ಭಾವಚಿತ್ರ ಸೆರೆಹಿಡಿವ ಕಾರ್ಯ ಸ್ಥಗಿತ
ಶಿಗ್ಗಾಂವಿ: ತಾಲೂಕಿನ ಬಂಕಾಪುರ ಪುರಸಭೆ ಸಭಾಭವನದಲ್ಲಿ ನಡೆದ ಆಧಾರ್ ಹಾಗೂ ಸ್ಮಾರ್ಟ್ ಕಾರ್ಡ್ನ ಭಾವಚಿತ್ರ ಸೆರೆ ಹಿಡಿಯುವ ಕಾರ್ಯ ಸಾರ್ವಜನಿಕರ ನೂಕು ನುಗ್ಗಲಿನಿಂದಾಗಿ ಶನಿವಾರ ಸ್ಥಗಿತಗೊಂಡಿದೆ.
ಒಂದು ತಿಂಗಳಿಂದ ಪುರಸಭೆ ಸಭಾಭವನದಲ್ಲಿ ಆಧಾರ್ ಹಾಗೂ ಸ್ಮಾರ್ಟ್ ಕಾರ್ಡ್ಗಾಗಿ ಭಾವಚಿತ್ರ ತೆಗೆಯುವ ಪ್ರಕ್ರಿಯೆ ನಡೆದಿತ್ತು. ಶನಿವಾರ ಸುಮಾರು 3-4 ವಾರ್ಡ್ಗಳ ಸಾರ್ವಜನಿಕರು ತಮ್ಮ ಕುಟುಂಬ ಸಮೇತ ಹಠಾತ್ತನೆ ಬಂದು ಫೋಟೋ ತೆಗೆಯಲು ಒತ್ತಾಯಿಸಿದ್ದಾರೆ. ಸರತಿಯಲ್ಲಿ ನಿಂತು ಶಾಂತಿಯುತವಾಗಿ ಬಂದರೆ ಪ್ರತಿಯೊಬ್ಬರ ಫೋಟೋ ತೆಗೆಯುತ್ತೇವೆ. ಅದಕ್ಕಾಗಿ ಸುಮಾರು 4-5 ಕೌಂಟರ್ ತೆರೆಯಲಾಗಿದೆ. ಇಲ್ಲವಾದರೆ ಸಂಪೂರ್ಣ ಕಾರ್ಯ ಸ್ಥಗಿತಗೊಳಿಸುವುದಾಗಿ ಅಧಿಕಾರಿಗಳು ಹೇಳಿದರು. ಆದರೂ ಕೇಳದ ಸಾರ್ವಜನಿಕರು ಕಾರ್ಯನಿರತ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅದರಿಂದ ಭಯಭೀತರಾದ ಸಿಬ್ಬಂದಿ ತಮ್ಮ ಕಂಪ್ಯೂಟರ್ಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಭಾವಚಿತ್ರ ತೆಗೆಯುವ ಕಾರ್ಯ ಸ್ಥಗಿತಗೊಂಡಿದೆ. ಪಟ್ಟಣದಲ್ಲಿ ಸುಮಾರು 22 ಸಾವಿರ ಜನರ ಫೋಟೋ ತೆಗೆಯಬೇಕಿದೆ. ಈ ಪೈಕಿ, 15 ಸಾವಿರ ಜನರ ಫೋಟೋ ತೆಗೆಯುವ ಕಾರ್ಯ ಪೂರ್ಣಗೊಂಡಿದೆ. ತಕ್ಷಣ ಅಧಿಕಾರಿಗಳು ಹೆಚ್ಚಿನ ಕೌಂಟರ್ ತೆರೆಯುವ ಮೂಲಕ ಉಳಿದ ಕುಟುಂಬಗಳ ಭಾವಚಿತ್ರ ತೆಗೆಯುವ ಕಾರ್ಯ ಆರಂಭಿಸಬೇಕು ಎಂದು ಇಲ್ಲಿನ ಕೆಲವು ಮುಖಂಡರು ಆಗ್ರಹಿಸಿದ್ದಾರೆ.