ಗಾನಕೋಗಿಲೆ ಮಹಾಲಕ್ಷ್ಮೀ ಬಡಿಗೇರ ಸ್ಮರಣೋತ್ಸವ
ಹಾನಗಲ್ಲ: ತಾಲೂಕಿನ ಖ್ಯಾತ ಗಾಯಕಿ, ಗಾನಕೋಗಿಲೆ ಮಹಾಲಕ್ಷ್ಮೀ ಬಡಿಗೇರ ಅವರ 10ನೇ ಸ್ಮರಣೋತ್ಸವವನ್ನು ತಾಲೂಕಿನ ಅಕ್ಕಿಆಲೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಆಚರಿಸಲಾಯಿತು.
ಗಾನಕೋಗಿಲೆ ಮಹಾಲಕ್ಷ್ಮೀ ಬಡಿಗೇರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಹಾಗೂ ಸಂಗೀತೋತ್ಸವ ಸಮಿತಿಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ದಂತ ವೈದ್ಯಾಧಿಕಾರಿ ಡಾ ಗಗನ ಮಾಳೋದೆ, ಮಹಾಲಕ್ಷ್ಮೀ ಬಡಿಗೇರ ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ಚಿಕ್ಕ ವಯಸ್ಸಿನಲ್ಲೇ ಖ್ಯಾತಿ ಸಂಪಾದಿಸಿದ್ದರು. ರಾಜ್ಯ ಮತ್ತು ರಾಷ್ಟ್ರ ಮಟ್ಟಗಳಲ್ಲಿ ಹಲವು ಪ್ರಶಸ್ತಿ ಪಡೆದಿದ್ದ ಅವರು, ಕರ್ನಾಟಕ ಮಾತ್ರವಲ್ಲದೆ, ಮುಂಬೈ, ನಾಗಪುರ, ಸೋಲಾಪುರ, ಸಾಂಗ್ಲಿ, ಹೈದರಾಬಾದ್, ನವದೆಹಲಿ ಮುಂತಾದ ಕಡೆಗಳಲ್ಲಿ ಸಂಗೀತ ಸುಧೆ ಹರಿಸಿದ್ದರು. ದೂರದರ್ಶನ ಹಾಗೂ ಆಕಾಶವಾಣಿ ಕಲಾವಿದರಾಗಿದ್ದರು ಎಂದು ಸ್ಮರಿಸಿದರು.
ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷ ಚನ್ನವೀರ ಬೆಲ್ಲದ ಮಾತನಾಡಿ, ಮಹಾಲಕ್ಷ್ಮೀ ಬಡಿಗೇರ ಗ್ರಾಮೀಣ ಪ್ರದೇಶಗಳಲ್ಲಿ ಸಾರಾಯಿ ಮಾರಾಟದ ವಿರುದ್ಧ ಹೋರಾಟ ನಡೆಸಿದ್ದರು. ಅನೇಕ ವಿಧವೆಯರಿಗೆ ಮರು ವಿವಾಹ ಮಾಡಿಸಿ ಅವರೆಲ್ಲರ ಬಾಳಿನಲ್ಲಿ ಬೆಳಕು ತರಿಸಿದ್ದರು. ಸಾಕ್ಷರತಾ ಆಂದೋಲನದಲ್ಲಿ ಹಳ್ಳಿಗಳಿಗೆ ಹೋಗಿ ಅಕ್ಷರ ಕಲಿಸಿದ್ದು ಅವರ ಅವಿಸ್ಮರಣೀಯ ಮಹಿಳಾ ಜಾಗೃತಿ ಕೆಲಸಗಳಲ್ಲಿ ಒಂದು ಎಂದರು.
ನಿವೃತ್ತ ಶಿಕ್ಷಕ ಗೋಪಾಲಾಚಾರ ಬಡಿಗೇರ ಪ್ರಾಸ್ತಾವಿಕ ಮಾತನಾಡಿ, ಮಹಾಲಕ್ಷ್ಮೀ ಸ್ಮರಣಾರ್ಥ ಗೆಜ್ಜಿಹಳ್ಳಿ ಗ್ರಾಮದಲ್ಲಿ ಸ್ಮಾರಕ ಭವನ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಕುರಿತು ನೀಲನಕ್ಷೆ ಸಿದ್ಧಪಡಿಸಲಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.
ಸಮಿತಿಯ ಉಪಾಧ್ಯಕ್ಷೆ ಚಂದ್ರಕಾಂತಮ್ಮ ಬಡಿಗೇರ, ವೈದ್ಯಾಧಿಕಾರಿ ಡಾ ಬಿ. ರಾಜಪ್ಪ, ಡಾ ಚಿನ್ನಪ್ಪ ಕಾಂತಿ, ಹಾನಗಲ್ಲ ಸ್ನೇಹಾ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಪೂಜಾರ, ನಿಂಗಪ್ಪ ಬಡಿಗೇರ, ಅನಸೂಯಮ್ಮ ಬಡಿಗೇರ, ಗಣಪತಿ ಬಡಿಗೇರ, ಚಿಕ್ಕಪ್ಪ ಕೊಟ್ಟಣದ, ಗಣಪತಿ ದೇಸಾಯಿ, ಮಹಾಂತೇಶ ವಿರುಪಣ್ಣನವರ, ಪರಸಪ್ಪ ಅಗಸರ, ಬಡವಪ್ಪ ಆನವಟ್ಟಿ, ಪ್ರಕಾಶ ರಸಾಳಕರ, ಆರೋಗ್ಯ ಇಲಾಖೆಯ ಮಹಾಂತೇಶ, ಎಂ.ಬಿ. ಹೆಬ್ಬಾಳ, ಮಧು ಪೂಜಾರ, ಅಂಜನಾ ಜಾಡರ ಇದ್ದರು. ಆರೋಗ್ಯ ಕೇಂದ್ರದಲ್ಲಿನ ರೋಗಿಗಳಿಗೆ ಹಾಲು, ಹಣ್ಣು ವಿತರಿಸಲಾಯಿತು.