ಪ್ರಧಾನಿ, ರಕ್ಷಣಾ ಸಚಿವರ ಪ್ರತಿಕೃತಿ ದಹನ
ರಾಣಿಬೆನ್ನೂರು: ಪಾಕಿಸ್ತಾನದ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದರು ಸಹಿತ ಪಾಕಿಸ್ತಾನದ ಸೇನೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವ ಪ್ರಧಾನಿ ಮನಮೋಹನ ಸಿಂಗ್ ಹಾಗೂ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ಹಿಂದು ಜಾಗರಣಾ ವೇದಿಕೆ ಮತ್ತು ವಿಶ್ವ ಹಿಂದು ಪರಿಷತ್ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರತಿಕೃತಿ ದಹಿಸಿದರು.
ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಕೆಇಬಿ ಗಣೇಶ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಪ್ರಧಾನಮಂತ್ರಿ ಹಾಗೂ ರಕ್ಷಣಾ ಸಚಿವರು ಮತ್ತು ಪಾಕಿಸ್ತಾನದ ವಿರುದ್ಧ ಧಿಕ್ಕಾರ ಕೂಗುತ್ತ ಬಸ್ ಸ್ಟ್ಯಾಂಡ್ ಸರ್ಕಲ್, ಮೇಡ್ಲೆರಿ ಸರ್ಕಲ್, ಎಡಿಬಿ ರಸ್ತೆ, ಎಂ.ಜಿ. ರಸ್ತೆ ಮೂಲಕ ಪೋಸ್ಟ್ ಸರ್ಕಲ್ ತಲುಪಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಹಾಗೂ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಪ್ರತಿಕೃತಿಗೆ ಬೆಂಕಿಹಚ್ಚಿ ಪ್ರತಿಭಟಿಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಅಖಿಲ ಭಾರತ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ಪ್ರವೀಣಕುಮಾರ ರಾಯ್ಕರ ಮಾತನಾಡಿ, ಪಾಕಿಸ್ತಾನದ ಸೈನಿಕರು ಭಾರತ ಸಾರಿದ್ದ ಕದನ ವಿರಾಮ ಉಲ್ಲಂಘಿಸಿ, ಭಾರತೀಯ ಸೈನಿಕರನ್ನು ಹತ್ಯೆಗೈಯುವುದರೊಂದಿಗೆ ವಿಶ್ವಕ್ಕೆ ಶಾಂತಿ ಸಂದೇಶ ಸಾರಿರುವ ದೇಶವೆಂಬ ಕ್ಯಾತಿಗೆ ಪಾತ್ರವಾಗಿರುವ ಶಾಂತಿ ಪ್ರಿಯ ದೇಶದ ಪ್ರತಿಯೊಬ್ಬ ಭಾರತೀಯರನ್ನು ಕೆರಳಿಸಿದ್ದಾರೆ.
ದೇಶದ ಸೈನಿಕ ಮುಖ್ಯಸ್ಥರು ಹಾಗೂ ದೇಶದ ಅತ್ಯುನ್ನದ ಹುದ್ದೆಯನ್ನಲಂಕರಿಸಿರುವ ಅಧಿಕಾರಿಗಳು ಹಾಗೂ ಪಾಕಿಸ್ತಾನದ ಸೈನ್ಯಾಧಿಕಾರಿ ಮತ್ತು ಪ್ರಧಾನಿ ನವಾಜ ಷರೀಫ್ ಜೊತೆಯಲ್ಲಿ ನಡೆದ ಮಾತುಕತೆ ಪ್ರಕಾರ ಭಾರತದ ಗಡಿ ಅಂಚಿನಲ್ಲಿ ಕದನ ವಿರಾಮ ಘೋಸಿಸಲಾಗಿತ್ತು. ಎರಡು ದೇಶಗಳ ಒಪ್ಪಂದದ ಮೇರೆಗೆ ಕದನ ವಿರಾಮ ಘೋಷಿಸಿ 78 ಗಂಟೆಗಳೊಳಗಾಗಿಯೇ ಪಾಕಿಸ್ತಾನದ ಸೈನಿಕರು ಭಾರತದ ಸೈನ್ಯದ ಮೇಲೆ 78 ಗಂಟೆಯೊಳಗೆ 57 ಬಾರಿ ಸತತ ಗುಂಡಿನ ದಾಳಿ ನಡೆಸುವುದರೊಂದಿಗೆ ದೇಶದ 5 ಜನ ಸೈನಿಕರನ್ನು ಹತ್ಯೆ ಮಾಡುವುದರೊಂದಿಗೆ ಭಾರತೀಯರಾದ ನಮ್ಮ ತಾಳ್ಮೆ ಪರೀಕ್ಷಿಸುತ್ತಿರುವ ಪಾಕಿಸ್ತಾನಿ ಸೈನಿಕರಿಗೆ ತಕ್ಕ ಉತ್ತರ ನೀಡಲು ಸಿದ್ದರಾಗಿ ನಿಂತಿದ್ದೇವೆ ಎಂದರು. ದೇಶದ ಸೈನಿಕರು ಮತ್ತು ಭಾರತ ರಕ್ಷಿಸುವಲ್ಲಿ ವಿಫಲಗೊಂಡಿರುವ ಪ್ರಧಾನಿ ಮನಮೋಹನ ಸಿಂಗ್ ಮತ್ತು ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಕೂಡಲೆ ರಾಜಿನಾಮೆ ನೀಡಬೇಕೆಂದು ಪ್ರವೀಣಕುಮಾರ ರಾಯ್ಕರ ಆಗ್ರಹಿಸಿದರು.
ಆರೇಮಲ್ಲಾಪುರ ಗ್ರಾಮದ ಶರಣ ಬಸವೇಶ್ವರ ಮಠದ ಸ್ವಾಮಿ ಪ್ರಣವಾನಂದ ಮಾತನಾಡಿ, ಇದನ್ನೆಲ್ಲಾ ಗಮನಿಸಿದರೆ ದೇಶದ ಆಡಳಿತ ಜವಾಬ್ದಾರಿ ಹೊತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಿಂದ ರಾಷ್ಟ್ರದ ರಕ್ಷಣೆ ಅಸಾಧ್ಯವೆಂದು ಕಂಡುಬಂದಿದ್ದು, ಕೂಡಲೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವನ್ನು ರಾಷ್ಟ್ರಪತಿಗಳು ಕೂಡಲೆ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ವಿಶ್ವ ಹಿಂದೂ ಪರಿಷತ್ ತಾಲೂಕು ಸಂಚಾಲಕ ಲೋಹಿತಕುಮಾರ ಮಾತನಾಡಿ, ಪಾಕಿಸ್ತಾನ ಸೈನಿಕರು ಕದ್ದು ಮುಚ್ಚಿ ದೇಶದ ಯೋಧರನ್ನು ಹತ್ಯೆಗೈಯುವುದರೊಂದಿಗೆ ವೀರಯೋಧರ ನಾಡಾಗಿರುವ ಭಾರತ ಹಾಗೂ ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೆ ಶಾಂತಿ ಸಂದೇಶ ಸಾರಿರುವ ನಾಡೆಂಬ ಖ್ಯಾತಿಗೆ ಪಾತ್ರವಾಗಿರುವ ಭಾರತ ಮಾತೆಗೆ ಅವಮಾನಿಸಿದಂತಾಗಿದೆ. ಆದ ಕಾರಣ ಭಾರತ ಕೂಡಲೆ ಪಾಕಿಸ್ತಾನದ ಜೊತೆಗೆ ಹೊಂದಿರುವ ಎಲ್ಲಾ ಸಂಬಂಧ ಕಡಿತಗೊಳಿಸಬೇಕು. ಪಾಕಿಸ್ತಾನದಲ್ಲಿರುವ ಭಾರತ ರಾಯಭಾರಿಯನ್ನು ವಾಪಸ್ ಕರೆಯಿಸಿಕೊಳ್ಳಬೇಕು, ಪಾಕಿಸ್ತಾನದಲ್ಲಿಯೇ ಅಡಗಿ ಕುಳಿತಿರುವ ಭೂಗತ ಪಾತಕಿ-ದಾವೂದ್ ಇಬ್ರಾಹಿಂ, ಅಪಿಜ್ ಸೈಯದ್ ಹಾಗೂ ಆತನ ಬೆಂಬಲಿಗರನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರವಿದ್ದಂತೆ. ಈ ಸಿಂಧೂರವನ್ನು ಭಾರತ ಮಾತೆಯಿಂದ ಕಿತ್ತುಕೊಳ್ಳಲು ಪಾಕಿಸ್ತಾನ ಹಗಲುಗನಸು ಕಾಣುತ್ತಿದ್ದು, ಕಿತ್ತುಕೊಳ್ಳುವುದಕ್ಕಾಗಿ ಪ್ರಯತ್ನಿಸಿದರೆ ದೇಶದ 125 ಕೋಟಿ ಭಾರತೀಯರೆಲ್ಲಾ ಸೈನಿಕರಾಗಿ ತಮ್ಮ ಹುಟ್ಟಡಗಿಸಲು ಸಿದ್ದರಾಗಿದ್ದೇವೆ ಎಂಬುದನ್ನು ಪಾಕಿಸ್ತಾನಿಗಳು ಮರೆಯಬಾರದೆಂದು ಎಚ್ಚರಿಕೆ ನೀಡಿದರು.ತಾಲೂಕು ಸಂಚಾಲಕ ರವಿಶಾಸ್ತ್ರಿ, ರವಿಶಂಕರ ಕೆಂಡದಮಠ, ಅಜಿತಕುಮಾರ ಮಠದ, ಎ.ಕೆ. ಲಮಾಣಿ, ಮಹೇಶಕುಮಾರ ಹಾಗೂ ನೂರಾರು ಜನ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.