ಕನ್ನಡ ಭಾಷಾ ಅಭಿವೃದ್ಧಿ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ, ಹೊಳೆಆಲೂರ, ಆ. 18
ವಿದ್ಯಾರ್ಥಿಗಳಿಗಾಗಿ ಜಿಲ್ಲೆಯ ಕನ್ನಡ ಅಧ್ಯಾಪಕರ ಪರಿಷತ್ತಿನ ಬಳಗದವರು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಾ. ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಮತ್ತು ಗದಗ ಜಿಲ್ಲಾ ಪದವಿ ಮಹಾವಿದ್ಯಾಲಯಗಳ ಕನ್ನಡ ಅಧ್ಯಾಪಕರ ಪರಿಷತ್ತು ಇವರ ಆಶ್ರಯದಲ್ಲಿ ಮಹಾವಿದ್ಯಾಲಯದ ರಜತ ಮಹೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಭಾಷಾ ಅಭಿವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಮಾತನಾಡಿದರು. ಉದ್ಘಾಟನೆ ನೆರವೇರಿಸಿದ ಸಂಸ್ಥೆಯ ಉಪಾಧ್ಯಕ್ಷ ಎಂ.ಬಿ. ಕೋಳೇರಿ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಶಿವಣ್ಣ ಕುರಿ ಮಾತನಾಡಿ, ಅಧ್ಯಾಪಕರ ಪರಿಷತ್ತಿನ ಕನ್ನಡಪರ ವಿದ್ಯಾರ್ಥಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕಸಾಪ ಸಹಕಾರ ನೀಡಲಿದೆ ಎಂದರು.
ಅತಿಥಿಗಳಾಗಿ ಆಗಮಿಸಿದ್ದ ಡಾ. ರಾಜಶೇಖರ ದಾನರಡ್ಡಿ ಮಾತನಾಡಿ, ಪ್ರಸ್ತುತ ಅವಧಿಯಲ್ಲಿ ಇಲ್ಲಿಂದಲೇ ಪರಿಷತ್ತಿನ ಕಾರ್ಯಕ್ರಮಗಳು ಆರಂಭವಾಗುತ್ತಿದ್ದು, ಪ್ರತಿ ತಿಂಗಳು ಬೇರೆ ಬೇರೆ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಡಾ. ಸುಜಾತಾ ಬರದೂರ, ಪ್ರೊ. ಆರ್.ಎಲ್. ಪೊಲೀಸಪಾಟೀಲ ಉಪನ್ಯಾಸ ನೀಡಿದರು. ಸಂಸ್ಥೆಯ ಅಧ್ಯಕ್ಷ ಸಿ.ಜಿ. ಬೀರನೂರ, ಪ್ರೊ. ಎಸ್.ವಿ. ಅಂದಾನಶೆಟ್ರ, ರಮೇಶ ಕಲ್ಲನಗೌಡರ, ಡಾ. ರಿಯಾಜ ಪಾಷಾ, ಪ್ರೊ. ಎಂ.ಬಿ. ಪಾಟೀಲ, ಆರ್.ಎಚ್. ತಿಗಡಿ, ಶಕುಂತಲಾ ಸಿಂಧೂರ, ಅಣ್ಣಪ್ಪ ರೊಟ್ಟಿಗವಾಡ ಮುಂತಾದವರು ಉಪಸ್ಥಿತರಿದ್ದರು. ಪ್ರೊ. ಎಸ್.ವಿ. ಅಂದಾನಶೆಟ್ರ ಸ್ವಾಗತಿಸಿದರು. ಪ್ರೊ. ಎನ್.ಎಸ್. ಹುಣಶಿಕಟ್ಟಿ ನಿರೂಪಿಸಿದರು. ಪರಿಷತ್ತಿನ ಉಪಾಧ್ಯಕ್ಷ ಡಾ. ಪ್ರಭು ಗಂಜಿಹಾಳ ವಂದಿಸಿದರು.