ವಿವೇಕ ಬಳಗದ ಸತ್ಸಂಗ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 25
ನಗರದ ವಿವೇಕ ಜಾಗೃತ ಬಳಗದ ವತಿಯಿಂದ ಸುನೀತಾ ಚಂದ್ರಯ್ಯ ಅವರ ನಿವಾಸದಲ್ಲಿ ಗುರುದೇವಿ ದೊಡ್ಡಮನಿ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಸತ್ಸಂಗ ಕಾರ್ಯಕ್ರಮ ಜರುಗಿತು.
ಮಹಿಳೆಯ ಆರೋಗ್ಯದ ಕುರಿತು ಡಾ ಲಾವಣ್ಯ ಸಂತಣ್ಣನವರ ಮಾತನಾಡಿ, ಮಹಿಳೆಯರು ಕುಟುಂಬದ ಎಲ್ಲ ಸದಸ್ಯರ ಆರೋಗ್ಯದ ಬಗ್ಗೆ ಗಮನ ನೀಡಿ ತಮ್ಮ ಆರೋಗ್ಯವನ್ನೇ ಮರೆತು ಬಿಡುತ್ತಾರೆ. ಮಹಿಳೆಯರು ತಮ್ಮ ಆರೋಗ್ಯವನ್ನೂ ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಜ್ಜನರ ಸಂಘ ಮಾಡಿ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದ್ಗ್ರಂಥ ಪಠಿಸಬೇಕು. ಇದರಿಂದ ಮಾನಸಿಕ ನೆಮ್ಮದಿಯನ್ನು ಪಡೆದುಕೊಳ್ಳಬಹುದು ಎಂದರು.
ಡಿವೈನ್ ಪಾರ್ಕ್‌ನ ಹಿರಿಯ ಪದಾಧಿಕಾರಿ ಮೃತ್ಯುಂಜಯ ಮುದ್ದಿ, ತಾಯಿ ಸಂಸ್ಕಾರವಂತರಾದರೆ ಮಕ್ಕಳು ಸಂಸ್ಕಾರವಂತರಾಗಿರುತ್ತಾರೆ. ಹೀಗಾಗಿ ನಾಯಿ ನೋಡಿ ಕುನ್ನಿ ತರಬೇಕು, ತಾಯಿ ನೋಡಿ ಕನ್ಯೆ ತರಬೇಕು ಎಂಬ ಮಾತು ಪ್ರಚಲಿತದಲ್ಲಿದೆ. ಎಲ್ಲರಲ್ಲಿ ಸಂಸ್ಕಾರ ಹೆಚ್ಚಾಗಬೇಕಾದರೆ ಸತ್ಸಂಗದಂಥ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳಬೇಕು ಎಂದರು. ಉಮೇಶ ಹಿರೇಮಠ, ಅನಿಲ್ ಸಂತಣ್ಣನವರ ಹಾಗೂ ವಿವೇಕ ಜಾಗೃತ ಬಳಗದ ಸದಸ್ಯರು ಸತ್ಸಂಗದಲ್ಲಿ ಪಾಲ್ಗೊಂಡಿದ್ದರು. ಸುನೀತಾ ಚಂದ್ರಯ್ಯ ನಿರ್ವಹಿಸಿದರು.