಕ್ಸೂಚಿಯೂ ಆಗಲಿದೆ.
ಇಂತಹದೊಂದು ಒಕ್ಕೊರಲಿನ ಅಭಿಪ್ರಾಯ ಹಾವೇರಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೆಜೆಪಿ-ಬಿಜೆಪಿ ಕಾರ್ಯಕರ್ತರ ಮತ್ತು ಮುಖಂಡ ಸಭೆಯಲ್ಲಿ ಕೇಳಿ ಬಂದಿತು. ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ-ಕೆಜೆಪಿ ಪಕ್ಷಗಳು ಚುನಾವಣೆ ಹೊಂದಾಣಿಕೆ ಮಾಡಿಕೊಂಡಿವೆ. ಅದಕ್ಕಾಗಿಯೇ ಕೆಜೆಪಿಯಿಂದ ಸ್ಪರ್ಧಿಸಿದ್ದ ಶಿವರಾಜ ಸಜ್ಜನರ ಹಿಂದೆ ಸರಿದಿದ್ದಾರೆ.
ಮುಂದೆಯೂ ಹೊಂದಾಣಿಕೆ: ಮುಂದಿನ ಲೋಕಸಭೆ ಚುನಾವಣೆಯಲ್ಲೂ ಇದೇ ರೀತಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಸಭೆಯಲ್ಲಿ ಮಾತನಾಡಿದ ಕೆಜೆಪಿ ಹಾಗೂ ಬಿಜೆಪಿ ಮುಖಂಡರು ಸ್ಪಷ್ಟಪಡಿಸಿದರು. ಅಲ್ಲದೆ ಬಿಜೆಪಿ ಇಬ್ಭಾಗವಾಗಿದ್ದರಿಂದಲೇ ಕಾಂಗ್ರೆಸ್ ರಾಜ್ಯದ ಗದ್ದುಗೆಗೆ ಏರಲು ಸಾಧ್ಯವಾಯಿತು ಎಂದು ಪ್ರಾಯಶ್ಚಿತ್ತ ಪಟ್ಟುಕೊಂಡರು.
ಪರಿಷತ್ ಚುನಾವಣೆಯಲ್ಲಿ ಯಾರಿಗೆ ಮತ ನೀಡಬೇಕೆಂಬ ಚಿಂತೆಯಲ್ಲಿದ್ದ ಕೆಜೆಪಿ ಸದಸ್ಯರ ಗೊಂದಲಗಳಿಗೆ ಇದೀಗ ತೆರೆ ಬಿದ್ದಂತಾಗಿದೆ. ಮೂರು ದಿನಗಳ ಹಿಂದೆಯಷ್ಟೆ ಕೆಜೆಪಿ ಕಾರ್ಯಕರ್ತರ ಸಭೆ ನಡೆಸಲಾಗಿತ್ತಾದರೂ, ಬಿಜೆಪಿಗೆ ಬೆಂಬಲಿಸುವುದಕ್ಕೆ ಕೆಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರಿಂದ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗದೇ ಸಭೆಯನ್ನು ಮೊಟಕುಗೊಳಿಸಲಾಗಿತ್ತು.
ತದನಂತರ ಮಾಜಿ ಸಚಿವ ಸಿ.ಎಂ. ಉದಾಸಿ ಅವರು ಕೆಜೆಪಿ ವರಿಷ್ಠ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದ್ದರು. ಎರಡು ಪಕ್ಷಗಳು ಜಂಟಿಯಾಗಿ ಚುನಾವಣೆ ನಡೆಸಲು ಅಲ್ಲಿಂದ ಹಸಿರು ನಿಶಾನೆ ದೊರೆತಿದ್ದರಿಂದ ಶುಕ್ರವಾರ ಜಂಟಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಪಾಲ್ಗೊಂಡವರೆಲ್ಲ ಒಗ್ಗಟ್ಟಿನ ಜಪ ಪಠಿಸಿದರಲ್ಲದೆ, ಮತ ವಿಭಜನೆಯಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದು ಮುಖಂಡರೆಲ್ಲ ಅಭಿಪ್ರಾಯ ಪಟ್ಟರು.
ಸಭೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ಅಧಿಕಾರಕ್ಕೆ ಬಂದ ಮೂರೇ ತಿಂಗಳಲ್ಲಿ ದುರಾಡಳಿತ ನಡೆಸುತ್ತಿರುವ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬೇಕೆಂದರೆ ವಿರೋಧ ಪಕ್ಷಗಳ ಒಗ್ಗೂಡುವಿಕೆ ಅತ್ಯಗತ್ಯ. ಹೀಗಾಗಿ ಈ ಚುನಾವಣಾ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ. ಇದು ಬಿಎಸ್ವೈ ನಿರ್ಣಯ ಇದಕ್ಕೆ ಕೆಜೆಪಿ ಪಕ್ಷದ ಮತದಾರರೆಲ್ಲ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಪರವಾಗಿ ಮತ ಚಲಾಯಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಎಲ್ಲಿಯೂ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಬರೀ ದುರಾಡಳಿತವೇ ಬಹುಪಾಲಾಗಿದೆ. ದೇಶ ಹಾಗೂ ರಾಜ್ಯದಲ್ಲಿ ವಿರೋಧ ಪಕ್ಷಗಳು ಒಗ್ಗೂಡುವುದರಿಂದ ಮಾತ್ರ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಬಹುದಾಗಿದೆ. ನಮ್ಮಲ್ಲಿನ ಒಡಕಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ರಾಪಂ ಅಧಿಕಾರ ಮೊಟಕುಗೊಳಿಸುವ ಹುನ್ನಾರ ನಡೆಸುತ್ತಿದೆ ಎಂದು ಉದಾಸಿ ಕಿಡಿಕಾರಿದರು.
ನಮ್ಮ ಒಡಕಿನಿಂದ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ನಮ್ಮಲ್ಲಿನ ಒಡಕಿನಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆಯೇ ಹೊರತು ಜನತೆ ಪ್ರೀತಿ-ವಿಶ್ವಾಸದಿಂದ ಅದನ್ನು ಅಧಿಕಾರದ ಗದ್ದುಗೆಗೇರಿಸಿಲ್ಲ. ಮತ್ತೆ ವಿರೋಧ ಪಕ್ಷಗಳು ಒಂದಾಗುತ್ತಿವೆ. ಇದರಿಂದಾಗಿ ನಮ್ಮ ಬಲ ಹೆಚ್ಚುತ್ತದೆ. ಇದು ಕಾಂಗ್ರೆಸ್ನಲ್ಲಿ ನಡುಕ ಹುಟ್ಟಿಸಿದೆ ಎಂದರು.
ಅಧಿಕಾರದಿಂದ ಕಾಂಗ್ರೆಸ್ ದೂರವಿಡಲು ಚುನಾವಣಾ ಹೊಂದಾಣಿಕೆ ಅಗತ್ಯವಾಗಿತ್ತು. ಇದೀಗ ಒಗ್ಗಟ್ಟಾಗಿದ್ದೇವೆ. ಬಿಜೆಪಿಯ ಜನ ಹಾಗೂ ರೈತ ಪರ ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದೂ ಶೆಟ್ಟರ್ ದೂರಿದರು. ಅಧಿಕಾರದ ಮದ ಏರಿದ ಕಾಂಗ್ರೆಸ್ಗೆ ಪ್ರಸಕ್ತ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ಅವರಿಗೆ ಮತ ನೀಡುವಂತೆ ವಿನಂತಿಸಿಕೊಂಡರು.
ಶಾಸಕರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಯು.ಬಿ. ಬಣಕಾರ, ಮಾಜಿ ಶಾಸಕರಾದ ನೆಹರೂ ಓಲೇಕಾರ್, ಶಿವರಾಜ ಸಜ್ಜನರ್, ಮೋಹನ ಲಿಂಬಿಕಾಯಿ, ಕೆಜೆಪಿ ಜಿಲ್ಲಾಧ್ಯಕ್ಷ ಮೈಲಪ್ಪ ಗುಡುಗೂರು, ಬಿಜೆಪಿ ನಗರಾಧ್ಯಕ್ಷ ಶಿವಲಿಂಗಪ್ಪ ಕಲ್ಯಾಣಿ, ಬಿಜೆಪಿ ಮುಖಂಡ ರಂಗಾಬದ್ದಿ ಪಾಲ್ಗೊಂಡಿದ್ದರು.
ಬೇವಿನಮರದ ಗೈರು...
ಹಾವೇರಿ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಕೆಜೆಪಿ ಶುಕ್ರವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರೂ ಆಗಿರುವ ಬಿಜೆಪಿ ಜಿಲ್ಲಾಧ್ಯಕ್ಷ ಸೋಮಣ್ಣ ಬೇವಿನಮರದ ಗೈರು ಎದ್ದುಕಾಣುತ್ತಿತ್ತು. ಜಿಲ್ಲೆಯ ಬಿಜೆಪಿ ಪ್ರಮುಖರೂ ಸಭೆಯಲ್ಲಿ ಕಾಣಿಸಲಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾದ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರಲಿಲ್ಲ. ಸೋಮಣ್ಣ ಬೇವಿನಮರದ ಹಾಗೂ ಅವರ ಬೆಂಬಲಿಗರಿಗೆ ಈ ಹೊಂದಾಣಿಕೆ ಇಷ್ಟವಿಲ್ಲವೇ ಎಂಬ ಪ್ರಶ್ನೆ ಸಭೆಯಲ್ಲಿದ್ದ ಕಾರ್ಯಕರ್ತರಿಂದ ಕೇಳಿ ಬಂದಿತ್ತು. ಬ್ಯಾಡಗಿ ಮಾಜಿ ಶಾಸಕ ಸುರೇಶಗೌಡ ಪಾಟೀಲರೂ ಗೈರಾಗಿದ್ದರು.
ಎರಡೂ ಪಕ್ಷಗಳ ಶಾಲು: ಬಿಜೆಪಿ-ಕೆಜೆಪಿ ಜಂಟಿ ಸಭೆಯಲ್ಲಿ ಪಾಲ್ಗೊಂಡ ಮುಖಂಡರಿಗೆ ಎರಡೂ ಪಕ್ಷಗಳ ಶಾಲು ಹೊದಿಸುವ ಮೂಲಕ ಉಭಯ ಪಕ್ಷಗಳು ಇದೀಗ ಒಗ್ಗಟ್ಟಾಗಿವೆ ಎಂಬುದನ್ನು ಸಾಬೀತು ಪಡಿಸಲಾಯಿತು. ಸಭೆ ಆರಂಭವಾಗುತ್ತಿದ್ದಂತೆ ಕೆಜೆಪಿ ಮುಖಂಡ ಹಾಗೂ ಮಾಜಿ ಶಾಸಕ ನೆಹರೂ ಓಲೇಕಾರ್ ಸ್ವಾಗತ ಕೋರುತ್ತಿದ್ದರು. ಓಲೇಕಾರ್ ಅವರು ಆರಂಭದಲ್ಲಿ ಸಭೆಯ ನೇತೃತ್ವ ವಹಿಸಿರುವ ಮಾಜಿ ಸಚಿವ ಸಿ.ಎಂ. ಉದಾಸಿ ಅವರಿಗೆ ಶಾಲು ಹೊದೆಸಿ ಕೆ.ಸಿ. ಕೋರಿ ಸ್ವಾಗತಿಸಬೇಕೆಂದು ಹೇಳಿದರು. ಆದರೆ ಯಾವ ಪಕ್ಷದ ಶಾಲು ಹೊದೆಸಬೇಕೆಂದು ಗೊತ್ತಾಗದೆ ಕೋರಿಯವರು, ಯಾವ ಪಕ್ಷದ ಶಾಲು ಹೊದೆಸಲಿ ಎಂದು ಮಾಜಿ ಶಾಸಕರನ್ನೇ ಕೇಳಿದರು. ಆಗ ಓಲೇಕಾರ್ ಅವರು ಎರಡೂ ಪಕ್ಷಗಳ ಶಾಲು ಹೊದೆಸುವಂತೆ ಸೂಚಿಸಿದರು. ಆಮೇಲೆ ಎಲ್ಲ ಮುಖಂಡರಿಗೂ ಎರಡೂ ಪಕ್ಷಗಳ ಶಾಲು ಹೊದೆಸಲಾಯಿತು.