ಕಾನೂನು ಅರಿವು ಪಡೆಯಿರಿ: ನ್ಯಾ. ಸಂದೇಶ್
ಹಾವೇರಿ: ಮಹಿಳೆಯರು ಕಾನೂನಿನ ಅರಿವು ಪಡೆದು ತಮ್ಮ ರಕ್ಷಣೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಸಂದೇಶ ತಿಳಿಸಿದರು. ನಗರದ ಜಿಲ್ಲಾ ನೌಕರರ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಮಂಗಳವಾರ ಜರುಗಿದ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಒಬ್ಬ ಮಹಿಳೆ ಅಕ್ಷರಸ್ಥಳಾದರೆ, ಇಡೀ ಕುಟುಂಬವೇ ಶಿಕ್ಷಣ ಪಡೆದಂತಾಗುತ್ತದೆ. ಮಹಿಳೆಯರಿಗೆ ಏನೇ ತೊಂದರೆಯಾದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವಂತೆ ಸಲಹೆ ನೀಡಿದರು. ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಮಾತನಾಡಿ, ಸರ್ಕಾರ ಮಹಿಳೆಯರಿಗಾಗಿ ಹಲವು ಕಾರ್ಯಕ್ರಮ ಜಾರಿಗೊಳಿಸಿದೆ. ಮಹಿಳೆಯರು ಸರ್ಕಾರದ ಸೌಲಭ್ಯ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದರು. ಎಸ್ಪಿ ಎನ್. ಶಶಿಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಚನ್ನಮ್ಮ ಹೊಳಿಹೊಸೂರ, ಇಡಾರಿ ಸಂಸ್ಥೆಯ ಅಧ್ಯಕ್ಷೆ ಪರಿಮಳಾ ಜೈನ್, ನ್ಯಾಯವಾದಿ ರೆಹನಾ ಚನ್ನಪಟ್ಟಣ ಮಾತನಾಡಿದರು. ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಎಸ್. ಪಾಟೀಲ ಸ್ವಾಗತಿಸಿದರು.