ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಹಂದಿಮುಕ್ತ ಹಾವೇರಿ

Mainashree
Updated On : 21 Aug 2013, 11:30 am

ಕನ್ನಡಪ್ರಭ ವಾರ್ತೆ, ಹಾವೇರಿ, ಆ. 20
ನಗರವನ್ನು ಹಂದಿ ಮುಕ್ತವನ್ನಾಗಿಸಲು ನಗರಸಭೆ ಮತ್ತೊಮ್ಮೆ ಮುಂದಾಗಿದೆ. ಹಂದಿ ಸಾಗಾಣಿಕೆದಾರರಿಗೆ ಒಂದು ವಾರದ ಗಡುವು ನೀಡಿದ್ದು, ಈ ಸಲವಾದರೂ ಹಾವೇರಿ ಹಂದಿ ಮುಕ್ತವಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ.
ಹಂದಿಗಳನ್ನು ನಗರ ಪ್ರದೇಶದಿಂದ ಸಾಗಾಟ ಮಾಡುವುದಕ್ಕೆ ಸಂಬಂಧಿಸಿದಂತೆ ನಗರಸಭೆ ಈವರೆಗೆ ನಡೆಸಿರುವ ಕಾರ್ಯಾಚರಣೆ ಕಾಟಾಚಾರಕ್ಕೆ ಎಂಬಂತಾಗಿತ್ತು. ನಗರದ ಎಲ್ಲೆಡೆ ಕಂಡುಬರುತ್ತಿರುವ ಹಂದಿಗಳೇ ಇದಕ್ಕೆ ಸಾಕ್ಷಿ.
ವಾಹನ ಸವಾರರು ಹಂದಿಗಳ ಉಪಟಳದಿಂದ ಬೇಸತ್ತು ಹೋಗಿದ್ದಾರೆ. ವಾಹನ ಚಲಾಯಿಸಿಕೊಂಡು ಹೋಗುವಾಗ ಆಕಸ್ಮಿಕವಾಗಿ ಎದುರಾಗುವ ಹಂದಿಗಳನ್ನು ಬಚಾವ್ ಮಾಡುವ ಭರದಲ್ಲಿ ಅನೇಕರ ಕೈ-ಕಾಲು ಮುರಿದುಕೊಂಡಿದ್ದಾರೆ. ವರಾಹಗಳ ಉಪಟಳ ಇಷ್ಟಕ್ಕೇ ನಿಲ್ಲುವುದಿಲ್ಲ. ನಗರದ ಹಲವು ಬಡಾವಣೆಗಳಿಗೆ ಹಾಗೂ ಮನೆಗಳಿಗೆ ನುಗ್ಗಿ ಮಕ್ಕಳು, ವಯೋವೃದ್ಧರ ಮೇಲೂ ದಾಳಿ ಮಾಡುತ್ತಿವೆ ಎಂದು ಹಿರಿಯ ನಾಗರಿಕ ಬಸಪ್ಪ ಆಕ್ರೋಶದಿಂದ ಹೇಳುತ್ತಾರೆ.
ಆರಂಭ ಶೂರತ್ವ
ನಗರಸಭೆ ಹಂದಿಗಳ ನಿರ್ಮೂಲನೆ ಕಾರ್ಯಾಚರಣೆಗೆ ಪ್ರತಿ ಬಾರಿಯೂ ಆರಂಭಶೂರತ್ವ ಪ್ರದರ್ಶಿಸುತ್ತದೆ. ನಗರ ಪ್ರದೇಶದಿಂದ ಹಂದಿಗಳನ್ನು ಸಾಗಿಸದೇ ಇರುವ ಮಾಲೀಕರ ಮೇಲೆ ಆಡಳಿತ ವರ್ಗ ಸೂಕ್ತ ಕ್ರಮ ಕೈಗೊಂಡಿದ್ದರೆ ಇಷ್ಟರೊಳಗೆ ಹಾವೇರಿ ಹಂದಿಮುಕ್ತ ನಗರವಾಗಿರುತ್ತಿತ್ತು. ಸ್ವಚ್ಛತೆ ಕಾಪಾಡುವುದಕ್ಕೂ ಸುಲಭವಾಗುತ್ತಿತ್ತು.
ಹಂದಿಗಳನ್ನು ನಗರ ಪ್ರದೇಶದಿಂದ ಸಾಗಿಸುವ ಕಾರ್ಯಾಚರಣೆ ಆರಂಭಿಸಿ 2-3 ದಿನಗಳಲ್ಲೇ ನಗರಸಭೆ ಉತ್ಸಾಹ ಕಳೆದುಕೊಳ್ಳುತ್ತದೆ. ಇದನ್ನು ಚೆನ್ನಾಗಿ ಅರಿತಿರುವ ಹಂದಿಗಳ ಮಾಲೀಕರು, ನಗರಸಭೆ ಅಧಿಕಾರಿಗಳು ತಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಾಧ್ಯವೇ ಇಲ್ಲ ಎಂಬ ಮನೋಭಾವನೆ ತಾಳಿದ್ದಾರೆ.
ಪ್ರತಿಭಟನೆ
ಹಂದಿಗಳ ಉಪಟಳದಿಂದ ಬೇಸತ್ತ ಜನತೆ ನಗರಸಭೆ ವಿರುದ್ಧ ಅನೇಕ ಸಾರಿ ಪ್ರತಿಭಟನೆ ನಡೆಸಿದ್ದುಂಟು. ಜನತೆ ಆಕ್ರೋಶ ವ್ಯಕ್ತಪಡಿಸಿದಾಗ ನಿದ್ರೆಯಿಂದ ಎಚ್ಚೆತ್ತುಕೊಳ್ಳುವ ಅಧಿಕಾರಿ ವರ್ಗ, 2-3 ದಿನ ವಾರ್ಡ್‌ಗಳಲ್ಲಿ ಸಂಚರಿಸಿ ಎಲ್ಲ ಹಂದಿಗಳನ್ನೂ ಹೊರಗಟ್ಟುವ ಶೂರರಂತೆ ಪೋಸ್ ನೀಡುತ್ತದೆ. ಆಮೇಲೆ, ಅಸಡ್ಡೆ ಪ್ರದರ್ಶಿಸುತ್ತದೆ ಎಂಬ ಆರೋಪ ಇದೆ.
ಪ್ರತಿ ಸಭೆಯಲ್ಲೂ...
ನಗರಸಭೆ ನಡೆಸುವ ಪ್ರತಿ ಸಭೆಯಲ್ಲೂ ಹಂದಿಗಳ ನಿರ್ಮೂಲನೆ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತದೆ. ಆದರೆ, ಅದು ಅಷ್ಟಕ್ಕೇ ಸೀಮಿತಗೊಳ್ಳುತ್ತದೆ. ಸಭೆಯಲ್ಲಿ ಕೈಗೊಳ್ಳುವ ನಿರ್ಣಯ ಕಾರ್ಯರೂಪಕ್ಕೆ ತರಲು ಜನಪ್ರತಿನಿಧಿಗಳು, ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ.
ಒಳ ಒಪ್ಪಂದವೇ..?
ಈ ಹಿಂದೆ ಹಂದಿ ಮುಕ್ತ ಹಾವೇರಿ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟು ಕಾರ್ಯಾಚರಣೆ ನಡೆಸಲಾಗಿತ್ತು. ಕೆಲ ಹಂದಿಗಳನ್ನು ಹಿಡಿದು ಬೇರೆಡೆಗೆ ಸಾಗಿಸಲಾಗಿತ್ತು. ಇನ್ನಷ್ಟು ಹಂದಿಗಳಿಗೆ ವಿಷ ನೀಡಿ ಕೊಲ್ಲಲು ಮುಂದಾಗಿತ್ತು. ನಗರಸಭೆಯ ಈ ನಿರ್ಧಾರದ ವಿರುದ್ಧ ರೊಚ್ಚಿಗೆದ್ದ ಹಂದಿಗಳ ಮಾಲೀಕರು ಪ್ರತಿಭಟನೆ ಮಾಡಿದ್ದರಿಂದ ಹಂದಿ ಕಾರ್ಯಾಚರಣೆ ಮೊಟಕಾಗಿತ್ತು.
ಹಂದಿಗಳನ್ನು ಆಯಾ ಮಾಲೀಕರು ನಗರ ಪ್ರದೇಶದಿಂದ ನಾಲ್ಕಾರು ಕಿ.ಮೀ. ದೂರಕ್ಕೆ ಸಾಗಿಸದಿದ್ದಲ್ಲಿ ಕರ್ನಾಟಕ ಪೌರಾಡಳಿತ ಕಾಯ್ದೆ 1964ರ ಕಲಂ 223ರ ಪ್ರಕಾರ ನಗರಸಭೆಯೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಿದೆ ಎಂದು ನಗರಸಭೆ ಘರ್ಜಿಸಿತ್ತು. ಆಗ ಕೆಲವರು ಹಂದಿಗಳನ್ನು ನಗರ ಪ್ರದೇಶದಿಂದ ದೂರ ಸಾಗಿಸಿದರು. ಹಲವರು ಈ ಆದೇಶಕ್ಕೆ ಕಿಮ್ಮತ್ತು ಕೊಡಲಿಲ್ಲ. ಇದು ಹಂದಿಗಳ ಸಂತತಿ ಹೆಚ್ಚಲು ಅನುಕೂಲ ಮಾಡಿಕೊಟ್ಟಿತು.
ಹಂದಿಗಳಿಂದ ಜನರಿಗೆ ಆಗುತ್ತಿರುವ ಕಿರಿಕಿರಿ ಗಮನಿಸಿರುವ ನಗರಸಭೆ, ಮತ್ತೆ ಪ್ರತಿಭಟನೆ ಎದುರಿಸುವ ಮುಂಚೆ ಎಚ್ಚೆತ್ತುಕೊಳ್ಳಲು ಪ್ರಯತ್ನಿಸಿದೆ. ಆದರೆ, ನಗರಸಭೆ ತನ್ನ ನಿರ್ಧಾರವನ್ನು ಎಷ್ಟು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಬಿ.ಕೆ. ಮಹೇಂದ್ರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement