ಬಿಸಿಯೂಟ ಖಾಸಗೀಕರಣ ಬೇಡ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 20
ಬಿಸಿಯೂಟ ನಿರ್ವಹಣೆಯ ಖಾಸಗೀಕರಣವನ್ನು ತಕ್ಷಣ ಕೈಬಿಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಜಿಲ್ಲಾ ಸಮಿತಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರೆವಣಿಗೆ ನಡೆಸಿದರು.
ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬಹಿರಂಗ ಸಮಾವೇಶವಾಗಿ ಮಾರ್ಪಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು ಹಾಗೂ ಎಸ್‌ಎಫ್‌ಐ ಕಾರ್ಯಕರ್ತರು, ಬಿಸಿಯೂಟ ನಿರ್ವಹಣೆಯ ಜವಾಬ್ದಾರಿಯನ್ನು ಕಾರ್ಪೋರೇಟ್‌ಗಳಿಗೆ ಹಾಗೂ ಎನ್‌ಜಿಓಗಳಿಗೆ ನೀಡಲು ಮುಂದಾಗಿರುವ ಸರ್ಕಾರ ಕ್ರಮವನ್ನ ಬಲವಾಗಿ ವಿರೋಧಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ, ಜಿಲ್ಲಾಧ್ಯಕ್ಷ ಬಸವರಾಜ ಪೂಜಾರ, ಜಿಲ್ಲಾ ಮುಖಂಡರಾದ ಚಂದ್ರು ಪೂಜಾರಿ, ವಿನಾಯಕ ವೈ., ಬಸವರಾಜ ವಡ್ಡರ, ಶಿವರಾಜ ಕಲ್ಕೆರೆ, ಕಾರ್ತಿಕ, ಪಾರ್ಶ್ವನಾಥ, ವಾಸುದೇವ, ಚಿದಾನಂದ, ರೋಜಾ, ಅನಿತಾ, ಲಕ್ಷ್ಮೀ, ಸಂಜಯ ಲಮಾಣಿ, ಮಲ್ಲಿಕಾರ್ಜುನ, ಅಣ್ಣಪ್ಪ, ರಾಜಪ್ಪ, ಪ್ರಶಾಂತ, ವಿನಾಯಕ ಇದ್ದರು.
ಬೇಡಿಕೆಗಳು...
1. ಶಾಲಾ ಆವರಣದಲ್ಲಿಯೇ ಮಕ್ಕಳಿಗೆ ಬಿಸಿಯೂಟ ತಯಾರು ಮಾಡಿಕೊಡಬೇಕು. ಅಡುಗೆಮನೆ, ಶುದ್ಧ ಕುಡಿಯುವ ನೀರು, ಗ್ಯಾಸ್ ಸ್ಟವ್, ಪಾತ್ರೆ, ತಟ್ಟೆ ಇನ್ನಿತರ ಅಗತ್ಯ ಪರಿಕರಗಳನ್ನು ಪೂರೈಸಬೇಕು. ಆಹಾರ ಪದಾರ್ಥ, ತರಕಾರಿ ಹಾಳಾಗದಂತೆ ಕಾಪಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
2. ರಾಜ್ಯವ್ಯಾಪಿ 60 ಲಕ್ಷದಷ್ಟು ವಿದ್ಯಾರ್ಥಿಗಳು ಈ ಯೋಜನೆ ವ್ಯಾಪ್ತಿಯಲ್ಲಿ ಬರುವುದರಿಂದ ಶಿಕ್ಷಣ ಇಲಾಖೆಯಡಿ ಬಿಸಿಯೂಟ ಯೋಜನೆ ಪ್ರಾಧಿಕಾರ, ನಿಗಮ ಅಥವಾ ನಿರ್ದೇಶನಾಲಯ ಸ್ಥಾಪಿಸಿ. ನಿರ್ವಹಿಸಬೇಕು.
3. ಸ್ಥಳೀಯವಾಗಿ ಸಿಗುವ ಪೌಷ್ಟಿಕಾಂಶವಿರುವ ಪದಾರ್ಥಗಳನ್ನು, ತರಕಾರಿ, ಹಣ್ಣುಗಳು, ಮೊಟ್ಟೆ, ಮೀನು, ಮಾಂಸ ಇತ್ಯಾದಿ ಉಪಯೋಗಿಸಿ ಅಡುಗೆ ತಯಾರಿಸಲು ಮುಂದಾಗಬೇಕು. ತಪಾಸಣೆಗಾಗಿ ವಿಶೇಷ ಗಮನ ನೀಡಬೇಕು.
4. ಪೋಷಕರ ಪ್ರಾತಿನಿಧ್ಯವಿರುವ ಎಸ್‌ಡಿಎಂಸಿಯಲ್ಲಿ ಪಾರದರ್ಶಕವಾಗಿ ಈ ಯೋಜನೆ ಜಾರಿಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಎಸ್‌ಡಿಎಂಸಿಯ ಕೆಲವರು ಅನಗತ್ಯವಾಗಿ ಕಿರುಕುಳ ನೀಡದಂತೆ ಎಚ್ಚರ ವಹಿಸಬೇಕು.
5. ಯೋಜನೆಯಲ್ಲಿ ದುಡಿಯುತ್ತಿರುವ ಒಂದು ಲಕ್ಷಕ್ಕೂ ಹೆಚ್ಚು ಮಹಿಳೆಯರು ಬಡ, ದಲಿತ, ಹಿಂದುಳಿದ ಹಾಗೂ ದುರ್ಬಲ ವರ್ಗದವರಾಗಿದ್ದು, ಅವರ ಸೇವೆ ಕಾಯಂಗೊಳಿಸಬೇಕು. ಕೇರಳ ರಾಜ್ಯದಲ್ಲಿ ಮುಖ್ಯ ಅಡುಗೆಯವರಿಗೆ ರು. 4 ಸಾವಿರ, ಸಹಾಯಕರಿಗೆ ರು. 3 ಸಾವಿರ ವೇತನ ನೀಡಲಾಗುತ್ತಿದೆ. ಅದರಂತೆ ಇಲ್ಲೂ ಕನಿಷ್ಠ ವೇತನ ಜಾರಿಗೊಳಿಸಬೇಕು.
6. ಶಾಲಾ ಮುಖ್ಯೋಪಾಧ್ಯಾಯರು ತಿಂಗಳ ಆಹಾರ ಪದಾರ್ಥಗಳ ಬೇಡಿಕೆ ಪಟ್ಟಿಯನ್ನು ತಯಾರಿಸಿ ನೀಡಬೇಕು.
7. ಅಡುಗೆಯವರಿಗೆ ಕಾಲ ಕಾಲಕ್ಕೆ ಅಗತ್ಯ ತರಬೇತಿ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಸಿಗುವಂತಾಗಲು ಪ್ರತಿದಿನ ಒಬ್ಬ ವಿದ್ಯಾರ್ಥಿಗೆ ಕನಿಷ್ಠ ರು. 20 ಆಹಾರ ವೆಚ್ಚ ನೀಡಬೇಕು. ಈ ಗುಣಾತ್ಮಕ ಕ್ರಮಗಳ ಮೂಲಕ ಬಿಸಿಯೂಟ ಯೋಜನೆ ಬಲಪಡಿಸಬೇಕು.
8. ಬಿಸಿಯೂಟ ನಿರ್ವಹಣೆಯ ಖಾಸಗೀಕರಣವನ್ನು ತಕ್ಷಣ ಕೈಬಿಡಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದ ಮನವಿ ಪತ್ರವನ್ನು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಅರ್ಪಿಸಲಾಯಿತು. ಮನವಿ ಸ್ವೀಕರಿಸಿದ ತಹಸೀಲ್ದಾರ್ ಸೂಕ್ತ ಕ್ರಮಕ್ಕಾಗಿ ಮೇಲಧಿಕಾರಿಗಳ ಜತೆ ಚರ್ಚಿಸುವ ಭರವಸೆ ನೀಡಿದರು.