ಕಲುಷಿತಗೊಂಡ ಮಲ್ಲಪ್ಪನ ಕೆರೆ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 19
ಸಾವಿರಾರು ರೈತ, ಜನಸಾಮಾನ್ಯರ ನಿತ್ಯ ಬಳಕೆಗೆ ಆಸರೆಯಾಗಿರುವ ಪುರಾತನ ಪ್ರಸಿದ್ಧಿ ಹೊಂದಿದ ತಾಲೂಕಿನ ಬಂಕಾಪುರ ಮಲ್ಲಪ್ಪನ ಕೆರೆ ಇದೀಗ ಕೆಸರು-ಗಲೀಜಿನಿಂದ ಕಲುಷಿತಗೊಂಡು ರೋಗ ಉತ್ಪಾದನಾ ಕೇಂದ್ರವಾಗಿ ಪರಿಮಿಣಿಸಿ ಅನೇಕ ಜನ-ಜಾನುವಾರುಗಳಿಗೆ ಶಾಪಗ್ರಸ್ತವಾಗಿದೆ.
ಬೇಸಿಗೆ ಬಂತೆಂದರೆ ಉತ್ತರ ಕರ್ನಾಟಕದ ಹಲವಡೆ ನೀರಿನ ಕೊರತೆಯಿಂದ ಮಹಿಳೆಯರು, ಮಕ್ಕಳು ಹತ್ತಾರು ಖಾಲಿ ಕೊಡಗಳನ್ನು ಹಿಡಿದು ನೀರಿಗಾಗಿ ಪರದಾಡುವ ದೃಶ್ಯ ಸಾಮಾನ್ಯ. ಆದರೆ, ಇಲ್ಲಿ ವಿಸ್ತಾರವಾಗಿರುವ ಕರೆ ನೀರು, ಸಂರಕ್ಷಣೆ, ಸ್ವಚ್ಛತೆಗೆ ಪುರಸಭೆ ಆಡಳಿತ ಮಂಡಳಿ ಮುಂದಾಗದ ಪರಿಣಾಮ ಅವ್ಯವಸ್ಥೆ ಆಗರವೆನಿಸಿದೆ.
ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ: ಎಲ್ಲೆಡೆ ನೀರಿನ ಸಮಸ್ಯೆ ತಲೆದೂರಿದರೆ ಬಂಕಾಪುರದಲ್ಲಿ ಸಮಸ್ಯೆ ಎದುರಾಗಿಲ್ಲ. ಪುರಸಭೆ ಸಮರ್ಪಕ ನಿರ್ವಹಣೆ ನಿರ್ಲಕ್ಷ್ಯದಿಂದ ಮಾತ್ರ ಜನ-ಜಾನುವಾರುಗಳಿಗೆ ಸಮಸ್ಯೆ ತಪ್ಪಿದ್ದಲ್ಲ. ನೀರು ಸಂರಕ್ಷಣೆಗೆ ಮುಂಜಾಗೃತೆ ಕ್ರಮಕೈಗೊಂಡು ಸಾರ್ವಜನಿಕರ ಆಶೋತ್ತರಕ್ಕೆ ಸ್ಪಂದಿಸಬೇಕಾದ ಆಡಳಿತ ಮಂಡಳಿ ಆದ್ಯ ಕರ್ತವ್ಯವಾಗಿದೆ.
ಈ ಹಿಂದೆ ಆಡಳಿತ ಮಂಡಳಿ ಬೇಜವಾಬ್ದಾರಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಕಾಣದ ಮಲ್ಲಪ್ಪನ ಕೆರೆ ಹೂಳು ತುಂಬಿಕೊಂಡು ಹೊಲಸು, ಗಲೀಜು ಮೈಗೂಡಿಸಿಕೊಂಡಿದೆ. ಪ್ರಸಕ್ತ ಸುರಿಯತ್ತಿರುವ ಮಳೆ ನೀರು ತುಂಬಿಕೊಳ್ಳುತ್ತಿರುವ ಕೆರೆ ಮುಂಜಾಗೃತವಾಗಿ ಹೂಳು ತೆಗೆಯದಿದ್ದಲ್ಲಿ ಸ್ವಚ್ಛ, ಶುದ್ಧ ನೀರು ಕಾಣಬಹುದಾಗಿತ್ತು. ಸುಮಾರು 18 ಎಕರೆ 1 ಗುಂಟೆ ವಿಸ್ತೀರ್ಣವುಳ್ಳ ಕೆರೆಗೆ ಊರಿನ ಗಲೀಜು ವಿಲೀನಗೊಂಡು ಪರಿಸರವನ್ನು ಹಾಳು ಮಾಡಿದ್ದಲ್ಲದೇ ಕೆರೆ ನೀರಿನಲ್ಲಿ ಕೈ- ಕಾಲು ತೊಳೆದುಕೊಂಡು ಅನಾರೋಗ್ಯದಿಂದ ಬಳಲುತ್ತಿರುವವರ ಪಾಲಿಗೆ ಆಸ್ಪತ್ರೆ ಆಸರೆಯಾಗುತ್ತಿದೆ.
ಮೊತ್ತೊಂದೆಡೆ ಬಡ ರೈತರು, ತಮ್ಮ ಜಾನುವಾರು ಮೈತೊಳೆಯವಂತಿಲ್ಲ. ಗಲೀಜು ನೀರಿನಲ್ಲಿ ಮೈತೊಳೆದ ಜಾನುವಾರು ಸಹ ಅನಾರೋಗ್ಯಕ್ಕೊಳಗಾಗುತ್ತಿವೆ. ಕೆರೆ ಸ್ವಚ್ಛಗೊಳಿಸುವಂತೆ ಐದು ವರ್ಷದಿಂದ ಪುರಸಭೆ ಹಿಂದಿನ ಮುಖ್ಯಾಧಿಕಾರಿಗಳಲ್ಲಿ ರೈತರು ಮಾಡಿಕೊಂಡ ಮನವಿಗೆ ಬೆಲೆ ಸಿಗದ ಪರಿಣಾಮ ಕೆರೆ ಮತ್ತಷ್ಟು ಕೊಳಚೆ ನೀರು ತುಂಬಿಕೊಂಡು ರೋಗ ಉತ್ಪಾದನೆಗೆ ಅಣಿಯಾಗಿದೆ.
ಸತ್ತ ಜಾನುವಾರುಗಳು...: ಅಸ್ವಚ್ಛತೆಗೆ ಪುಷ್ಟಿ ನೀಡುವಂತೆ ಕೆರೆ ದಡದಲ್ಲಿ ಸತ್ತ ಜಾನುವಾರುಗಳನ್ನು ಎಸೆದು ಹೋಗುತ್ತಿರುವುದರಿಂದ ಸತ್ತ ಜಾನುವಾರುಗಳು ನೀರಿನಲ್ಲೇ ಕೊಳೆಯತ್ತಿವೆ. ಇದರಿಂದ ರೋಗ ಉತ್ಪಾದನೆಯಾಗುತ್ತಿವೆ. ಸಾಮೂಹಿಕ ಶೌಚಾಯಲ ವ್ಯವಸ್ಥೆ ಇಲ್ಲದ ಪರಿಣಾಮ ಸಾರ್ವಜನಿಕರು ಕೆರೆ ದಡದಲ್ಲಿ ಮಲ ವಿಸರ್ಜನೆ ಮಾಡುತ್ತಿದ್ದಾರೆ.
ಪಟ್ಟಣದಿಂದ ಕಲುಷಿತ ನೀರು ಕೆರೆಗೆ ಹರಿದು ಬಾರದಂತೆ ತಡೆದು ಹಳ್ಳಕ್ಕೆ ಹರಿದು ಹೋಗುವಂತೆ ಚರಂಡಿಗಳ ನಿರ್ಮಾಣಕ್ಕೆ ಪುರಸಭೆ ಕ್ರಮ ಕೈಗೊಳ್ಳುತ್ತಿಲ್ಲ. ಪಟ್ಟಣದ ನಾಲ್ಕು ದಿಕ್ಕಿನಿಂದ ಹರಿದುಬರುತ್ತಿರುವ ಕಲುಷಿತ ನೀರು ಹಳ್ಳಕ್ಕೆ ಹರಿದು ಹೋಗುವಂತೆ ಚರಂಡಿಗಳ ವ್ಯವಸ್ಥೆ ಕೈಗೊಂಡಲ್ಲಿ ಮಾತ್ರ ಕೆರೆ ನೀರು ಸ್ವಚ್ಛಗೊಳ್ಳಲು ಸಾಧ್ಯವಾಗುತ್ತದೆ.
ಐದು ವರ್ಷದ ಬಳಿಕ ಅಭಿವೃದ್ಧಿ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರ ಸ್ವೀಕರಿಸಿ ಎರಡು ಮೂರು ದಿನದಲ್ಲಿ ಪ್ರಭಾರಿ ಮುಖ್ಯಾಧಿಕಾರಿ ಎಚ್.ಎಚ್. ನಾಯ್ಕರ, ಸಿಬ್ಬಂದಿಯಿಂದ ಕೆರೆ ದಡದಲ್ಲಿದ್ದ ಗಿಡ-ಕಂಟಿ ತೆರವುಗೊಳಿಸಿದ್ದಾರೆ. ಆದರೆ, ಕಂಟಿ-ಗಿಡಗಳನ್ನು ತೆರುವುಗೊಳಿಸಿದರೆ ಸಾಲದು. ಇದೀಗ ಸಂಗ್ರಹವಾಗಿರುವ ಕೆರೆ ನೀರು ಹೊರ ಹಾಕಬೇಕು ಎನ್ನುವುದು ಸಾರ್ವಜನಿಕರ ಮನವಿ.
ಕಾಲಿಡಲು ಭಯ: ಕಲುಷಿತಗೊಂಡು ಉಪಯೋಗಕ್ಕೂ ಬಾರದ ಕೆರೆ ನೀರಿನಲ್ಲಿ ಕಾಲಿಡಲು ಭಯಪಡುತ್ತಿರುವ ಸಾರ್ವಜನಿಕರು, ನೀರಿನಲ್ಲಿ ಕಾಲು ತೊಳೆದುಕೊಂಡ ಕೆಲವೇ ಹೊತ್ತಿನಲ್ಲಿ ಗಾಯದಂತ ಗುಳ್ಳೆಗಳು ಏಳುತ್ತಿವೆ. ಸಂಜೆ ಹೊತ್ತಿಗೆ ಜ್ವರ ಬಂದು ಮನುಷ್ಯನನ್ನೇ ರೋಗಗ್ರಸ್ತನನ್ನಾಗಿಸುತ್ತವೆ. ಆದರೆ, ಹೆಣ್ಣು ಮಕ್ಕಳು ಕೆರೆಯಲ್ಲಿ ಬಟ್ಟೆ ತೊಳೆಯತ್ತಿದ್ದಾರೆ.
ನೀರು ಹರಿಸಿ...: ಕೆರೆಯಲ್ಲಿರುವ ಕಲುಷಿತ ನೀರು ಹೊರಹಾಕಿ ಹೂಳು ತೆಗೆದು ಬಳಿಕ ಹೊಸದಾಗಿ ವರದಾ ಶಾಶ್ವತ ಕುಡಿಯವ ನೀರಿನ ಯೋಜನೆಯಡಿ ವರದಾ ನದಿ ನೀರು ಹರಿಸುವಂತೆ ರೈತರ ಒತ್ತಾಯವಾಗಿದೆ. ಇದಕ್ಕೆ ಸ್ಥಳೀಯ ಶಾಸಕರು ಮತ್ತು ಪುರಸಭೆ ಆಡಳಿತ ಮಂಡಳಿ ಪೂರಕ ಕ್ರಮಕೈಗೊಂಡಲ್ಲಿ ಮಾತ್ರ ಸಾಧ್ಯವಾಗುತ್ತದೆ.
ಒಟ್ಟಾರೆ ಪರಿಸರ ಕಾಪಾಡುವ ದಿಸೆಯಲ್ಲಿ ಐತಿಹಾಸಿಕ ಮಲ್ಲಪ್ಪನ ಕೆರೆ ಸ್ವಚ್ಛಗೊಳಿಸುವ ಮೂಲಕ ಸಾಂಕ್ರಾಮಿಕ ರೋಗ ತಡೆಯವಲ್ಲಿ ಸ್ಥಳೀಯ ಶಾಸಕರು, ಪುರಸಭೆ ಆಡಳಿತ ಮಂಡಳಿ ಕ್ರಮಕೈಗೊಳ್ಳಬೇಕು. ಸತ್ತ ಜಾನುವಾರುಗಳನ್ನು ಕೆರೆ ದಡದಲ್ಲಿ ಎಸೆಯದಂತೆ ಮತ್ತು ಪರಿಸರ ಕಾಪಾಡುವ ನಿಟ್ಟಿನಲ್ಲಿ ಕೆರೆಗೆ ಕಾವಲುಗಾರ ನೇಮಕವಾಗಬೇಕಾಗಿದೆ.
ಬಸವರಾಜ ಹಿರೇಮಠ