ಶಿಕ್ಷಕರ ಸ್ಥಳಾಂತರ ನಿಲ್ಲಿಸಿ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 21
ಪ್ರೌಢಶಾಲೆಯ ಹೆಚ್ಚುವರಿ ಶಿಕ್ಷಕರ ಸ್ಥಳಾಂತರ ಪ್ರಕ್ರಿಯ ಕೂಡಲೇ ಸ್ಥಗಿತಗೊಳಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿ ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಹಾಗೂ ಪಾಲಕರೊಂದಿಗೆ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಕರ್ಜಗಿ ಸರ್ಕಾರಿ ಪ್ರೌಢಶಾಲೆಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಬಸ್ ನಿಲ್ದಾಣದವರೆಗೂ ತೆರಳಿತು. ಮೆರವಣಿಗೆಯುದ್ದಕ್ಕೂ ಸರ್ಕಾರದ ಅವೈಜ್ಞಾನಿಕ ನೀತಿಯ ವಿರುದ್ಧ ಘೋಷಣೆ ಕೂಗಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಮುಖಂಡರು, ಪ್ರೌಢಶಾಲೆಗಳಿಗೆ ಶಿಕ್ಷಕರ ವಿದ್ಯಾರ್ಥಿಗಳ ಅನುಪಾತವನ್ನು ನಿಗದಿಗೊಳಿಸಬೇಕು. ಆ ಅನುಪಾತ ರಾಜ್ಯವ್ಯಾಪಿ ಏಕರೂಪವಾಗಿರಬೇಕು. ಹಾವೇರಿ ತಾಲೂಕು ಕರ್ಜಗಿ ಪ್ರೌಢಶಾಲೆಯ ನಾಲ್ವರು ಶಿಕ್ಷಕರ ಸ್ಥಳಾಂತರವನ್ನು ಕೂಡಲೇ ಕೈಬಿಡಬೇಕು. 1986ರ ಹೊಸ ಶಿಕ್ಷಣ ನೀತಿ ಹಾಗೂ ಕೋಠಾರಿ ಆಯೋಗದ ಶಿಫಾರಸಿನಂತೆ ಶಾಲಾ ಹಂತದಲ್ಲಿ ಪ್ರತಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರು ಇರಬೇಕೆಂಬ ನೀತಿ ಜಾರಿಗೆ ತರಬೇಕು. ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಕುರಿತಾದ ಮನವಿ ಪತ್ರವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಣ ಸಚಿವರಿಗೆ ಸಲ್ಲಿಸಲಾಯಿತು. ಸರ್ಕಾರ ತಕ್ಷಣ ಎಲ್ಲ ಬೇಡಿಕೆಗಳನ್ನು ಈಡೇರಿಸಲು ತ್ವರಿತ ಗತಿಯಲ್ಲಿ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಎಸ್‌ಎಫ್‌ಐ ತೀವ್ರತರದ ಹೋರಾಟ ಹಮ್ಮಿಕೊಳ್ಳಲಿದೆ ಎಂದೂ ಪ್ರತಿಭಟನಾಕಾರರು ಎಚ್ಚರಿಸಿದರು.
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ರೇಣುಕಾ ಕಹಾರ, ರಾಜ್ಯ ಉಪಾಧ್ಯಕ್ಷ ನಾರಾಯಣ ಕಾಳೆ, ಬಸವರಾಜ ಪೂಜಾರ, ವಿನಾಯಕ ವೈ., ಸುಭಾಷ ಮಾದರ, ಜಿಪಂ ಮಾಜಿ ಸದಸ್ಯ ನಿಂಗಪ್ಪ ಹಾವೇರಿ, ಗ್ರಾಪಂ ಸದಸ್ಯರಾದ ಕುಮಾರ, ಚಿಕ್ಕಪ್ಪ ಗಂಗಮ್ಮನವರ, ಶಂಕ್ರಪ್ಪ ವಡ್ಡರ, ಮೆಹಬೂಬಲಿ, ಮಂಜುನಾಥ ಪೂಜಾರ, ಜಗದೀಶ, ಮಾಲತೇಶ, ಸಿದ್ದಪ್ಪ, ಮಂಜುನಾಥ ಕಾಯ್ಕದ, ಬಸವರಾಜ, ಸಿದ್ದಪ್ಪ, ಸಂತೋಷ, ಸುನೀಲ, ರಾಜು, ನವೀನ, ಮೇಘನಾ, ನೀಲಮ್ಮ ಇದ್ದರು.