ಅಧಿಕಾರ ಮೊಟಕುಗೊಳಿಸುವ ಉದ್ದೇಶವಿಲ್ಲ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಆ. 18
ಬಿಜೆಪಿ, ಕೆಜೆಪಿ ಹಾಗೂ ಜೆಡಿಎಸ್‌ನ ಅಪವಿತ್ರ ಮೈತ್ರಿಯಿಂದ ಮತದಾರರನ್ನು ಮೋಸ ಮಾಡಲು ಸಾಧ್ಯವಿಲ್ಲ. ಗ್ರಾಪಂ ಸದಸ್ಯರ ಜವಾಬ್ದಾರಿ ಹೆಚ್ಚಿಸುತ್ತಿದ್ದೇವೆಯೇ ಹೊರತು ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದು ವಾರ್ತಾ ಸಚಿವ ಸಂತೋಷ ಲಾಡ್ ಸ್ಪಷ್ಟನೆ ನೀಡಿದರು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಸ್ಥಳೀಯ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಹಿನ್ನೆಲೆಯಲ್ಲಿ ಸ್ಥಳೀಯ ಮಟ್ಟದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅದಮ್ಯ ಕನಸು ಹೊಂದಿದ್ದು, ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಅಧಿಕಾರ ವಿಕೇಂದ್ರೀಕರಣಕ್ಕೆ ಮುಂದಾಗಿದ್ದರು ಎಂದರು.
ಸಂವಿಧಾನದ 73ನೇ ಕಲಂಗೆ ತಿದ್ದುಪಡಿ ತರುವ ಮೂಲಕ ಪಂಚಾಯತಿಗಳನ್ನು ಬಲಗೊಳಿಸಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ. ಬೇಲೂರ ಘೋಷಣೆ ಸೋನಿಯಾ ಗಾಂಧಿ ಮೂಲಕ ಗ್ರಾಮ ಪಂಚಾಯತಿಗಳನ್ನು ಸಬಲಗೊಳಿಸಿದ್ದಾರೆ. ಅಧಿಕಾರಕ್ಕೆ ಬಂದು ಕೇವಲ 3 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅನುಷ್ಠಾಗೊಳಿಸಿದ ಜನಪರ ಕಾರ್ಯಕ್ರಮಗಳಿಂದ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ಇದನ್ನು ಸಹಿಸಲಾಗದ ವಿರೋಧ ಪಕ್ಷಗಳು ಮೈತ್ರಿ ನಾಟಕವಾಡುತ್ತಿವೆ ಎಂದ ಅವರು, ಪ್ರಸಕ್ತ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿಯವರಿಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡುವ ಮೂಲಕ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಬಲಗೊಳಿಸುವಂತೆ ವಿನಂತಿಸಿದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ಬದ್ಧವಾಗಿದೆ. ಜನತೆಗೆ ಉತ್ತಮ ಆಡಳಿತ ನೀಡುವ ಮೂಲಕ ಜನತೆ ಕಾಂಗ್ರೆಸ್ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಲಾಗುವುದು ಎಂದರು.
ಮಾಜಿ ಶಾಸಕ ಅಜ್ಜಂಪೀರ್ ಖಾದ್ರಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ಗ್ರಾಪಂ.ಗೆ ಒಂದು ಕೋಟಿ ಗಳಿಗೂ ಅಧಿಕ ಅನುದಾನ ದೊರೆಯುವಂತಾಗಿದೆ. ವಿರೋಧ ಪಕ್ಷಗಳು ವೃಥಾ ಕಾಂಗ್ರೆಸ್ ಪಕ್ಷ ಟೀಕಿಸುವದನ್ನು ಬಿಟ್ಟು ಅಭಿವೃದ್ಧಿಗೆ ಸಹಕರಿಸಲಿ ಎಂದರು.
ರಾಜ್ಯ ಕಾಂಗ್ರೆಸ್‌ನ ಎಸ್‌ಟಿ ಘಟಕದ ರಾಜ್ಯಾಧ್ಯಕ್ಷ ಟಿ. ಈಶ್ವರ ಮಾತನಾಡಿ, 2013 ಚುನಾವಣೆ ವರ್ಷವಾದರೂ ಕೂಡ ನಡುಗಾಲದಲ್ಲಿ ಚುನಾವಣೆ ಬಂದಿದೆ. ಹೀಗಾಗಿ ವಿರೋಧ ಪಕ್ಷಗಳಿಗೆ ಕೇಡುಗಾಲದ ಚುನಾವಣೆ ಎಂದು ಲೇವಡಿ ಮಾಡಿದರು. ಶಿವರಾಜ ಸಜ್ಜನರ ದುರಾಸೆಯ ಫಲವಾಗಿ ಇಂದು ಚುನಾವಣೆ ಎದುರಾಗಿದ್ದು, ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದರು.
ತಾಲೂಕು ಘಟಕದ ಅಧ್ಯಕ್ಷ ಹುಸೇನಸಾಬ್ ದೊಡ್ಮನಿ ಅಧ್ಯಕ್ಷತೆ ವಹಿಸಿದ್ದರು. ವಿಪ ಸದಸ್ಯ ಶ್ರೀನಿವಾಸ ಮಾನೆ, ಹಾನಗಲ್ ಶಾಸಕ ಮನೋಹರ ತಹಸೀಲ್ದಾರ ಜಿಪಂ ಸದಸ್ಯೆ ಲಲಿತಾ ಜಾಧವ, ಅಭ್ಯರ್ಥಿ ನಾಗರಾಜ ಛಬ್ಬಿ ಮಾತನಾಡಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ ಅನಿಲಕುಮಾರ ಪಾಟೀಲ, ಹಾಲಿ ಸದಸ್ಯ ದೀಪಕ ಚಿಂಚೋರೆ, ಯುಥ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ, ತಾಪಂ ಮಾಜಿ ಅಧ್ಯಕ್ಷ ದಾನಪ್ಪ ಚೂರಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಸಿ. ಶಿಡೇನೂರ, ಮಾಜಿ ಸದಸ್ಯೆ ರೇಖಾ ದೊಡ್ಮನಿ, ಬಸವರಾಜ ಸವಣೂರ, ಲಿಂಗಪ್ಪ ಕೊಂಬಳಿ, ಸಿದ್ದಣ್ಣ ಬೆಳ್ಳಕ್ಕಿ, ಜಯಶ್ರೀ ಶಿವಪುರ, ಮಲ್ಲನಗೌಡ ಪಾಟೀಲ, ಮಿನಾಕ್ಷಿ ಗಿರ್ಜಿ, ಹನುಮನಗೌಡ ಪಾಟೀಲ, ವಿರೇಶ ಮತ್ತಿಹಳ್ಳಿ ಸ್ಥಳೀಯ ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಉಪಸ್ಥಿತರಿದ್ದರು.
ಸುರೇಶಗೌಡ ಪಾಟೀಲ ಸ್ವಾಗತಿಸಿ ವಂದಿಸಿದರು.