ಕೈ ಕಾರ್ಯಕರ್ತರ ಸಂಭ್ರಮ
ಹಾನಗಲ್ಲ: ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆಯ ಫಲಿತಾಂಶದಿಂದ ಸಂತಸಗೊಂಡ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಇಲ್ಲಿನ ಗಾಂಧಿ ವೃತ್ತದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿಷ್ಣುಕಾಂತ ಜಾಧವ, ಎರಡು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ರಾಜ್ಯ ಸರ್ಕಾರದ ಆಡಳಿತಕ್ಕೆ ನೀಡಿರುವ ಮನ್ನಣೆಯಾಗಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ದಕ್ಷ, ಪಾರದರ್ಶಕ ಆಡಳಿತದ ಮುಂದೆ ವಿರೋಧಿ ಬಣಗಳ ಅಪವಿತ್ರ ಮೈತ್ರಿಯ ಆಟ ನಡೆಯಲಿಲ್ಲ ಎಂದು ಅಭಿಪ್ರಾಯಪಟ್ಟರು.
ಜೆಡಿಎಸ್ ಭದ್ರಕೋಟೆಯನ್ನೇ ಛಿದ್ರಗೊಳಿಸಿರುವ ಕಾಂಗ್ರೆಸ್ ರಾಜ್ಯದ ಮತದಾರರ ನಂಬಿಕೆ, ವಿಶ್ವಾಸ ಉಳಿಸಿಕೊಂಡಿದೆ. ಕಾಂಗ್ರೆಸ್‌ನಿಂದ ಸುಭದ್ರ ಸರ್ಕಾರ ಸಾಧ್ಯ ಎಂಬ ಸಂದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡುತ್ತಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಅಭಿಯಾನ ಮುಂದುವರೆಯಲಿದೆ ಎಂದು ಮುಖಂಡ ದಾನಪ್ಪ ಗಂಟೇರ ಹೇಳಿದರು.
ಎಂ.ಎಂ. ಮುಲ್ಲಾ, ಸುಭಾಸ ತಳವಾರ, ಮಖಬೂಲ ಸರ್ವಿಕೇರಿ, ರಮೇಶ ದಾಸಯ್ಯರ, ಇಸಾಕ್ ರಿಕಾಟಿ, ರಾಘವೇಂದ್ರ ಕಲ್ಲಕ್ಕಲ, ಮಾರ್ಕಂಡೆಪ್ಪ ಮಣ್ಣಮ್ಮನವರ, ಚಂದ್ರಪ್ಪ ಉದಣ್ಣನವರ, ನಾಗರಾಜ ಬಾರ್ಕಿ, ಬಡೆಮುನ್ನಾ, ನಾಗರಾಜ ಹುಡೇದವರ, ಪ್ರಶಾಂತ ಗೊಂದಿ, ಶಂಭು ಕೊಂಡೋಜಿ, ಖ್ವಾಜಾ ಮೈನುದ್ದೀನ ನಾಯಕ, ಈರಣ್ಣ ನಾಗೋಜಿ, ಪ್ರಕಾಶ ಚೊಳ್ಳಪ್ಪನವರ, ಖಾಸಿಮಸಾಬ್ ಅಗಸರ, ಆರ್.ಎಸ್. ಪಾಟೀಲ, ವೀರೇಶ ಬೈಲವಾಳ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.