ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾವೇರಿ

ಅಹವಾಲು ಸ್ವೀಕಾರ

Lingaraj Badiger
Updated On : 23 Aug 2013, 12:33 pm

ಹಾವೇರಿ: ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಆ. 23 ಹಾಗೂ 24ರಂದು ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು ಅಹವಾಲುಗಳನ್ನು ಸ್ವೀಕರಿಸಿ, ವಿಚಾರಣೆ ನಡೆಸಲಿದ್ದಾರೆ ಎಂದು ಕರ್ನಾಟಕ ಲೋಕಾಯುಕ್ತ ಹಾವೇರಿ ವಿಭಾಗದ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ. ಆ. 23ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ತನಕ ಹಿರೇಕೆರೂರು ಪ್ರವಾಸಿ ಮಂದಿರದಲ್ಲಿ ಹಾಗೂ ಅಂದು ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಹಾನಗಲ್ ಪ್ರವಾಸಿ ಮಂದಿರದಲ್ಲಿ, ಆ. 24ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ವರೆಗೆ ಶಿಗ್ಗಾಂವಿ ಪ್ರವಾಸಿ ಮಂದಿರದಲ್ಲಿ ಹಾಗೂ ಮಧ್ಯಾಹ್ನ 2ರಿಂದ 5ರ ವರೆಗೆ ಸವಣೂರು ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವರು. ಆಸಕ್ತರು ತಮ್ಮ ದೂರು-ದುಮ್ಮಾನಗಳನ್ನು ನಿವೇದಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಹಾವೇರಿ ತಾಲೂಕಿಗೆ ಸಂಬಂಧಿಸಿ ದೂರು, ಅರ್ಜಿಗಳಿದ್ದಲ್ಲಿ ಹಾವೇರಿ ಜಿಲ್ಲಾ ಕೇಂದ್ರದಲ್ಲಿರುವ ಆರಕ್ಷಕ ಉಪಾಧೀಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು, ಲೋಕಾಯುಕ್ತ ಕಚೇರಿಗೆ ಸಲ್ಲಿಸಬಹುದು.
ಇಂದಿನಿಂದ ತರಬೇತಿ
ಹಾವೇರಿ: ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಅಡಿಯಲ್ಲಿ ಬಾಗಲಕೋಟೆ, ಗದಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ರಾಷ್ಟ್ರೀಯ ಯುವದಳ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗಿದೆ. ಅವರಿಗೆ ತಾಲೂಕಿನ ದೇವಿಹೊಸೂರನಲ್ಲಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಅಂತರ್ ಜಿಲ್ಲಾ ರಾಷ್ಟ್ರೀಯ ಯುವದಳ ಕಾರ್ಯಕರ್ತರ ತರಬೇತಿ ಶಿಬಿರ ಆ. 23ರಿಂದ ಸೆ. 1ರ ವರೆಗೆ 10 ದಿನಗಳ ಕಾಲ ಜರುಗಲಿದೆ. ಶಿಬಿರದಲ್ಲಿ 50 ಯುವಕ-ಯುವತಿಯರು ಭಾಗವಹಿಸುವರು.ಆ. 24ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ತರಬೇತಿ ಉದ್ಘಾಟಿಸುವರು. ದೇವಿಹೊಸೂರ ಕೃಷಿ ತರಬೇತಿ ಕೇಂದ್ರದ ಉಪನಿರ್ದೇಶಕಿ ದೇವಿಕಾ ಆರ್. ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಸ್. ಗಣೇಶ ನಾಯಕ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಚನ್ನಮ್ಮ ಹೊಳಿಹೊಸೂರ ಪಾಲ್ಗೊಳ್ಳುವರೆಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಎಸ್.ಯು. ಜಮಾದಾರ ತಿಳಿಸಿದ್ದಾರೆ.
ಕಾರು ಡಿಕ್ಕಿ: ಸವಾರ ಸಾವು
ಶಿಗ್ಗಾಂವಿ: ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಹಿಂಬದಿ ಸವಾರ ತೀವ್ರ ಗಾಯಗೊಂಡ ಘಟನೆ ತಾಲೂಕಿನ ತಿಮ್ಮಾಪುರ-ನೀರಲಗಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಸಂಜೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿ ಸುಮಾರು 36 ವರ್ಷದವನಾಗಿದ್ದು, ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟ ಹಾಗೂ ಗಾಯಗೊಂಡ ವ್ಯಕ್ತಿಗಳ ಹೆಸರು, ಊರು ತಿಳಿದುಬಂದಿಲ್ಲ. ಬಜಾಜ್ ಡಿಸ್ಕವರ್ (ಕೆಎ 27 ಎಕ್ಸ್ 9605) ಬೈಕ್‌ನಲ್ಲಿ ಹೋಗುತ್ತಿದ್ದ ಇವರು ಹುಬ್ಬಳ್ಳಿ ಅಥವಾ ಧಾರವಾಡದವರು ಎಂದು ಶಂಕಿಸಲಾಗಿದೆ. ಗುರುತು ಸಿಕ್ಕಲ್ಲಿ ತಡಸ ಪಿಎಸ್‌ಐ ಸುರೇಶ ಸಗರಿ (ಮೊ. 9480804559) ಸಂಪರ್ಕಿಸಬಹುದು. ತಡಸ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement