ಬಿಜೆಪಿ ಮುಖಂಡರ ಆರೋಪದಲ್ಲಿ ಹುರುಳಿಲ್ಲ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 17
ಕೇಂದ್ರ ಸರ್ಕಾರ ದೇಶದ ಎಲ್ಲ ಗ್ರಾಪಂಗೆ ನರೆಗಾ ಯೋಜನೆ ಅನುಷ್ಠಾನದ ಮೂಲಕ ರು. ಲಕ್ಷಾಂತರ ಕೋಟಿ ಬಿಡುಗಡೆಗೊಳಿಸಿ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಇದನ್ನು ಅರ್ಥೈಸಿಕೊಳ್ಳದ ಬಿಜೆಪಿ ಮುಖಂಡರು, ಮತಕ್ಕಾಗಿ ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳ ಅಧಿಕಾರಕ್ಕೆ ಸಂಚಕಾರ ತಂದಿದೆ ಎಂದು ಹುರಳಿಲ್ಲದ ಆರೋಪಿಸುತ್ತಿದ್ದಾರೆ ಎಂದು ವಾರ್ತಾ ಸಚಿವ ಸಂತೋಷ ಲಾಡ್ ಹೇಳಿದರು.
ಶನಿವಾರ ಪಟ್ಟಣದಲ್ಲಿ ಎಂ.ಸಿ. ಪಾಟೀಲ ಅವರ ಬಿಲ್ಡಿಂಗ್ನಲ್ಲಿ ನಡೆದ ವಿಧಾನ ಪರಿಷತ್ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಮತಯಾಚನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಂಚಾಯತ್ ರಾಜ್ಯ ವ್ಯವಸ್ಥೆ ಹಾಳು ಮಾಡಿದ್ದು ಬಿಜೆಪಿ ಮತ್ತು ಕೆಜೆಪಿ ಮುಖಂಡರು ಎಂದು ಆರೋಪಿಸಿದರು.
ಗ್ರಾಪಂಗೆ ಅಧಿಕಾರ ನೀಡುವ ಮೂಲಕ ಅಧಿಕಾರವನ್ನು ವಿಕೇಂದ್ರಿಕರಣಗೊಳಿಸಿ ಪ್ರತಿಯೊಬ್ಬರಿಗೂ ಅಧಿಕಾರ ಸಮಾನವಾಗಿ ಹಂಚಿಕೆ ಮಾಡಿ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿದ್ದೇ ಕಾಂಗ್ರೆಸ್ ಪಕ್ಷ. ಬಿಜೆಪಿ ಪಕ್ಷಕ್ಕೆ ಈ ಕುರಿತು ಟೀಕಿಸುವ ನೈತಿಕ ಹಕ್ಕಿಲ್ಲ ಎಂದರು.
ಮಾತನಾಡುವ ಹಕ್ಕಿಲ್ಲ: ಕಾಂಗ್ರೆಸ್ಸಿನ ಬಗ್ಗೆ ಮಾತನಾಡುವ ಹಕ್ಕಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಸಚಿವ ಲಾಡ್, ಕೇಂದ್ರ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ರೈತರ ಆರ್ಥಿಕ ಗುಣಮಟ್ಟ ಸುಧಾರಿಸಲು ರಾಜ್ಯದಲ್ಲಿ ಸುಮಾರು ರು. 70 ಸಾವಿರ ಕೋಟಿ ಸಾಲ ಮನ್ನಾ ಮಾಡಿದೆ. ಇದನ್ನು ಜನರು ಮರೆಯಲಾರರು ಎಂದರು.
ಸುಳ್ಳು ಆರೋಪ: ಆಹಾರ ಸಂರಕ್ಷಣೆ ಕೇಂದ್ರಕ್ಕಾಗಿ ಕೇಂದ್ರ ಸರಕಾರ ಸುಮಾರು ಒಂದು ಲಕ್ಷ ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ. ಅದರಡಿ ಈಗಾಗಲೆ ಒಂದು ರು. 1ಗೆ ಒಂದು ಕೆಜಿ. ಅಕ್ಕಿ ವಿತರಿಸಲಾಗುತ್ತಿದೆ. ರೈತರಿಗೆ ರಿಯಾಯ್ತಿಯಲ್ಲಿ ಬೀಜ, ಗೊಬ್ಬರ ಸೇರಿದಂತೆ ಇತರ ಸೌಲಭ್ಯ ನೀಡಲಾಗಿದೆ. ಆದರೆ, ಚುನಾವಣೆಯಲ್ಲಿ ಸುಳ್ಳಿನ ಆರೋಪ ಬಿಜೆಪಿ ಮಾಡುತ್ತಿದೆ.
ಶೇ. 90ರಷ್ಟು ಮತ: ಮಾಜಿ ಶಾಸಕ ಅಜ್ಜಂಫೀರ ಖಾದ್ರಿ ಮಾತನಾಡಿ, 22ರಂದು ನಡೆಯಲಿರುವ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಅಭ್ಯರ್ಥಿ ನಾಗರಾಜ ಛಬ್ಬಿಯವರ ಗೆಲವು ಖಚಿತ. ನಮ್ಮ ಕ್ಷೇತ್ರದ ಜನಪ್ರತಿನಿಧಿಗಳು ಪ್ರಜ್ಞಾವಂತರಿದ್ದಾರೆ. 400 ಮತಗಳಲ್ಲಿ ನಾಗರಾಜ ಛಬ್ಬಿಯವರಿಗೆ ಶೇ. 90 ಮತನೀಡಿ ಜಯ ದೊರಕಿಸಿಕೊಡುತ್ತಾರೆಂಬ ವಿಶ್ವಾಸ ನಮಗಿದೆ ಎಂದರು.
ಧಾರವಾಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಮಾತನಾಡಿ, ನಾವು ಪ್ರವಾಹದ ವಿರುದ್ಧ ಈಜುತ್ತಿದ್ದೇವೆ. ಒಂದು ಕಡೆ ದುಡ್ಡಿನ ಹೊಳೆಯೇ ಹರಿಯುತ್ತಿದೆ. ನಮ್ಮ ಪಕ್ಷದಲ್ಲಿ ಕಾರ್ಯಕರ್ತರ ಪ್ರೀತಿ ಮತ್ತು ವಿಶ್ವಾಸದ ಹೊಳೆ ಹರಿಯುತ್ತಿದೆ. ನಿಮ್ಮೆಲ್ಲರ ಸೇವೆ ಮಾಡಲು ಅವಕಾಶ ಮಾಡಿ ಕೊಡಿ ಎಂದರು.
ಮಾಜಿ ಸಂಸದ ಐ.ಜಿ. ಸನದಿ, ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೊರೆ ಮಾತನಾಡಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೆಂಕೋಜಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾಂಗ್ರೆಸ್ ಮುಖಂಡ ಟಿ. ಈಶ್ವರಪ್ಪ, ಎಸ್.ವೈ. ಪಾಟೀಲ, ಚಂದ್ರಣ್ಣ ನಡುವಿನಮನಿ, ಗುಡ್ಡಪ್ಪ ಜಲದಿ, ಎನ್.ಸಿ. ಪಾಟೀಲ, ನಾಗಪ್ಪ ತಿಪ್ಪಕ್ಕನವರ, ಬಾಪುಗೌಡ ಹೊಸಗೌಡ್ರ, ಶಿವಾನಂದ ಬಾಗೋರ, ರಾಜಾ ದೇಸಾಯಿ, ಶೇಖರಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಹನುಮರೆಡ್ಡಿ ನಡುವಿನಮನಿ ಸ್ವಾಗತಿಸಿ, ನಿರೂಪಿಸಿದರು.