ಬೆಂಬಲಿಗರ ಒತ್ತಡಕ್ಕೆ ಮಣಿದ ಸಚಿವ ತಂಗಡಗಿ
ಗಂಗಾವತಿ: ಸಚಿವ ತಂಗಡಗಿ ವರ್ಗಾವಣೆ ಪರ್ವ ಮುಂದುವರಿದಿದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿಯನ್ನು ವರ್ಗಾವಣೆ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದ ತಂಗಡಗಿ ಈಗ ಪ್ರಾದೇಶಿಕ ಅರಣ್ಯಾಧಿಕಾರಿ ಹನುಮಂತಯ್ಯ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ. ಬೆಂಬಲಿಗರ ಒತ್ತಡಕ್ಕೆ ಮಣಿದು ತಂಗಡಗಿ ವರ್ಗಾವಣೆ ಮಾಡಿಸಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ.
ಅರಣ್ಯ ಪ್ರದೇಶ ಒತ್ತುವರಿಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರಾದೇಶಿಕ ಅರಣ್ಯಾಧಿಕಾರಿ ಹನುಮಂತಯ್ಯ ಅವರನ್ನು ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ. ತಿಂಗಳ ಹಿಂದೆ ಗಂಗಾವತಿ ತಾಲೂಕಿನ ಆಕಳಕುಂಪಿ ಗ್ರಾಮದಲ್ಲಿ ಅರಣ್ಯ ಇಲಾಖೆ ವ್ಯಾಪ್ತಿಯ ಪ್ರದೇಶವನ್ನು ಸಣ್ಣ ನೀರಾವರಿ ಮತ್ತು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಬೆಂಬಲಿಗರಾಗಿರುವ ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ, ಸಹೋದರರು ಒತ್ತುವರಿ ಮಾಡಲು ಮುಂದಾಗಿದ್ದರು. ವಲಯ ಅರಣ್ಯಾಧಿಕಾರಿ ಹನುಮಂತಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ಹಲ್ಲೆ ಪ್ರತಿ ಹಲ್ಲೆ ನಡೆದು ವಿವಾದ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಹನುಮಂತಯ್ಯ ಆಕ್ಷೇಪ ವ್ಯಕ್ತಪಡಿಸಿದ್ದೇ ಅವರಿಗೆ ಮುಳುವಾಗಿ ಪರಿಣಮಿಸಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ಹೊಸದುರ್ಗಕ್ಕೆ ಎತ್ತಂಗಡಿ: ಒಂದೂವರೆ ವರ್ಷದ ಹಿಂದೆ ಗಂಗಾವತಿ ವಲಯ ಅರಣ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಹನುಮಂತಯ್ಯ ಅವರನ್ನು ಈಗ ಚಿತ್ರದುರ್ಗ ಜಿಲ್ಲೆ ಹೊಸದುರ್ಗಕ್ಕೆ ಎತ್ತಂಗಡಿ ಮಾಡಲಾಗಿದೆ. ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನವರಾಗಿರುವ ವಲಯ ಅರಣ್ಯಾಧಿಕಾರಿ ಹನುಮಂತಯ್ಯ ಅವರು ಗಂಗಾವತಿಗೆ ವರ್ಗವಾಗಿದ್ದರು. ಈ ಅವಧಿಯಲ್ಲಿ ಅರಣ್ಯ ಪ್ರದೇಶ ಒತ್ತುವರಿಗೆ ಆಸ್ಪದೆ ನೀಡದೆ ಅರಣ್ಯ ಸಂರಕ್ಷಣೆಗೆ ಮುಂದಾಗಿದ್ದರು. ಅಲ್ಲದೆ ಚಿರತೆಗಳನ್ನು ಸೆರೆ ಹಿಡಿದು ಸಂರಕ್ಷಿಸಿದ್ದರು. ಈಗ ವರ್ಗಾವಣೆ ಮಾಡಿ ಅವರ ಸ್ಥಳಕ್ಕೆ ಗುರುನಗೌಡ ಪಾಟೀಲ ಎನ್ನುವವರನ್ನು ನೇಮಿಸಲಾಗಿದೆ.
ವರ್ಗಾವಣೆ ಪರ್ವ: ಕೊಪ್ಪಳ ಜಿಲ್ಲಾಧಿಕಾರಿ ವರ್ಗಾವಣೆಯಾಗುತ್ತಿದ್ದಂತೆ ಈಗ ಗಂಗಾವತಿ ತಾಲೂಕಿನಲ್ಲಿ ವರ್ಗಾವಣೆ ಪರ್ವ ಪ್ರಾರಂಭವಾಗಿದೆ. ಕಂದಾಯ ಅಧಿಕಾರಿ ವರ್ಗಾವಣೆ ಅನಂತರ ಈಗ ವಲಯ ಅರಣ್ಯಾಧಿಕಾರಿ ಹನುಮಂತಯ್ಯ ವರ್ಗಾವಣೆಗೊಂಡಿದ್ದಾರೆ. ಅಲ್ಲದೆ ಇನ್ನೂ ಹಲವು ಅಧಿಕಾರಿಗಳು ಈ ಲೀಸ್ಟ್ನಲ್ಲಿದ್ದು, ಶೀಘ್ರದಲ್ಲಿ ಈ ಅಧಿಕಾರಿಗಳು ವರ್ಗಾವಣೆಗೊಂಡರೂ ಆಶ್ಚರ್ಯ ಪಡಬೇಕಾಗಿಲ್ಲ ಎಂಬ ಮಾತುಗಳು ಸರ್ಕಾರಿ ಇಲಾಖೆಗಳಲ್ಲಿ ಚರ್ಚೆ ನಡೆದಿದೆ.
ಕೆಎಟಿಗೆ ಮನವಿ: ದಿಢೀರ್ ವರ್ಗಾವಣೆ ಮಾಡಿದ್ದ ಹಿನ್ನೆಲೆಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಹನುಮಂತಯ್ಯ ಅವರು ಕೆಎಟಿಗೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಬೆಂಬಲಿಗರ ಮಾತು ಕೇಳಿ ಸಚಿವರು ತಮ್ಮನ್ನು ವರ್ಗಾಯಿಸಿರುವುದಕ್ಕೆ ನೋವು ಉಂಟಾಗಿದೆ ಎಂದು ಹನುಮಂತಯ್ಯ ಅಭಿಪ್ರಾಯಿಸಿದ್ದಾರೆ.