ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಸಿದ್ಧಾರೂಢರ ತೆಪ್ಪದ ತೇರು

Lingaraj Badiger
Updated On : 22 Aug 2013, 11:32 am

ಕನ್ನಡಪ್ರಭ ವಾರ್ತೆ, ಹಾವೇರಿ, ಆ. 21
ತಾಲೂಕಿನ ಕೋಣನತಂಬಿಗಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಢರ ತೆಪ್ಪದ ತೇರನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೂಲು ಹುಣ್ಣಿಮೆಯ ದಿನವಾದ ಬುಧವಾರ ಶ್ರದ್ಧಾ ಭಕ್ತಿಯಿಂದ ಎಳೆಯಲಾಯಿತು.
ಕೋಣನತಂಬಗಿ ಗ್ರಾಮದ ಬಳಿ ಪೂರ್ವದಿಂದ ಪಶ್ಚಿಮಕ್ಕೆ ರಭಸವಾಗಿ ಹರಿಯುವ ವರದಾ ನದಿಯಲ್ಲಿ ಬುಧವಾರ ಸಂಜೆ 4ರಿಂದ 6ರ ತನಕ 500ಕ್ಕೂ ಹೆಚ್ಚು ಭಕ್ತರು ಶ್ರೀ ಸಿದ್ಧಾರೂಢರ ತೇರನ್ನು ಪಂಚಾಕ್ಷರಿ ಮಂತ್ರ ಪಠಿಸುತ್ತ ಎಳೆದು, ಭಕ್ತಿ ಸಾಗರದಲ್ಲಿ ತೇಲಾಡಿದರು.
ಶ್ರೀ ಸಿದ್ಧಾರೂಢರ ತೆಪ್ಪವನ್ನು ಭಕ್ತರು ಕುಂಬಳಕಾಯಿ ಸಹಾಯದಿಂದ, ಕೆಲವರು ಈಜುತ್ತಾ ಕೈಕೈ ಹಿಡಿದು ದೂಡುತ್ತಾ ತುಂಬಿದ ನದಿಯಲ್ಲಿ ಸಾಗುತ್ತಿದ್ದ ದೃಶ್ಯ ನೋಡಲು ನದಿಯ ಎರಡೂ ದಂಡೆಗಳ ಮೇಲೆ ಸಹಸ್ರಾರು ಭಕ್ತಾದಿಗಳು ನೆರದಿದ್ದರು.
ನದಿಯ ಪಕ್ಕದ ನದಿನೀರಲಗಿ ದಡದಲ್ಲಿ ಅಲ್ಲಿಯ ಭಕ್ತರಿಂದ ಪೂಜೆಗೊಂಡು ಶ್ರೀ ಸಿದ್ಧಾರೂಢರ ತೇರು ಪುನಃ ಗ್ರಾಮದ ದಡ ಸೇರಿತು. ಶ್ರೀ ಸಿದ್ಧಾರೂಢರ ತೇರು ಡೊಳ್ಳು, ಭಜನೆ ಮತ್ತು ಪೂಜೆಯೊಂದಿಗೆ ದೇವಾಲಯವನ್ನು ತಲುಪಿತು.
ಜಾತ್ರೆ ಅಂಗವಾಗಿ ಭಕ್ತರು ಎಂಟು ದಿನಗಳ ಕಾಲ ಹಗಲಿರುಳು ನಿರಂತರ ಪಂಚಾಕ್ಷರಿ ಮಂತ್ರ ಪಠಿಸುತ್ತ ಶ್ರೀ ಸಿದ್ಧಾರೂಡನ್ನು ಆರಾಧಿಸಿದರು. ಶ್ರೀ ಸಿದ್ಧಾರೂಢರ ಪ್ರವಚನವೂ ನಡೆಯಿತು.
ಸುಮಾರು ವರ್ಷಗಳಿಂದ ನಡೆದು ಬಂದರೂ ಇಂತಹ ಸಾಹಸಮಯ ಹಬ್ಬದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೆ ಇರುವುದು ಶ್ರೀ ಜಗದ್ಗುರು ಸಿದ್ಧಾರೂಡರ ಕೃಪೆ ಎಂಬುದು ಭಕ್ತರ ಅಂಬೋಣ.
ಕಾರ್ಯಕ್ರಮದಲ್ಲಿ ಗಂಗಯ್ಯ ಶಾಂತಯ್ಯ ಕುಲಕರ್ಣಿ, ಮಾದೇವಪ್ಪ ಲೆಂಕಪ್ಪನವರ, ಮಲ್ಲೇಶಪ್ಪ ಬಣಕಾರ, ನಿಂಗಣ್ಣ ಕುಲಕರ್ಣಿ, ಡಾ೤ ಬೆನ್ನೂರ ಪಾಲ್ಗೊಂಡಿದ್ದರು. ಕರ್ನಾಟಕದಲ್ಲೇ ವಿಶಿಷ್ಟವಾದ ಈ ತೆಪ್ಪದ ತೇರನ್ನು ವೀಕ್ಷಿಸಲು ರಾಜ್ಯದ ಮೂಲೆ-ಮೂಲೆಯಿಂದ ಭಕ್ತರು ಆಗಮಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement