ಬಿಜೆಪಿ-ಕೆಜೆಪಿ ಅಪವಿತ್ರ ಮೈತ್ರಿ
ಹಾನಗಲ್ಲ: ಕೆಜೆಪಿ ಉದಯಿಸಿ ಪಕ್ಷದ ಗಂಡು ಮೆಟ್ಟಿನ ನಾಡು ಎಂದು ಹೇಳಿಕೊಂಡ ನೆಲದಲ್ಲಿ ಕೆಜೆಪಿ ಅಭ್ಯರ್ಥಿ ಮಾಯವಾಗಿ ಅಪವಿತ್ರ ಮೈತ್ರಿಗೆ ಮಣೆ ಹಾಕಿದ್ದು ಸ್ವಾರ್ಥ ರಾಜಕಾರಣದ ಪರಮೋಚ್ಚ ಸ್ಥಿತಿಯೇ ಹೊರತು ಪಂಚಾಯತಿ ಅಥವಾ ರಾಜ್ಯದ ಜನತೆ ಹಿತ ಕಾಯುವುದೇ ಇವರ ಉದ್ದೇಶವಲ್ಲ. ಈ ಚುನಾವಣೆಯಲ್ಲಿ ಸಂಸದ ಶಿವಕುಮಾರ ಉದಾಸಿ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ನ ಪರಿಶಿಷ್ಟ ಪಂಗಡ ಘಟಕದ ಅಧ್ಯಕ್ಷ ಟಿ. ಈಶ್ವರ ಪ್ರಶ್ನಿಸಿದರು.
ಭಾನುವಾರ ಹಾನಗಲ್ಲಿನಲ್ಲಿ ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭ ಸುದ್ದಿಗಾಕರೊಂದಿಗೆ ಮಾತನಾಡಿದ ಅವರು, ಕೆಜೆಪಿ, ಬಿಜೆಪಿ ಈಗ ಒಂದಾಗಿರುವುದು ಚುನಾವಣೆಯ ಮೂಲಕ ಮತದಾರರಿಗೆ ಮೋಸಗೊಳಿಸುವ ವಿಧಾನವಿದು. ಈಗ ಬಿಜೆಪಿ ಹಾಗೂ ಕೆಜೆಪಿಗರು ಒಬ್ಬೊಬ್ಬ ವ್ಯಕ್ತಿಗಳ ಪಕ್ಷಗಳಾಗಿ ರಾಜಕೀಯ ವ್ಯವಸ್ಥೆಯನ್ನು ಹೋಳು ಮಾಡುತ್ತಿವೆ. ರಾಜ್ಯದಲ್ಲಿ ಕೆಜೆಪಿ ಯಡಿಯೂರಪ್ಪ ಅವರದು, ಹಾವೇರಿ ಜಿಲ್ಲೆಯಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ ಅವರ ಪಕ್ಷ. ಕೆಜೆಪಿ-ಬಿಜೆಪಿ ಗೊಂದಲದಲ್ಲಿದ್ದ ಶಿವಕುಮಾರ ಉದಾಸಿ ಈಗ ಚುನಾವಣೆಯಲ್ಲಿ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದು ಯಾರಿಗೂ ತಿಳಿಯುತ್ತಿಲ್ಲ. ಕೆಜೆಪಿಯ ಗಂಡು ಮೆಟ್ಟಿನ ನಾಡು ಎಂದು ಹೇಳುವ ಹಾವೇರಿ ಜಿಲ್ಲೆಯವರು ನಾಮಪತ್ರ ಸಲ್ಲಿಸಿ, ಕೆಜೆಪಿ ಅಭ್ಯರ್ಥಿ ಏಕೆ ನಾಮಪತ್ರ ಹಿಂಪಡೆದರು ಎಂಬುದು ಎಲ್ಲ ಮತದಾರರಿಗೆ ಗೊತ್ತಿರುವ ವಿಷಯವೇ ಆಗಿದೆ. ಇವರು ರಾಜಿನಾಮೆ ನೀಡಿದ್ದರಿಂದಲೇ ಈ ಚುನಾವಣೆ ನಡೆಯುವಂತಾಯಿತು. ಈ ನಡುಗಾಲ ಚುನಾವಣೆ ಅಗತ್ಯವಿರಲಿಲ್ಲ. ಅನಗತ್ಯವಾಗಿ ಚುನಾವಣೆ ತಂದಿತ್ತ ಕೆಜೆಪಿ-ಬಿಜೆಪಿಗೆ ಸರಿಯಾದ ಪಾಠ ಕಲಿಸಲು ಮತದಾರರು ಸಿದ್ಧರಾಗಿದ್ದಾರೆ ಎಂದು ಕಿಡಿಕಾರಿದರು.
ಯಾರ್ಯಾರು ಕೆಸರು ಎರಚಾಟ ಮಾಡಿಕೊಂಡಿದ್ದರೋ ಅವರೆಲ್ಲ ಈಗ ಆಲಿಂಗನ ಮಾಡಿಕೊಳ್ಳುತ್ತಿದ್ದಾರೆ. ಗೌಡರ ಬಣದ ಕಡು ವಿರೋಧಿಯಾದ ಯಡಿಯೂರಪ್ಪ ಈಗ ಕುಮಾರಸ್ವಾಮಿಯವರೊಂದಿಗೆ ಒಂದೇ ಮಾಲೆಯಲ್ಲಿ ಕೂಡಿಕೊಂಡಿದ್ದಾರೆ. ಈಗ ದೇವೇಗೌಡರು ಮೋದಿಯವರನ್ನು ಆಲಿಂಗನ ಮಾಡಿಕೊಳ್ಳುವುದಷ್ಟೇ ಬಾಕಿ ಇದೆ. ಇದೆಲ್ಲ ತಮ್ಮ ಸ್ವಾರ್ಥ ರಾಜಕಾರಣದ ಹಿತಕ್ಕಾಗಿ ಎಂದು ಟೀಕಿಸಿದರು.
ಆಯೋಗಕ್ಕೆ ದೂರು: ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಇಲ್ಲ. ಹಣ ಆಮಿಷಕ್ಕೆ ಮತ ಕೊಳ್ಳುವುದಿಲ್ಲ. ಈಗ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಖಚಿತ. ಇವೆಲ್ಲ ಕಾಂಗ್ರೇಸ್ಸೇತರ ಜನಪ್ರತಿನಿಧಿಗಳಿಂದ ತೆರವಾದ ಸ್ಥಾನಗಳಾಗಿವೆ. ಈ ಚುನವಾಣೆಯಲ್ಲಿ ಗೆಲ್ಲುವುದು ಪಕ್ಷಕ್ಕೆ ಶಕ್ತಿ ತುಂಬಲಿದೆ. ಮುಂದಿನ ಚುನಾವಣೆಗೆ ಸಹಕಾರಿಯಾಗಲಿದೆ. ಈ ಚುನಾವಣೆಯಲ್ಲಿ ಯಾವುದೇ ಪಕ್ಷ ಹಣದ ಆಮಿಷ ತೋರಿದರೆ, ಹಣ ಅಥವಾ ಇನ್ನಾವುದೇ ರೂಪದ ಕೊಡುಗೆ ನೀಡಿ ಮತ ಸೆಳೆಯಲು ಮುಂದಾದರೆ ತಾವೇ ಸ್ವತಃ ಕಾಂಗ್ರೆಸ್ ಸೇರಿ ಯಾವುದೇ ಪಕ್ಷದ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲು ಸಿದ್ಧ ಎಂದ ಈಶ್ವರ. ಚುನಾವಣೆಗಳು ಭಯ ಆಥವಾ ಆಮಿಷಕ್ಕೊಳಗಾಗಿ ಮತ ಚಲಾಯಿಸುವಂತಾಗಬಾರದು ಎಂದರು.
ಶಿಗ್ಗಾಂವಿ ಘಟನೆ: ಶಿಗ್ಗಾಂವಿಯಲ್ಲಿ ಚುನಾವಣಾ ಪ್ರಚಾರ ಸಭೆ ಸಂದರ್ಭ ನಡೆದ ಘಟನೆ ಕೆಲವರ ವೈಯಕ್ತಿಕ ಹಿತಾಸಕ್ತಿಗಾಗಿ ನಡೆದದ್ದು. ಅದು ಪಕ್ಷದ ಚುನಾವಣೆಯಲ್ಲಿ ಕಾರ್ಯಕರ್ತರ ನಡುವೆ ಯಾವುದೇ ಭಿನ್ನಾಭಿಪ್ರಾಯಕ್ಕಾಗಿ ನಡೆದಿರುವುದು ಅಲ್ಲ. ಕೆಲವರು ವೈಯಕ್ತಿಕ ಹಿತಾಸಕ್ತಿ, ವೈಯಕ್ತಿಕ ದ್ವೇಷಾಸೂಯೆಗಳಿಗಾಗಿ ನಡೆದ ಘಟನೆ ಎಂದ ಅವರು ಅದು ಏನೇ ಇದ್ದರೂ ಪಕ್ಷದೊಳಗಿನ ವಿಷಯ. ಮಾತುಕತೆ ಮೂಲಕ ಬಗೆಹರಿಸುತ್ತೇವೆ ಎಂದು ಈಶ್ವರ ಸ್ಪಷ್ಟಪಡಿಸಿದರು.
ಗ್ರಾಮ ಪಂಚಾಯಿತಿ ವ್ಯವಸ್ಥೆ ಗಟ್ಟಿಗೊಳ್ಳಬೇಕಾಗಿದೆ. ಗ್ರಾಮ ಪಂಚಾಯತಿಗೆ ಹೊಸ ತಿದ್ದುಪಡಿ ತರಲು ಮುಂದಾದ ಸಚಿವ ಎಚ್.ಕೆ. ಪಾಟೀಲ ಅವರ ವಿಚಾರ ಸೂಕ್ತವಿದೆ. ಗ್ರಾಮ ಸ್ವರಾಜ್ಯ ಕನಸು ಈ ಮೂಲಕ ನನಸಾಗಬೇಕಾಗಿದೆ. ಈ ಮೂಲಕ ಪಾರದರ್ಶಕ ಆಡಳಿತ ನೀಡಲು, ಕಟ್ಟುನಿಟ್ಟಿನಿಂದ ಸರ್ಕಾರದ ಅಭಿವೃದ್ಧಿ ನಿಯಮಗಳನ್ನು ಪಾಲಿಸಲು ಇದರಿಂದ ಸಾಧ್ಯ. ಬಿಜೆಪಿ ಸರ್ಕಾರದಲ್ಲಿ ಗ್ರಾಮ ಪಂಚಾಯಿತಿ ವ್ಯವಸ್ಥೆ ದುರ್ಬಲಗೊಳಿಸಲಾಗಿತ್ತು. ಈಗ ಸಚಿವ ಎಚ್.ಕೆ. ಪಾಟೀಲರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಹೊಸ ಚೈತನ್ಯ ನೀಡುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಸತೀಶ ದೇಶಪಾಂಡೆ, ಜಿಲ್ಲಾ ಪರಿಶಿಷ್ಟ ಪಂಗಡದ ಪ್ರಧಾನ ಕಾರ್ಯದರ್ಶಿ ಬಿ.ಟಿ. ಬಸವರಾಜ, ಸುರೇಶ ದೊಡ್ಡ ಕುರುಬರ, ಸುರೇಶ ಮುಸರಿ, ರಾಜಣ್ಣ ಹಿರೇಮಠ, ಗನಿಸಾಬ್ ಪಟೇಲ, ಹಾಶಂಪೀರ ಇನಾಮದಾರ್, ಪರಶುರಾಮ ಡೂಗನವರ, ಲೋಕೇಶ ಸುಣಗಾರ, ಪ್ರಶಾಂತ ಗೊಂದಿ, ಎಸ್.ಎಚ್. ಕಳ್ಳಿಮನಿ ಇನ್ನಿತರರಿದ್ದರು.