ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಪರಿಷತ್ ಚುನಾವಣೆಗೆ ಸಿದ್ಧತೆ

Mainashree
Updated On : 21 Aug 2013, 11:31 am

ಹಾವೇರಿ: ಅವಿಭಜಿತ ಧಾರವಾಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ಆ. 22ರಂದು ಬೆಳಗ್ಗೆ 8ರಿಂದ ಸಂಜೆ 4ರ ವರೆಗೆ ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆಯ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ, ಹಾವೇರಿ ಹಾಗೂ ಗದಗಗಳಲ್ಲಿಯೂ ಈ ಮತದಾನ ನಡೆಯಲಿದೆ. ಹಾವೇರಿ ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಮತಗಟ್ಟೆಗಳು...
ಜಿಲ್ಲೆಯಲ್ಲಿ 3,307 ಮತದಾರರಿದ್ದು, ಒಂದು ಜಿಪಂ, ಏಳು ತಾಪಂ, ಎರಡು ನಗರಸಭೆ, ಐದು ಪುರಸಭೆ, ಒಂದು ಪಟ್ಟಣ ಪಂಚಾಯತಿಗಳನ್ನು ಒಳಗೊಂಡಿದೆ. ಇವುಗಳ ಚುನಾಯಿತ ಪ್ರತಿನಿಧಿಗಳು ಮತದಾರರಾಗಿದ್ದಾರೆ. ಈ ಪೈಕಿ 1771 ಪುರುಷ, 1536 ಮಹಿಳಾ ಮತದಾರರಿದ್ದಾರೆ. ಮೂರು ಜಿಲ್ಲೆಗಳ ಪೈಕಿ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿನ ಮತದಾರರಿದ್ದಾರೆ. ಮತದಾನಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು 216 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದರಲ್ಲಿ 176 ಸಾಮಾನ್ಯ ಮತಗಟ್ಟೆಗಳಿದ್ದರೆ 40 ಸೂಕ್ಷ್ಮ ಎಂದು ಗುರುತಿಸಲಾಗಿದೆ.
ಹಾಂವಶಿ ಗ್ರಾಪಂನಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಅತಿಕಡಿಮೆ ಎಂದರೆ 6 ಮತಗಳಿವೆ. ಹಾವೇರಿ ತಾಪಂ ಕಾರ್ಯಾಲಯದಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ಗರಿಷ್ಠ 85 ಮತಗಳಿವೆ. ಜಿಲ್ಲೆಯಲ್ಲಿ ಸ್ಥಾಪಿಸಲಾದ ಪ್ರತಿಯೊಂದು ಮತಗಟ್ಟೆಗೆ ಒಬ್ಬ ಪ್ರಿಸೈಡಿಂಗ್ ಆಫೀಸರ್, ಒಬ್ಬ ಪೋಲಿಂಗ್ ಆಫೀಸರ್ ಹಾಗೂ ಶೇ. 10ರಷ್ಟು ಕಾಯ್ದಿರಿಸಿದ ಸಿಬ್ಬಂದಿ ಸೇರಿ ಒಟ್ಟು 239 ಪ್ರಿಸೈಡಿಂಗ್ ಆಫೀಸರ್ ಹಾಗೂ 239 ಪೋಲಿಂಗ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಯಕ ವಿವರಿಸಿದರು.
ಮತದಾನದ ವಿವರ: ಚುನಾಯಿಸಬೇಕಾದ ಅಭ್ಯರ್ಥಿಗಳಿಗೆ ಅವರ ಹೆಸರಿನ ಮುಂದೆ ಪ್ರಾಶಸ್ತ್ಯಾನಾನುಸಾರವಾಗಿ ಮತ ನೀಡಬೇಕು. ಹಿಂದೂ ಅರೇಬಿಕ್, ರೋಮನ್ ಅಂಕಿಗಳನ್ನು ಅಥವಾ ಸಂವಿಧಾನ ಅನುಸೂಚಿಯಲ್ಲಿ ಮನ್ನಣೆ ಪಡೆದಿರುವ ಯಾವುದೇ ಭಾಷೆಯಲ್ಲಿ ಬಳಕೆಯಲ್ಲಿರುವ ಅಂಕಿ-ಅಂಶಗಳನ್ನು ನಮೂದಿಸಬಹುದು. ಚುನಾವಣಾ ಆಯೋಗದಿಂದ ಪೂರೈಸಿದ ನೇರಳೆ ಸ್ಕೆಚ್ ಪೆನ್ನನ್ನು ಮಾತ್ರ ಬಳಸಬಹುದು. ಪ್ರತಿ ಮತಗಟ್ಟೆಗೆ ಒಬ್ಬರಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಅಧಿಕಾರಿಯನ್ನು ಮೈಕ್ರೋ ಅಬ್ಸರ್ವರ್ ಎಂದು ನೇಮಕ ಮಾಡಲಾಗಿದೆ.
ವಿಡಿಯೋ ತಂಡ: ಚುನಾವಣೆ ಮತದಾನ ಪ್ರಕ್ರಿಯೆ ಶಾಂತ, ಸುವ್ಯವಸ್ಥಿತವಾಗಿ ನಡೆಯಲು ಹಾಗೂ ಚುನಾವಣಾ ಅಪರಾಧಗಳು ನಡೆಯದಂತೆ ನಿಗಾ ವಹಿಸಲು ಮಾದರಿ ನೀತಿ ಸಂಹಿತೆ ಅಡಿಯಲ್ಲಿ ಪ್ರತಿ ತಾಲೂಕಿಗೆ ವಿಶೇಷ ವಿಡಿಯೋ ತಂಡವನ್ನು ರಚಿಸಲಾಗಿದೆ. ಮತದಾನದ ದಿನ ಜಿಲ್ಲೆಯ 216 ಮತಗಟ್ಟೆಗಳಲ್ಲಿ ಮತದಾರರನ್ನು ಗುರುತಿಸಲು ಅಧಿಕಾರಿಗಳನ್ನು ನೇಮಿಸಲಾಗಿದೆ.
ಜಾತ್ರೆ ರದ್ದು: ಮತದಾನದ ದಿನವಾದ ಆ. 22ರಂದು ಜಿಲ್ಲೆಯಲ್ಲಿ ನಡೆಯುವ ಸಂತೆ ಜಾತ್ರೆಗಳನ್ನು ರದ್ದುಗೊಳಿಸಲಾಗಿದೆ. ಹಾವೇರಿ, ಹಲಗೇರಿ, ಅಂದಲಗಿ, ದುಂಡಸಿ, ಹೋತನಹಳ್ಳಿ, ತಿಳುವಳ್ಳಿ ಮುಂತಾದ ಕಡೆಗಳಲ್ಲಿ ಸಂತೆಗಳನ್ನು ರದ್ದುಗೊಳಿಸಲಾಗಿದೆ.
ಡಿಮಸ್ಟರಿಂಗ್: ಜಿಲ್ಲೆಯ ಎಲ್ಲ ತಾಲೂಕುಗಳ ತಹಸೀಲ್ದಾರ್ ಕಾರ್ಯಾಲಯಗಳಲ್ಲಿ ಆ. 21ರಂದು ಮಸ್ಟರಿಂಗ್ ನಡೆಯುವುದು. ಆ. 22ರಂದು ಡಿಮಸ್ಟರಿಂಗ್ ಕಾರ್ಯ ನಡೆಯಲಿದೆ. ಆನಂತರ ಮತಪೆಟ್ಟಿಗೆಗಳನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಕ್ರೋಡೀಕರಿಸಿ, ಪೊಲೀಸ್ ಬಂದೋಬಸ್ತ್‌ನಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗುವುದು ಎಂದರು.
ಎಸ್ಪಿ ಎನ್. ಶಶಿಕುಮಾರ, ಉಪವಿಭಾಗಾಧಿಕಾರಿ ಕೆ. ಚನ್ನಬಸಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement