ಸ್ವಾತಂತ್ರ್ಯ ಸೇನಾನಿಗಳ ಚಿತ್ರ ಪ್ರದರ್ಶನ
ಕನ್ನಡಪ್ರಭ ವಾರ್ತೆ, ಹಾವೇರಿ, ಆ. 25
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೇಶಪ್ರೇಮಿಗಳ ಚಿತ್ರ ಪ್ರದರ್ಶನ ಇಲ್ಲಿಯ ಗೆಳೆಯರ ಬಳಗದ ಶ್ರೀಮತಿ ಮಣಿಬಾಯಿ ಲೋಡಾಯಾ ಸಭಾಂಗಣದಲ್ಲಿ ಜರುಗಿತು.
ನಗರದ ಗೆಳೆಯರ ಬಳಗ ಜ್ಞಾನ ಗಂಗಾ ಶಿಕ್ಷಣ ಸಮಿತಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿ ಸಂಘದ ರಾಷ್ಟ್ರಗೌರವ ಸಂರಕ್ಷಣಾ ಪರಿಷತ್ತು ಈ ದೇಶ ಪ್ರೇಮಿಗಳ ಚಿತ್ರ ಪ್ರದರ್ಶನವನ್ನು ಆಯೋಜಿಸಿದ್ದವು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೇಖಕ ಪ್ರೊ ಕೊರಗಲ್ಲ ವಿರೂಪಾಕ್ಷಪ್ಪ ಮಾತನಾಡಿ, ದೇಶಕ್ಕಾಗಿ ತಮ್ಮ ತನು-ಮನವನ್ನು ಅರ್ಪಿಸಿದವರ ಬಗ್ಗೆ ಗೌರವ ಸಲ್ಲಿಸುವುದರ ಜತೆಗೆ ಅನಾಮಿಕರಾಗಿ ಮಡಿದವರ ಬಗ್ಗೆಯೂ ನಮ್ಮಲ್ಲಿ ಗೌರವಗಳು ಇರಬೇಕೆಂದರು.
ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ತಿನ ಪಿ.ಎನ್. ರಾಮಕೃಷ್ಣ, ರಾಜ್ಯದ ಬೇರೆ-ಬೇರೆ ಜಿಲ್ಲಾ ಕೇಂದ್ರಗಳಲ್ಲಿ ಸ್ವಾತಂತ್ರ್ಯ ವೀರರ ಚಿತ್ರ ಪ್ರದರ್ಶನವನ್ನು ಆಯೋಜಿಸುವುದರ ಮೂಲಕ ಹೊಸ ಪೀಳಿಗೆಯಲ್ಲಿ ದೇಶ ಪ್ರೇಮ ಹುಟ್ಟಿಸುವುದೇ ಇದರ ಉದ್ದೇಶ ಎಂದರು.
ವೇದಿಕೆಯಲ್ಲಿ ಗೆಳೆಯರ ಬಳಗದ ಹಿರಿಯ ಸದಸ್ಯರಾದ ಸಿ.ಎಸ್. ಬಂಕಾಪುರ, ಸತೀಶ ಕುಲಕರ್ಣಿ ಹಾಗೂ ಪ್ರಧಾನ ಗುರುಗಳಾದ ಸಿ.ಸಿ. ಕೋಷ್ಠಿ ಉಪಸ್ಥಿತರಿದ್ದರು.
ಶಿಕ್ಷಕಿ ಶೈಲಾ ಕುಲಕರ್ಣಿ ನಿರೂಪಿಸಿದರು. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು. ಮಕ್ಕಳು ಆಸಕ್ತಿಯಿಂದ ಚಿತ್ರಗಳ ಬಗ್ಗೆ ವಿವರ ಬರೆದುಕೊಳ್ಳುತ್ತಿರುವ ದೃಶ್ಯ ಗಮನ ಸೆಳೆಯಿತು.