ಅಪವಿತ್ರ ಮೈತ್ರಿಗೆ ತಕ್ಕ ಉತ್ತರ
ಬ್ಯಾಡಗಿ: ಕಾಂಗ್ರೆಸ್ ಗೆಲ್ಲಿಸುವ ಮೂಲಕ ಅಪವಿತ್ರ ಮೈತ್ರಿ ಮಾಡಿಕೊಂಡ ಜೆಡಿಎಸ್‌ಗೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ತಾಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಹುಸೇನಸಾಬ್ ದೊಡ್ಮನಿ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಹಾಗೂ ಡಿ.ಕೆ. ಸುರೇಶ್ ವಿಜಯದ ಹಿನ್ನೆಲೆಯಲ್ಲಿ ಪಟ್ಟಣದ ಹಳೇ ಪುರಸಭೆ ಎದುರಿಗೆ ಕಾಂಗ್ರೆಸ್ ಕಾರ್ಯಕರ್ತರು ಆಯೋಜಿಸಿದ್ದ ವಿಜಯೋತ್ಸವ ಉದ್ದೇಶಿಸಿ ಅವರು ಮಾತನಾಡಿದರು. ಶತಾಯಗತಾಯ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ ಕೋಮುವಾದಿ ಬಿಜೆಪಿ ಜತೆ ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿತ್ತು. ಪ್ರಬುದ್ಧ ಮತದಾರರು ಕಾಂಗ್ರೆಸ್ ಗೆಲ್ಲಿಸುವ ಮೂಲಕ ಉತ್ತರಿಸಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಯೋಜನೆಗಳಾದ ರು. 1ಕ್ಕೆ ಕೆಜಿ ಅಕ್ಕಿ, ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಹಾಗೂ ಹಿಂದುಳಿದ ಮತ್ತು ಪ.ಜಾತಿ ಜನಾಂಗದ ಜನರ ಸಾಲ ಮನ್ನಾ ಮುಂತಾದ ಕಾರ್ಯಕ್ರಮಗಳೇ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಜಯ ತಂದುಕೊಟ್ಟಿವೆ ಎಂದರು.
ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಭರ್ಜರಿ ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಾರ್ಯದರ್ಶಿ ರಮೇಶ ಸುತ್ತಕೋಟಿ, ರುದ್ರಪ್ಪ ಹೊಂಕಣ. ದುರ್ಗೇಶ ಗೋಣೆಮ್ಮನವರ, ನಜೀರ ಅಹ್ಮದ್‌ಶೇಖ, ಮಂಜುನಾಥ ಬೋವಿ, ಬಣಕಾರ, ಮಜೀದ್‌ಸಾಬ ಮುಲ್ಲಾ, ಹುಚ್ಚನಗೌಡ ಲಿಂಗನಗೌಡ್ರ, ಚನ್ನಗೌಡ್ರ, ಕೇಶವ ಕಿತ್ತೂರು, ಪರಮೇಶ ಚಿಕ್ಕಳ್ಳಿ ಉಪಸ್ಥಿತರಿದ್ದರು.