ಬೆಳೆವಿಮೆ ಅವಧಿ ವಿಸ್ತರಿಸಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಆ. 25
ಬೆಳೆಸಾಲ ಪಡೆದು ಬೆಳೆವಿಮೆ ಕಂತು ತುಂಬುವ ಅವಧಿಯನ್ನು ಈ ಮೊದಲಿನಂತೆ ಸೆ. 30ರ ವರೆಗೆ ವಿಸ್ತರಿಸಿ ರೈತರಿಗೆ ಅನುಕೂಲ ಮಾಡಿ ಕೊಡಬೇಕು, ರಾಜ್ಯ ಸರ್ಕಾರ ಕೂಡಲೇ ತನ್ನ ಪಾಲಿನ ಹಣವನ್ನು ವಿಮಾ ಕಂಪನಿಗೆ ತುಂಬಿ ರೈತರಿಗೆ ಬೆಳೆವಿಮೆ ಪರಿಹಾರ ಬಿಡುಗಡೆ ಮಾಡುವಂತಾಗಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಮಾಜಿ ಸಚಿವ ಸಿ.ಎಂ. ಉದಾಸಿ ಒತ್ತಾಯಿಸಿದ್ದಾರೆ.
ಹಾನಗಲ್ಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳೆವಿಮೆ ತುಂಬಲು ರೈತರಿಗೆ ಬೇರೆ ಬೇರೆ ಅವಧಿ ಇಡಲಾಗಿತ್ತು. ಸಾಲ ಪಡೆಯದೆ ಬೆಳೆ ವಿಮೆ ತುಂಬುವವರಿಗೆ ಜುಲೈ ಕೊನೆಯ ವರೆಗೆ ಹಾಗೂ ಬ್ಯಾಂಕಿನ ಮೂಲಕ ಬೆಳೆ ಸಾಲ ಪಡೆದು ಬೆಳೆ ವಿಮೆ ಕಂತು ತುಂಬುವವರಿಗೆ ಸೆಪ್ಟೆಂಬರ್ ಅಂತ್ಯದ ವರೆಗೆ ಅವಧಿ ನೀಡಲಾಗುತ್ತಿತ್ತು.
ಆದರೆ ಪ್ರಸ್ತುತ ವರ್ಷ ಬೆಳೆಸಾಲ ಪಡೆದು ವಿಮೆ ಕಂತು ತುಂಬುವ ಅವಧಿಯನ್ನು ಆಗಸ್ಟ್ ಅಂತ್ಯಕ್ಕೇ ನಿಗದಿಪಡಿಸಿರುವುದು ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.
ಬೆಳೆ ಸಾಲದ ಮೂಲಕ ಬೆಳೆ ವಿಮೆ ಕಟ್ಟುವವರು ಈಗ ಈ ಯೋಜನೆಯಿಂದ ಹೊರಗುಳಿಯುವಂತಾಗಿದೆ. ಬ್ಯಾಂಕುಗಳಲ್ಲಿ ಸಕಾಲಿಕವಾಗಿ ರೈತರಿಗೆ ಬೆಳೆಸಾಲ ಮಂಜೂರಾಗದ ಕಾರಣ ಬಹುಸಂಖ್ಯಾತ ರೈತರು ಬೆಳೆವಿಮೆಯಿಂದಲೇ ವಂಚಿತವಾಗುವ ಸಂದರ್ಭಗಳಿವೆ ಎಂದರು.
ಸರ್ಕಾರ ಕೂಡಲೇ ವಿಮಾ ಕಂಪನಿಯೊಂದಿಗೆ ಚರ್ಚಿಸಿ ವಿಮೆ ಕಂತು ತುಂಬುವ ಅವಧಿಯನ್ನು ಮೊದಲಿನಂತೆ ವಿಸ್ತರಿಸುವ ವ್ಯವಸ್ಥೆ ಮಾಡಬೇಕು. ರೈತರಿಗೆ ವಾಸ್ತವವಾಗಿ ಆಗುವ ಸಮಸ್ಯೆಗಳನ್ನು ಪರಿಗಣಿಸಿ ಕೂಡಲೇ ಸರ್ಕಾರ ವಿಮಾ ಕಂತು ಭರಣ ವಿಷಯದಲ್ಲಿ ರೈತರ ಸಹಾಯಕ್ಕೆ ಬರಬೇಕು ಎಂದು ಉದಾಸಿ ಒತ್ತಾಯಿಸಿದರು.
ಈ ವರೆಗೂ ಕಳೆದ ಕೃಷಿ ಅವಧಿಯ ಬೆಳೆವಿಮೆ ರೈತರಿಗೆ ಬಿಡುಗಡೆಯಾಗಿಲ್ಲ. ರೈತ ಕೃಷಿ ಚಟುವಟಿಕೆಗಾಗಿ ಖಾಸಗಿ ಸಾಲಕ್ಕಾಗಿ ಕೈಯೊಡ್ಡುವ ಸಂದರ್ಭಗಳಿರುವಾಗ ವಿಮಾ ಪರಿಹಾರ ಸಕಾಲಿಕವಾಗಿ ಬಿಡುಗಡೆಯಾಗದೆ ತೊಂದರೆ ಆಗಿದೆ.
ರಾಜ್ಯ ಸರ್ಕಾರ ವಿಮಾ ಕಂಪನಿಗೆ ಪಾವತಿಸಬೇಕಾದ ತನ್ನ ಪಾಲಿನ ರು. 56 ಕೋಟಿ ಹಣವನ್ನು ಇನ್ನೂ ಪಾವತಿಸದಿರುವುದೇ ವಿಮಾ ಪರಿಹಾರ ಬಿಡುಗಡೆಯ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಅದ್ದರಿಂದ ಸರ್ಕಾರ ಕೂಡಲೇ ತನ್ನ ಪಾಲಿನ ಹಣವನ್ನು ಪಾವತಿಸಿ ರೈತರಿಗೆ ಅತಿ ಶೀಘ್ರ ಬೆಳೆವಿಮೆ ಪರಿಹಾರ ದೊರಕುವಂತೆ ಮಾಡಬೇಕು ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ಒತ್ತಾಯಿಸಿದ್ದಾರೆ.