ತಲೆ ತಗ್ಗಿಸುವಂತೆ ಮಾಡಿದ ಕಾಂಗ್ರೆಸ್: ಶೆಟ್ಟರ್
ಹಾನಗಲ್ಲ: ಸಿದ್ದರಾಮಯ್ಯ ಕೇವಲ ತಾಂತ್ರಿಕ ಮುಖ್ಯಮಂತ್ರಿ, ಬಿಜೆಪಿ ಒಳಜಗಳದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಈಗ ಕರಾಳ ಮಸೂದೆಗಳ ಮೂಲಕ ಗ್ರಾಪಂ ವ್ಯವಸ್ಥೆಯನ್ನು ದಿವಾಳಿ ತೆಗೆಯುತ್ತಿದ್ದಾರೆ. 43 ಹೊಸ ತಾಲೂಕು ರಚನೆಗೆ ಅಡ್ಡ ಮಾಡಿದರು. ಕೇಂದ್ರದ ಯುಪಿಎ ಸರ್ಕಾರದ ನೀತಿಯಿಂದಾಗಿ ದೇಶ ಜಗತ್ತಿನ ಮುಂದೆ ತಲೆ ತಗ್ಗಿಸುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಖೇದ ವ್ಯಕ್ತಪಡಿಸಿದರು.
ಶುಕ್ರವಾರ ಸಂಜೆ ಹಾನಗಲ್ಲ ನಗರದ ಉದಾಸಿ ಸಾವಿತ್ರಮ್ಮ ಕಲ್ಯಾಣ ಮಂಟಪದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರಾರ್ಥ ಆಯೋಜಿಸಿದ ತಾಲೂಕಿನ ಜನಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ಕೆಜೆಪಿ-ಬಿಜೆಪಿ-ಜೆಡಿಎಸ್ ಹಾಲಿ ಚುನಾವಣೆಯಲ್ಲಿ ಒಂದಾಗಿ ಕಾಂಗ್ರೆಸ್ ಕಿತ್ತೊಗೆಯುವ ಚುನಾವಣೆಯಾಗಿ ರೂಪುಗೊಂಡಿದೆ ಎಂದರು.
ಮಾಜಿ ಸಚಿವ ಸಿ.ಎಂ. ಉದಾಸಿ ಮಾತನಾಡಿ, ರಾಜ್ಯ ಹಾಗೂ ರಾಷ್ಟ್ರದ ಭವಿಷ್ಯಕ್ಕಾಗಿ ಈಗ ನಾವೆಲ್ಲ ಎಚ್ಚೆತ್ತುಕೊಳ್ಳಬೇಕಿದೆ. ಕಾಂಗ್ರೆಸ್ ಆಡಳಿತದಲ್ಲಿ ದೇಶ ಅಭದ್ರತೆ ಎದುರಿಸುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಆರ್ಥಿಕ ದಿವಾಳಿತನ ಆರಂಭವಾಗಿದೆ. ಈಗ ಮತ ಶಕ್ತಿಯಾಗಿ ಪರಿವರ್ತನೆಯಾಗಿ, ದೇಶ ಉಳಿಸಬೇಕಿದೆ ಎಂದರು.
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಾರದಲ್ಲಿ ಮೂರು ಬಾರಿ ದೆಹಲಿಗೆ ದೌಡಾಯಿಸುತ್ತಾರೆ. ಗ್ರಾಪಂ ಸದಸ್ಯರನ್ನು ಜೈಲಿಗೆ ಕಳಿಸುವ ಕಾನೂನು ಜಾರಿಗೆ ತರುತ್ತಿರುವ ಕಾಂಗ್ರೆಸ್ ಸರ್ಕಾರದ ಬಗ್ಗೆ ಎಚ್ಚರಿಕೆ ಇರಲಿ ಎಂದರು.
ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಪಾಕಿಸ್ತಾನ, ಚೀನಾ ದಾಳಿ ಮಾಡಿದರೂ ಮಾತನಾಡದ ಪ್ರಧಾನಿ ಮನಮೋಹನ ಸಿಂಗ್ ಈ ದೇಶವನ್ನು ರಕ್ಷಿಸಬಲ್ಲರೇ? ಮತ್ತೆ ಗುಲಾಮಗಿರಿ ತಂದೊಡ್ಡುವ ಹುನ್ನಾರ ಕಾಂಗ್ರೆಸ್‌ನದು ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಮತ ವಿಭಜನೆಯಿಂದಾಗಿ ಕೆಜೆಪಿ-ಬಿಜೆಪಿ ಸೋತು ಶಿಕ್ಷೆ ಅನುಭವಿಸುತ್ತಿದ್ದೇವೆ. ಮತ ಹಂಚಬಾರದು ಎಂದು ಮಾತ್ರವಲ್ಲ, ಮುಂದೆಯೂ ಒಂದಾಗಿಯೇ ಇರುತ್ತೇವೆ. ದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.
ವಿಧಾನ ಪರಿಷತ್ ಸದಸ್ಯ ಕವಟಗಿಮಠ, ಮೋಹನ ಲಿಂಬಿಕಾಯಿ, ರಂಗಾ ಬದ್ದಿ, ಜಿಪಂ ಉಪಾಧ್ಯಕ್ಷೆ ಗೀತಾ ಅಂಕಸಖಾನಿ, ಕೆಜೆಪಿ ತಾಲೂಕು ಅಧ್ಯಕ್ಷ ಎಂ.ಆರ್. ಪಾಟೀಲ, ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷೆ ಅನಿತಾ ಶಿವೂರ, ಜಿಪಂ ಸದಸ್ಯರಾದ ಪದ್ಮನಾಭ ಕುಂದಾಪುರ, ಕಸ್ತೂರೆವ್ವ ವಡ್ಡರ, ಎಂ.ಬಿ. ಕಲಾಲ, ಬಿ.ಎಸ್. ಅಕ್ಕಿವಳ್ಳಿ, ಎ.ಎಸ್. ಬಳ್ಳಾರಿ, ಬಸಣ್ಣ ಸಂಶಿ, ಶಿದ್ದಲಿಂಗಪ್ಪ ಶಂಕ್ರಿಕೊಪ್ಪ, ಉಜ್ಜನಗೌಡ ಪಾಟೀಲ, ಮಾಲತೇಶ ಸೊಪ್ಪಿನ್, ಹಸೀನಾಬಿ ನಾಯ್ಕನವರ, ಶಿವಲಿಂಗಪ್ಪ ತಲ್ಲೂರ ಇದ್ದರು. ವಿಧಾನ ಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನರ ಪ್ರಾಸ್ತಾವಿಕ ಮಾತನಾಡಿದರು. ಕಲ್ಯಾಣಕುಮಾರ ಶೆಟ್ಟರ ನಿರೂಪಿಸಿದರು. ರವಿ ಕಲಾಲ ವಂದಿಸಿದರು.