ಛಬ್ಬಿ ಗೆಲವು: ಜಿಲ್ಲೆಯಲ್ಲಿ ವಿಜಯೋತ್ಸವ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಆ. 26
ಆ. 22ರಂದು ನಡೆದ ಧಾರವಾಡ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಗೆಲವು ಸಾಧಿಸಿರುವ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ಪಂಚಾಯಿತಿ ಕಾಂಗ್ರೆಸ್ ಸದಸ್ಯರು, ಪೋಸ್ಟ್ ಸರ್ಕಲ್ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ನಾಗರಾಜ ಛಬ್ಬಿ ಗೆಲವು ಸಾಧಿಸಿದ ಸುದ್ದಿ ತಿಳಿದ ತಕ್ಷಣ, ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿ ಸೇರಿದ್ದ ತಾಪಂ, ನಗರಸಭೆ ಹಾಗೂ ಗ್ರಾಪಂ ಸದಸ್ಯರು, ತಾಪಂ ಆವರಣದಿಂದ ಪೋಸ್ಟ್ ಸರ್ಕಲ್ ವರೆಗೆ ಜಯಘೋಷಗಳನ್ನು ಕೂಗುತ್ತ, ಮೇರವಣಿಗೆ ಮೂಲಕ ಆಗಮಿಸಿ ಪೊಸ್ಟ್ ಸರ್ಕಲ್ನಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ವಿಜಯೋತ್ಸವದ ನೇತೃತ್ವ ವಹಿಸಿದ್ದ ತಾಪಂ ಉಪಾಧ್ಯಕ್ಷ ಗಣೇಶ ಬಿಲ್ಲಾಳ ಮಾತನಾಡಿ, 10 ವರ್ಷಗಳಿಂದ ಕೇಂದ್ರದಲ್ಲಿ ಹಾಗೂ 100 ದಿನಗಳ ಹಿಂದೆ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್, ರಾಜ್ಯದ ಸಮಸ್ತ ಜನತೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ವಸತಿರಹಿತ ಬಡವರಿಗೆ ಇಂದಿರಾ ಆವಾಸ್ ಮನೆ, ರಾಷ್ಟ್ರೀಯ ಕೌಟುಂಬಿಕ ಯೋಜನೆ ಹಾಗೂ ಶೈಕ್ಷಣಿಕಾಭಿವೃದ್ಧಿಗೆ ಸರ್ವ ಶಿಕ್ಷಣ ಅಭಿಯಾನ ಮತ್ತು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದರು.
ರಾಜ್ಯದಲ್ಲಿ 100 ದಿನಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಜನಪರ ಯೋಜನೆಗಳಿಗೆ ಮನಸೋತಿರುವ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಕಾಂಗ್ರೆಸ್ ಅಭ್ಯರ್ಥಿ ನಾಗರಾಜ ಛಬ್ಬಿ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಆಯ್ಕೆ ಮಾಡಿದ್ದಾರೆ ಎಂದು ಬಿಲ್ಲಾಳ ಸಂತಸ ವ್ಯಕ್ತಪಡಿಸಿದರು.
ಕೋಮುವಾದಿ ಬಿಜೆಪಿ ಮತ್ತು ಕುಟುಂಬ ರಾಜಕೀಯ ಪಕ್ಷವಾದ ಕೆಜೆಪಿ ರಾಜ್ಯದ ಅಭಿವೃದ್ಧಿಗೆ ಮಾರಕವೆಂದು ಅರಿತ ಮತದಾರರು, ದೇಶದ ಹಾಗೂ ರಾಜ್ಯದ ಸಮಸ್ತ ಜನರಿಗೆ ಜಾತಿ ಭೇದ ಮರೆತು ಶ್ರಮಿಸುವ ಪಕ್ಷವಾದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿದ್ದಾರೆ ಎಂದು ಹೇಳಿದರು.
ತಾಪಂ ಸದಸ್ಯ ಬಸನಗೌಡ ಪಾಟೀಲ್, ನಗರಸಭಾ ಸದಸ್ಯ ಶಶಿಧರ ಬಸೆನಾಯ್ಕರ್, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರು, ಕಾಂಗ್ರೆಸ್ ತಾಲೂಕಾಧ್ಯಕ್ಷ ಕೃಷ್ಣಪ್ಪ ಕಂಬಳಿ, ತಾಪಂ ಕಾಂಗ್ರೆಸ್ ಸದಸ್ಯರಾದ ಹಾಲಪ್ಪ ಲಮಾಣಿ, ಸೋಮಪ್ಪ ಲಮಾಣಿ, ಮುಖಂಡರಾದ ಜಿ.ಬಿ. ಸೀತಾರಾಮ ರೆಡ್ಡಿ, ಮೇಡ್ಲೆರಿ ಗ್ರಾಪಂ ಮಾಜಿ ಅಧ್ಯಕ್ಷ ದಿಳ್ಳೆಪ್ಪ ಅಣ್ಣೇರ, ಹನುಮಾಪು ಗ್ರಾಪಂ ಮಾಜಿ ಅಧ್ಯಕ್ಷ ಇಕ್ಬಾಲ್ ಸಾಬ್ ರಾಣಿಬೆನ್ನೂರು, ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ ಪೊಲೀಸ್ ಗೌಡ್ರ, ತಾಪಂ ಮಾಜಿ ಅಧ್ಯಕ್ಷ ಬಸವರಾಜಪ್ಪ ಸವಣೂರು, ಯಲ್ಲಪ್ಪ ರಡ್ಡೇರ, ಯುವ ಮುಖಂಡ ತಿಮ್ಮನಗೌಡ ಸಣ್ಣಗೌಡ್ರ ಮುಂತಾದವರು ಮಾತನಾಡಿದರು.