ಸುದ್ದಿ ಸಂಕ್ಷೇಪ
ಸರ್ಕಾರಕ್ಕೆ 100: ಇಂದು ಕಿರುಹೊತ್ತಿಗೆ ಬಿಡುಗಡೆ
ಹಾವೇರಿ: ನೂತನ ಸರ್ಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ 100 ದಿನಗಳಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರಗಳನ್ನು ಒಳಗೊಂಡಿರುವ 'ನೂರು ದಿನ-ನೂರಾರು ನಿರ್ಣಯ' ಎನ್ನುವ ಕಿರು-ಹೊತ್ತಿಗೆ ಬಿಡುಗಡೆ ಕಾರ್ಯಕ್ರಮ ಆ. 26ರಂದು ಬೆಳಗ್ಗೆ 10.30ಕ್ಕೆ ನಗರದ ವಾರ್ತಾ ಭವನದಲ್ಲಿ ಜರುಗಲಿದೆ. ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಕಿರು ಹೊತ್ತಿಗೆ ಬಿಡುಗಡೆ ಮಾಡುವರು. ಜಿಲ್ಲೆಯ ಎಲ್ಲ ತಾಲೂಕುಗಳ ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು. ಈ ಪುಸ್ತಕವನ್ನು ವಾರ್ತಾ ಇಲಾಖೆ ಹೊರತಂದಿದ್ದು, ಸರ್ಕಾರದ ಮಹತ್ವದ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶ ಹೊಂದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಪ್ರವಾಸ
ಹಾವೇರಿ: ಸಣ್ಣ ಕೈಗಾರಿಕೆ, ಮುಜರಾಯಿ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಆ. 26ರಂದು ಬೆಳಗಾವಿಯಿಂದ ಹೊರಟು ಬೆಳಗ್ಗೆ 10.30ಕ್ಕೆ ಹಾವೇರಿಗೆ ಆಗಮಿಸುವರು. ರಾಜ್ಯ ಸರ್ಕಾರ 100 ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಕೈಗೊಂಡಿರುವ ಮಹತ್ವದ ನಿರ್ಧಾರಗಳನ್ನು ಒಳಗೊಂಡಿರುವ 'ನೂರು ದಿನ-ನೂರಾರು ನಿರ್ಣಯ' ಎನ್ನುವ ಕಿರು ಹೊತ್ತಿಗೆಯನ್ನು ನಗರದ ವಾರ್ತಾ ಭವನದಲ್ಲಿ ಬಿಡುಗಡೆ ಮಾಡಿ, ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವರು. ಬಳಿಕ ಹಾವೇರಿಯಿಂದ ಧಾರವಾಡಕ್ಕೆ ತೆರಳುವರು.
ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ
ಹಿರೇಕೆರೂರು: ಪಶು ಸಂಗೋಪನಾ ಇಲಾಖೆ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಚಿಕ್ಕಬೂದಿಹಾಳ ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಮುಂಜಾಗ್ರತಾ ಲಸಿಕೆ ನೀಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೈನುಗಾರಿಕೆ ಮೇಲ್ವಿಚಾರಕ ಶಿವಾನಂದ ಎಂ.ವೈ. ಮಾತನಾಡಿ, ಯೋಜನೆಯ ಸ್ವ ಸಹಾಯ ಸಂಘದ ಸದಸ್ಯರಿಗೆ ಸ್ವ-ಉದ್ಯೋಗಕ್ಕೆ ಬೇಕಾದ ಮಾಹಿತಿ, ತರಬೇತಿ ಶಿಬಿರ ಹಮ್ಮಿಕೊಳ್ಳುತ್ತಿದ್ದು, ಅದರಲ್ಲಿ ಹೈನುಗಾರಿಕೆ ಪ್ರಮುಖವಾಗಿದೆ. ಬೆಲೆ ಏರಿಕೆ ದಿನಗಳಲ್ಲಿ ಹೈನುಗಾರಿಕೆಯನ್ನು ಲಾಭದಾಯಕವಾಗಿ ನಡೆಸಬೇಕಾದರೆ ಸ್ಥಳೀಯ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಯೋಜನೆಯ ಮೇಲ್ವಿಚಾರಕ ಅಣ್ಣಪ್ಪ ಆರ್. ಮಾತನಾಡಿ, ಪ್ರತಿಯೊಂದು ತರಬೇತಿ ಕಾರ್ಯಕ್ರಮ ಸ್ವ ಸಹಾಯ ಸಂಘದ ಸದಸ್ಯರಿಗಾಗಿ ಇದ್ದು, ಇದರಿಂದ ಸಿಗುವ ಮಾಹಿತಿ ಮೂಲಕ ಕುಟುಂಬವನ್ನು ಆರ್ಥಿಕವಾಗಿ ಸದೃಢಗೊಳಿಸಬೇಕು ಎಂದರು. ಕೋಡ ಗ್ರಾಮದ ಜಾನುವಾರು ಅಧಿಕಾರಿ ಆರ್.ಎಸ್. ಬೇವಿನಹಳ್ಳಿ, ಹಿರಿಯ ಪಶು ಪರೀಕ್ಷಕ ಚೇತನ ಸಿಬ್ರಿಕೇರಿ 320 ಜಾನುವಾರುಗಳಿಗೆ ಲಸಿಕೆ ನೀಡಿದರು. ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಎಸ್. ಸಣ್ಣಮನಿ, ಮಾದೇವಕ್ಕ, ಗೀತಾ, ಅನಿತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.