ಹಗರಣಗಳಿಂದ ಪ್ರಜಾಪ್ರಭುತ್ವಕ್ಕೆ ಧಕ್ಕೆ
ಬ್ಯಾಡಗಿ: ಇತ್ತೀಚಿನ ಕೆಲವು ಹಗರಣಗಳು ಹಾಗೂ ಅವುಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಕಾರ್ಯವೈಖರಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುತ್ತಿವೆ ಎಂದು ಬಿಆರ್‌ಇ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಸಿ.ಸಿ. ಪ್ರಭುಗೌಡ್ರ ಆತಂಕ ವ್ಯಕ್ತಪಡಿಸಿದರು.
ಮೋಟೆಬೆನ್ನೂರಿನ ಸಿಆರ್‌ಬಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಹಾಗೂ ಎನ್ನೆಸ್ಸೆಸ್ ಘಟಕ ಉದ್ಘಾಟಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆ, ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾದವರೇ ಅದಕ್ಕೆ ಕುಂದುಂಟಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಇದರಿಂದಾಗಿ ಮುಂದೆ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ಬಂದರೂ ಆಶ್ಚರ್ಯವಿಲ್ಲ. ಅಭಿವೃದ್ಧಿ ಚರ್ಚೆ ಆಗಬೇಕಾದಲ್ಲಿ ಹಗರಣಗಳು ಕೋಲಾಹಲ ಮಾಡುತ್ತಿವೆ. ದೇಶ ಕಾಯುವ ಸೈನಿಕ, ಅನ್ನ ನೀಡುವ ರೈತನಂತೆ ಕಾಯಕ ನಿಷ್ಠೆ ಎಲ್ಲರಲ್ಲೂ ಬರಬೇಕು ಎಂದರು.
ಬಿ.ಎಸ್. ಚಿನ್ನಿಕಟ್ಟಿ ಪ್ರಮಾಣವಚನ ಬೋಧಿಸಿದರು. ಎಂ.ಎ. ಮುಲ್ಲಾ, ಗುರುಪ್ರಕಾಶ ಇದ್ದರು. ಶೃಕಿ ಕುಮ್ಮಣ್ಣನವರ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಎನ್ನೆಸ್ಸೆಸ್ ಅಧಿಕಾರಿ ಕೆ.ಪಿ. ಬ್ಯಾಡಗಿ ಸ್ವಾಗತಿಸಿದರು. ಉಪನ್ಯಾಸಕ ಎ.ಬಿ. ಹಣಗಿ ವಂದಿಸಿದರು.