ಕಾಂಗ್ರೆಸ್ ಮುಕ್ತ ಭಾರತಕ್ಕೆ ಶ್ರಮಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 19
100 ದಿನಗಳ ಕಾಲ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಭ್ರಷ್ಟಾಚಾರ, ಅರ್ಥಿಕ ಮುಗ್ಗಟ್ಟು, ಬೆಲೆ ಏರಿಕೆಗಳಂತ ಕಾರ್ಯಗಳಿಂದ ಕರ್ನಾಟಕ ರಾಜ್ಯದ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸೋಲಿಸಲು ಹಾಗೂ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಆ. 22ರಂದು ಜರುಗಲಿರುವ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯಲಿರುವ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ್ ಅವರ ಗೆಲವಿಗಾಗಿ ಎಲ್ಲರೂ ಬೆಂಬಲಿಸಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಕರೆ ನೀಡಿದರು.
ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಆ. 22ರಂದು ಜರುಗಲಿರುವ ವಿಧಾನ ಪರಿಷತ್ತಿನ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆ ಬಯಸಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ್‌ಗೆ ಬಹುಮತ ನೀಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸೋಲಿಸುವ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರ್ಕಾರಕ್ಕೆ ಬುದ್ಧ್ದಿ ಕಲಿಸಿ ಎಂದರು.
ಮೋದಿ ಬೆಂಬಲಿಸಿ: ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಇಂದಿನಿಂದಲೇ ನಾಂದಿ ಹಾಡಬೇಕಾಗಿದೆ. ಕೇಂದ್ರದಲ್ಲಿರುವ ಕಾಂಗ್ರೆಸ್ ಪಕ್ಷದ ಮನಮೋಹನ ಸಿಂಗ್ ಸರ್ಕಾರ ದೇಶದ ಜ್ವಲಂತ ಸಮಸ್ಯೆಗಳನ್ನು ಎದುರಿಸುವಲ್ಲಿ ವಿಫಲವಾಗಿದೆ. 2007ರಿಂದ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಹಗರಣಗಳ ಸರ್ಕಾರವಾಗಿದೆ. ದೇಶದ ಪ್ರಗತಿಗಾಗಿ ಅಭಿವೃದ್ಧಿ ಕನಸು ಕಾಣುವಲ್ಲಿ ಹಾಗೂ ಜಾರಿಗೆ ತರುವಲ್ಲಿ ವಿಫಲವಾಗಿದೆ.
ಲೋಕಸಭಾ ಚುನಾವಣೆಗೆ ಮುನ್ನುಡಿ: ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಬರಲಿರುವ ದಿನಗಳಲ್ಲಿ ದೇಶದ ಭವಿಷ್ಯವನ್ನು ಕಾಪಾಡಲು ರಾಜಕೀಯ ಧ್ರುವೀಕರಣ ವಿಧಾನ ಪರಿಷತ್ತಿನ ಚುನಾವಣೆ ಮುನ್ನುಡಿ ಬರೆಯಲಿದೆ. ಇದು ಲೋಕಸಭಾ ಚುವನಾವಣೆಗೆ ನಾಂದಿ ಹಾಡಲಿದೆ. ಕರ್ನಾಟಕ ಜನತಾ ಪಕ್ಷ ಹಾಗೂ ಭಾರತೀಯ ಜನತಾ ಪಕ್ಷ ಒಂದಾಗಿವೆ. ರಾಜಕಾರಣ ನಿಂತ ನೀರಲ್ಲ, ಸದಾ ಹರಿಯುತ್ತಿರುವ ನೀರು ಎಂದು ರಾಜಕಿಯದ ಒಲವು ಗೆಲವುಗಳನ್ನು ವಿವರಿಸಿದರು.
ಸುಭದ್ರ ಸರ್ಕಾರಕ್ಕೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ರಾಜ್ಯದಲ್ಲಿ ನಡೆಯಲಿರುವ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಕರ್ನಾಟಕ ಜನತಾ ಪಕ್ಷ ಹಾಗೂ ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದನ್ನು ಕಾಂಗ್ರೆಸ್ ಪಕ್ಷದವರು ಸೋಲಿನ ಭಯದಿಂದ ಅಪವಿತ್ರ ಮೈತ್ರಿ ಎಂದು ಆಡಿಕೊಳ್ಳುತ್ತಿದ್ದಾರೆ. ನಮ್ಮ ಮೈತ್ರಿ ಲೋಕಸಭಾ ಚುನಾವಣೆಯಲ್ಲಿ ಮುಂದುವರಿಯಲಿದೆ. ನಾವು ಜಾರಿಗೆ ತಂದ ಹಲವಾರು ಜನಪರ ಯೋಜನೆಗಳನ್ನು ರದ್ದುಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಜನವಿರೋಧಿಯಾಗಿದೆ. ಸುಭದ್ರ ಸರ್ಕಾರ ನಿರ್ಮಾಣ ಮಾಡಲು ಬಿಜೆಪಿ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯ ನೀಡಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಎಂ. ಉದಾಸಿ, ಶಾಸಕ ಯು ಬಿ ಬಣಕಾರ, ಕೆಜೆಪಿ ತಾಲೂಕಾಧ್ಯಕ್ಷ ಮಹೇಶ ಗುಬ್ಬಿ, ಪಪಂ ಸದಸ್ಯರಾದ ಮಹೇಂದ್ರ ಬುಡಳ್ಳಿ, ರವಿ ಪುಟ್ಟಪ್ಪಗೌಡ್ರ, ತಾಪಂ ಉಪಾಧ್ಯಕ್ಷೆ ರೂಪಾ ಆಡೂರ, ಎಲ್.ಎಸ್. ಚಪ್ಪರದಳ್ಳಿ, ಎಂ.ಎಚ್. ಪುಟ್ಟಪ್ಪಗೌಡ್ರ, ಬಿ.ಎಸ್. ಅಕ್ಕಿವಳ್ಳಿ, ದತ್ತಾತ್ರೆಯ ರಾಯ್ಕರ, ಷನ್ಮುಖ ಮಳಿಮಠ ಉಪಸ್ಥಿತರಿದ್ದರು.