ಅರ್ಪಣಾ ಮನೋಭಾವ ಇರಲಿ: ಮಾಳಗೇರ
ಹಿರೇಕೆರೂರು: ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಅರಿತು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸಿದಾಗ ಯೋಜನೆಗಳು ನಿಗದಿತ ಗುರಿ ತಲುಪಲು ಸಾಧ್ಯ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎನ್. ಮಾಳಗೇರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ನಡೆದ ಮೂಲ ಸಾಕ್ಷರತಾ ಪರೀಕ್ಷೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿದ ಅವರು, ಮೌಲ್ಯಮಾಪನದ ಉದೇಶ ನವಸಾಕ್ಷರರ ಕಲಿಕೆಯ ಪ್ರಮಾಣ ಅಳೆಯುವುದಾಗಿದೆ. ಅನಕ್ಷರತೆ ಒಂದು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದ್ದು, ಸರ್ಕಾರ ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಅನೇಕ ಕಾರ್ಯಕ್ರಮ ಕೈಗೊಂಡಿದೆ. ಸಾಕ್ಷರ ಭಾರತ ಯೋಜನೆಗಳು ಸಫಲವಾಗಬೇಕು ಎಂದರು.
ಮೌಲ್ಯಮಾಪನದ ಕರ್ತವ್ಯ ಮತ್ತು ಜವಾಬ್ದಾರಿ ಕುರಿತು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದ ಪರೀಕ್ಷಾ ಸಿಬ್ಬಂದಿಗೆ ತರಬೇತಿ ನಿಡಲಾಯಿತು. ಮುಖ್ಯಶಿಕ್ಷಕರಾದ ಜಿ.ಎಂ. ಎಣ್ಣೆರ, ಶಿವಕ್ಕನವರ, ಸಂಪನ್ಮೂಲ ಶಿಕ್ಷಕರು, ಸಹಶಿಕ್ಷಕರು ಹಾಗೂ ಪ್ರೇರಕರು ಉಪಸ್ಥಿತರಿದ್ದರು. ತಾಲೂಕು ಸಂಯೋಜಕ ಜೆ.ಎಸ್. ಬಂಡೆರ, ಜಿ.ಬಿ. ಮಾದರ್ ನಿರ್ವಹಿಸಿದರು.