ಅಸಮಾಧಾನ ಸರಿಪಡಿಸುತ್ತೇವೆ
ಹಾನಗಲ್ಲ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಶಿಗ್ಗಾಂವಿಯಲ್ಲಿ ರಾಜು ಕುನ್ನೂರ ಅವರ ಪರ ವಿರೋಧದ ಕಾರ್ಯಕರ್ತರ ವಾದ-ವಿವಾದ ಪ್ರಸಕ್ತ ಚುನಾವಣೆ ಮೇಲೆ ಯಾವುದೇ ವ್ಯತಿರಕ್ತ ಪರಿಣಾಮ ಬೀರದು. ಇದು ಪಕ್ಷದ ಆಂತರಿಕ ವಿಷಯವಾಗಿದ್ದು, ವೈಯಕ್ತಿಕ ಅಸಮಾಧಾನಕ್ಕಾಗಿ ನಡೆದ ಘಟನೆಯಾಗಿದ್ದು, ಇದನ್ನು ಸರಿಪಡಿಸುತ್ತೇವೆ ಎಂದು ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದರು.
ಹಾನಗಲ್ಲಿನಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಗೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪವಿತ್ರ ಚುನಾವಣಾ ಮೈತ್ರಿಗೆ ಮುಂದಾಗಿರುವ ಬಿಜೆಪಿ-ಕೆಜೆಪಿ ತಮ್ಮ ನೈತಿಕತೆಯನ್ನು ತಾವೇ ಪ್ರಶ್ನಿಸಿಕೊಳ್ಳುವಂತಾಗಿದೆ. ಸಜ್ಜನ ಎಂದೇ ಹೆಸರಿರುವ ಶಿವರಾಜ ಸಜ್ಜನ ವಿಧಾನಪರಿಷತ್ ಸ್ಥಾನಕ್ಕೆ ರಾಜಿನಾಮೆ ನೀಡಿ ಜನಪ್ರತಿನಿಧಿಗಳನ್ನು ವಂಚಿಸಿದರು. ಕೆಜೆಪಿ ಸೇರಿ, ಅಲ್ಲಿಯೂ ಸೋತು, ಈಗ ಮತ್ತೆ ಬಿಜೆಪಿ ತೆಕ್ಕೆಗೆ ಸೇರುವ ಹುನ್ನಾರಕ್ಕಾಗಿ ನಾಮಪತ್ರ ಸಲ್ಲಿಸಿ ಸೋಲಿನ ಭಯದಿಂದ ಮರಳಿ ಪಡೆದು ಈಗ ಬಿಜೆಪಿಗೆ ಕೈ ಜೋಡಿಸುತ್ತಿರುವುದು ಯಾವ ನೈತಿಕತೆ ಎಂದರು.
ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಟಿ. ಈಶ್ವರ, ಸತೀಶ ದೇಶಪಾಡೆ, ಆರ್.ಎಸ್. ಪಾಟೀಲ, ದಾನಪ್ಪ ಗಂಟೇರ, ಎಂ.ಎಂ. ಮುಲ್ಲಾ, ಯಾಸಿರಖಾನ್ ಪಠಾಣ, ಸಿ.ಎಸ್. ಬಡಿಗೇರ, ಕೆ.ಎಲ್. ದೇಶಪಾಂಡೆ ಮುಂತಾದವರಿದ್ದರು.