ಕಾವ್ಯಕ್ಕೆ ಗುಟ್ಟು ರಟ್ಟಾಗಿಸುವ ಶಕ್ತಿ
ಹಾನಗಲ್ಲ: ಕಾವ್ಯ ಚುಟುಕಾಗಿರಲಿ, ಮಿತ ಹಿತವಾಗಿರಲಿ, ಅದು ಮನಸ್ಸು ಮುಟ್ಟಲಿ. ಬದುಕನ್ನು ತಟ್ಟಲಿ, ಗುಟ್ಟು ಗುಟ್ಟಾಗಿರುವ ಸಂಗತಿಗಳನ್ನು ರಟ್ಟು ಮಾಡುವ ಶಕ್ತಿ ಕಾವ್ಯಕ್ಕಿದೆ ಎಂದು ಮುಂಡಗೋಡ ಲೋಯಲಾ ಡಿಇಡಿ ಕಾಲೇಜಿನ ಪ್ರಾಚಾರ್ಯ ಪ್ರಸನ್ನಕುಮಾರ ಮೈಸೂರು ಅಭಿಪ್ರಾಯಪಟ್ಟರು.
ಹಾನಗಲ್ಲಿನಲ್ಲಿ ಚುಟುಕ ಸಾಹಿತ್ಯ ಪರಿಷತ್ತು ಏರ್ಪಡಿಸಿದ ಚುಟುಕ ಕಾವ್ಯಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಹಿತ್ಯದಲ್ಲಿ ರಾಜಕಾರಣ ಬೆರೆಸಬೇಡಿ, ಬರಿ ವ್ಯಂಗ್ಯ-ಕಟಕಿಗೆ ಚುಟುಕು ಸಾಹಿತ್ಯ ಎಂಬ ಮಾತು ಬೇಡ. ಕಾವ್ಯ ರಚನೆಗೆ ಸ್ವಂತ ವ್ಯಕ್ತಿತ್ವ ಇರಬೇಕು. ಆಳ ಅನುಭವಗಳು ಕಾವ್ಯವಾಗಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಬರಬಹುದಾದ ಅಡ್ಡಿ-ಆತಂಕಗಳನ್ನು ಎದುರಿಸಿ ನಡೆದರೆ ಉತ್ತಮ ವಾತಾವರಣ ಸೃಷ್ಟಿಸಲು ಸಾಧ್ಯ ಎಂದರು.
ಕವಿ ವಿಜಯಕಾಂತ ಪಾಟೀಲ ಮಾತನಾಡಿ, ಬರವಣಿಗೆಗೆ ಉತ್ಸಾಹ ಬೇಕು. ಕಾವ್ಯ ನಮ್ಮೊಳಗೆ ಕಾಡಬೇಕು. ಅದರಿಂದ ರಸ ಉತ್ಪನ್ನವಾಗಬೇಕು. ಕಾವ್ಯ ರಚನೆಗೆ ಗೋಡೆ ಕಟ್ಟಿಕೊಳ್ಳುವುದು ಬೇಡ. ಮನಸ್ಸು ವಾತಾವರಣ ಶುದ್ಧಿಯಿಂದ ಅನುಭವಿಸಿದ್ದನ್ನು ಬರೆಯಬೇಕು ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಜಿ. ಶಾಂತಪುರಮಠ ಮಾತನಾಡಿ, ಸೃಜನಶೀಲತೆ ಮೈಗೂಡಿಸಿಕೊಂಡು ಸಾಹಿತ್ಯ ಬೆಳೆಯಬೇಕು. ಸರಳವಾಗಿ ಜನರ ಮನಮುಟ್ಟುವಂತಿರಬೇಕು ಎಂದರು.
ಸಾಹಿತಿಗಳಾದ ಸತೀಶ ಕುಲಕರ್ಣಿ, ಮಾರುತಿ ಶಿಡ್ಲಾಪುರ, ತಾಲೂಕು ಚುಟುಕ ಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಜುಳಾ ನಾಮದೇವ, ಮಧುಮತಿ ಪೂಜಾರ, ಬೀರೇಶ ಬಾಣಿ ವೇದಿಕೆಯಲ್ಲಿದ್ದರು. ಕವಿಗಳಾದ ಅಶೋಕ ಕೊಂಡ್ಲಿ, ವೆಂಕಟೇಶ, ಲೀಲಾವತಿ ಪೂಜಾರ, ಜಯಲಕ್ಷ್ಮೀ ಪಾಟೀಲ, ಶ್ವೇತಾ, ಪುನೀತ ಕಬ್ಬೂರ, ಕಾಂತೇಶ ಅಸುಂಡಿ, ಶಾರದಾ ಬಡಿಗೇರ, ಎಲ್.ಎಲ್. ಪಾಟೀಲ, ಕವಿತಾ, ವೀರಭಧ್ರಪ್ಪ, ಪರಶುರಾಮ ಅರಳೇಶ್ವರ, ನಿಂಗಪ್ಪ ಮರಡಿ, ಎ.ಬಿ. ಸುಲೇಮಾನ, ಲಿಂಗರಾಜ ದೇಟೀನ, ದೀಪಾ ಬಡಿಗೇರ, ಕುಮಾರ ಮಾಳವದೆ, ರತ್ನಾ ಶಂಭಣ್ಣನವರ, ರೇಣುಕಾ, ಶಿವರಾಜ ಕುರಿ, ರವಿ ಲಮಾಣಿ, ಬಿ.ಎಂ. ಕುಳೇನೂರ ಇತರರು ಸ್ವ-ರಚಿತ ಚುಟುಕು ಕಾವ್ಯ ವಾಚನ ವಾಚಿಸಿದರು.
ಹೆಂಡತಿ, ತಂದೆ-ತಾಯಿ, ಸಾಮಾಜಿಕ ಗೊಂದಲ, ಎಚ್ಚರಿಕೆ, ಸಿಹಿ ಕನಸುಗಳು, ಪ್ರಕೃತಿ, ವಿರೋಧ ಪಕ್ಷಗಳು, ಭ್ರಷ್ಟಾಚಾರ, ಧೂಮಪಾನ, ಅತ್ಯಾಚಾರ, ಹುಡುಗಿಯರು, ಸ್ವಾತಂತ್ರ್ಯ, ಬೆಲೆ ಮುಂತಾದ ವಿಷಯಗಳ ಕುರಿತು ಕವನಗಳು ಮೂಡಿ ಬಂದವು. ಅಶೋಕ ಕೊಂಡ್ಲಿ ಸ್ವಾಗತಿಸಿದರು. ರವೀಂದ್ರ ಕುರಿ ಕಾರ್ಯಕ್ರಮ ನಿರೂಪಿಸಿದರು. ಟಿಪ್ಪು ಸುಲ್ತಾನ ನಾಯಕವಾಡಿ ವಂದಿಸಿದರು.