ಜನತೆ ಗೌರವಿಸದ ಅಭ್ಯರ್ಥಿಗೆ ಪಾಠ ಕಲಿಸಿ
ಹಾನಗಲ್ಲ: ಜನಪ್ರತಿನಿಧಿಗಳಿಂದ ಆಯ್ಕೆಯಾಗಿ ಸೌಜನ್ಯಕ್ಕೂ ಅವರನ್ನೊಂದು ಮಾತು ಕೇಳದೇ ಪಕ್ಷಾಂತರ ಪ್ರೀತಿಗಾಗಿ ರಾಜಿನಾಮೆ ನೀಡಿದ ಕ್ಷೇತ್ರ ಪ್ರತಿನಿಧಿಸಿದ ಶಿವರಾಜ ಸಜ್ಜನ ಅಗೌರವ ತೋರಿದ್ದಾರೆ. ಇಂತಹ ಬಿಜೆಪಿ-ಕೆಜೆಪಿ ಬೆಂಬಲಿತ ಅಭ್ಯರ್ಥಿಗೆ ಜನತೆ ಪಾಠ ಕಲಿಸಲು ಸಿದ್ಧರಾಗಿದ್ದಾರೆ ಎಂದು ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವ ಸಂತೋಷ ಲಾಡ್ ಸ್ಪಷ್ಟಪಡಿಸಿದರು.
ಭಾನುವಾರ ಹಾನಗಲ್ಲಿನಲ್ಲಿ ವಿಧಾನ ಪರಿಷತ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಾಗರಾಜ ಛಬ್ಬಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ತಂದದ್ದು ಕಾಂಗ್ರೆಸ್ ಪಕ್ಷದ ಅಧಿಕಾರದಲ್ಲಿ. ಆದರೆ, ಬಿಜೆಪಿ ಆಡಳಿತ ಪಂಚಾಯತ್ ವ್ಯವಸ್ಥೆಯನ್ನು ದಿವಾಳಿ ತೆಗೆಯಿತು. ಬಿಜೆಪಿ ರಾಜ್ಯಸಭಾ ಸದಸ್ಯ ರಾಮಾಜೋಯಿಸ್ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡುವುದನ್ನು ವಿರೋಧಿಸಿ ನ್ಯಾಯಲಯದ ಕಟ್ಟೆ ಏರಿದರು. ಆದರೆ ನ್ಯಾಯಾಲಯ ಕಾಂಗ್ರೆಸ್ ನಿರ್ಣಯ ಸರಿ ಎಂದು ಹೇಳಿದೆ. ಯಾವಾಗಲೂ ಜನವಿರೋಧಿಯೇ ಆಗಿರುವ ಬಿಜೆಪಿಗೆ ಪಾಠ ಕಲಿಸಲು ಮತದಾರ ಸಿದ್ಧನಾಗಿದ್ದಾನೆ. ಬಿಜೆಪಿಯ ದಬ್ಬಾಳಿಕೆ ಆಡಳಿತಕ್ಕೆ ಈಗ ಕೊನೆಗಾಲ ಆರಂಭವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆದ ಶಾಸಕ ಮನೋಹರ ತಹಸೀಲ್ದಾರ್ ಮಾತನಾಡಿ, ಬಿಜೆಪಿಯಿಂದ ಕೆಜೆಪಿಗೆ ಪಕ್ಷಾಂತರವೇ ಈ ಚುನಾವಣೆಯ ಹೇರಿಕೆಯಾಗಿದೆ. ಇದು ಸರಕಾರಕ್ಕೆ ಹೊರೆ, ಪದೇ ಪದೇ ಪಕ್ಷಾಂತರ ಮಾಡಿದವರೆ ಮತ್ತೆ ಮರಳಿ ಅಲ್ಲಿಗೆ ಹೋಗುತ್ತಿದ್ದಾರೆ. ಪಕ್ಷಾಂತರಿಗಳಿಗೆ ಮತ ಕೇಳುವ ನೈತಿಕ ಹಕ್ಕಿಲ್ಲ. ನಾಮ ಪತ್ರ ಸಲ್ಲಿಸಿ ಸೋಲಿನ ಭಯದಿಂದ ಹಿಂತೆಗೆದು ಈಗ ಬಿಜೆಪಿಯೊಂದಿಗೆ ಕೈಜೋಡಿಸಿ ಅಪವಿತ್ರ ಮೈತ್ರಿಗೆ ಮುಂದಾಗಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಅವರನ್ನು ಗೆಲ್ಲಿಸುವ ಮೂಲಕ ಸಿದ್ಧರಾಮಯ್ಯ ಅವರ ಕೈ ಬಲಪಡಿಸಲು ಮುಂದಾಬೇಕು. ಈ ಗೆಲವು ಖಚಿತ ಎಂದರು.
ಅಭ್ಯರ್ಥಿ ನಾಗರಾಜ ಛಬ್ಬಿ ಮಾತನಾಡಿ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾದ ತಮಗೆ ಪಕ್ಷ ಈ ಅವಕಾಶ ನೀಡಿದೆ. ನಾನು ತಮ್ಮ ಸೇವಕನಾಗುವೆ, ನಿಮ್ಮ ಧ್ವನಿಯಾಗುವೆ, ನಾನು ಪ್ರಮಾಣ ಮಾಡಿ ಹೇಳುತ್ತೇನೆ. ನಿಮ್ಮ ಸೇವೆಯೇ ಉದ್ದೇಶ. ನಾನು ಎಲ್ಲ ಸಂದರ್ಭದಲ್ಲಿಯೂ ಪಕ್ಷದ ಸರ್ಕಾರದ ಅಭಿವೃದ್ಧಿ ಮುಂದಿಟ್ಟುಕೊಂಡು ಜನತೆ ಸೇವೆಗೆ ಬದ್ಧನಾಗಿರುವೆ. ನನ್ನನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಪಂಡಗಡದ ರಾಜ್ಯ ಘಟಕದ ಅಧ್ಯಕ್ಷ ಟಿ. ಈಶ್ವರ, ಶಾಕೀರ ಸನದಿ, ಕೆಪಿಸಿಸಿ ಸದಸ್ಯರಾದ ಸತೀಶ ದೇಶಪಾಂಡೆ, ಆರ್.ಎಸ್. ಸಾಲಿಮಠ, ಯಲ್ಲಪ್ಪ ಕಿತ್ತೂರ, ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಸದಾನಂದ ಡಂಗನವರ, ಸರ್ವರಬಾಷಾ ಪೀರಜಾದೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಸ್. ಬಡಿಗೇರ, ಮಲ್ಲನಗೌಡ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ಮಕ್ಭೂಲ ಅಹಮ್ಮದ ಹುಲಗೂರ, ರಂಗನಗೌಡ ಪಾಟೀಲ, ಯಾಸಿರಖಾನ ಪಠಾಣ ವೇದಿಕೆಯಲ್ಲಿದ್ದರು. ಕೆ.ಎಲ್. ದೇಶಪಾಂಡೆ ಕಾರ್ಯಕ್ರಮ ನಿರೂಪಿಸಿದರು. ಎಂ.ಎಂ. ಮುಲ್ಲಾ ವಂದಿಸಿದರು.