ಸಿದ್ದು, ಎಚ್ಕೆ ಭಾವಚಿತ್ರವಿದ್ದ ಬ್ಯಾನರ್ಗೆ ಆಕ್ಷೇಪ
ಬ್ಯಾಡಗಿ: ಮತಗಟ್ಟೆ ಆವರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವ ಎಚ್.ಕೆ. ಪಾಟೀಲರ ಭಾವಚಿತ್ರಗಳಿರುವ ಬ್ಯಾನರ್ ತೂಗು ಹಾಕಿದ್ದನ್ನು ಆಕ್ಷೇಪಿಸಿದ ಪ್ರಕರಣ ಹೊರತುಪಡಿಸಿ ತಾಲೂಕಿನಾದ್ಯಂತ ಶಾಂತಿಯುತವಾಗಿ ಶೇ. 100ರಷ್ಟು ಮತದಾನವಾಗಿದೆ.
ಬ್ಯಾಡಗಿ ತಾಪಂ ಆವರಣದ ಸುವರ್ಣಸೌಧದಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಯ ಗೋಡೆ ಮೇಲೆ ಖಾತರಿ ಯೋಜನೆ ಬ್ಯಾನರ್ ಹಾಕಲಾಗಿತ್ತು. ಸಿದ್ಧರಾಮಯ್ಯ ಮತ್ತು ಸಚಿವ ಎಚ್.ಕೆ. ಪಾಟೀಲರ ಭಾವಚಿತ್ರಗಳು ಅದರಲ್ಲಿ ರಾರಾಜಿಸುತ್ತಿದ್ದವು. ಇದನ್ನು ಗಮನಿಸಿದ ಬಿಜೆಪಿ ಮತ್ತು ಕೆಜೆಪಿ ಕಾರ್ಯಕರ್ತರು ಬ್ಯಾನರ್ ತೆಗೆಯುವಂತೆ ಆಗ್ರಹಿಸಿದರು. ಇದರಿಂದ ಮತಗಟ್ಟೆ ಆವರಣದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕೆಜೆಪಿ ತಾಲೂಕು ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಮುರಿಗೆಪ್ಪ ಶೆಟ್ಟರ ಮಾತನಾಡಿ, ಚುನಾವಣೆ ಆಯೋಗದ ಸೂಚನೆಯಂತೆ ವಿಧಾನ ಪರಿಷತ್ ಉಪಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರುವ ಅಥವಾ ಆಮಿಷ ಒಡ್ಡುವಂತೆ ವ್ಯಕ್ತಿಗಳ ಭಾವಚಿತ್ರ ಬಳಸಬಾರದೆಂಬ ನಿಯಮವಿದೆ. ಆದರೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಿದ್ದರಾಮಯ್ಯ ಹಾಗೂ ಎಚ್.ಕೆ. ಪಾಟೀಲರ ಭಾವಚಿತ್ರಗಳ ಬ್ಯಾನರ್ ನೇತಾಡುತ್ತಿದೆ. ಇದು ನೀತಿ ಸಂಹಿತೆಯ ಉಲ್ಲಂಘನೆ. ಕೂಡಲೇ ಬ್ಯಾನರ್ ತೆಗೆಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಆಗಮಿಸಿದ ಚುನಾವಣಾಧಿಕಾರಿಗಳು ಬ್ಯಾನರ್ ತೆಗೆಸಿ ವಾತಾವರಣ ತಿಳಿಗೊಳಿಸಿದರು.
ಶೇ. 100ರಷ್ಟು ಮತದಾನ
ತಾಲೂಕಿನಲ್ಲಿ 301 ಮತಗಳಿದ್ದು, ಶೇ. 100 ಮತದಾನವಾಗಿದೆ. ಬೆಳಗ್ಗೆ ನೀರಸವಾಗಿದ್ದ ಮತದಾನ, ಮಧ್ಯಾಹ್ನ ಚುರುಕಾಯಿತು. ಕೆಲವೆಡೆ ಸದಸ್ಯರು ಗುಂಪಾಗಿ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿದರು. ಶಾಸಕ ಬಸವರಾಜ ಶಿವಣ್ಣನವರ ಬ್ಯಾಡಗಿ ಪಟ್ಟಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.