ತಿಳಿವಳಿಕೆಯಿಂದ ಕಳ್ಳಭಟ್ಟಿ ನಿಯಂತ್ರಣ: ಅಗಡಿ
ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಆ. 26
ಹಿಂದೆ 6 ಜಿಲ್ಲೆಗಳ 371 ಗ್ರಾಮಗಳಲ್ಲಿ ಕಳ್ಳಭಟ್ಟಿ ನಡೆಯುತ್ತಿತ್ತು. ಈಗ ಶೇ. 90ರಷ್ಟು ಕಡಿಮೆಯಾಗಿದೆ. ಇನ್ನು 27 ಗ್ರಾಮಗಳಲ್ಲಿ ಸ್ವಲ್ಪಮಟ್ಟಿಗೆ ಉಳಿದಿದೆ. ನಾವು ಜನರಿಗೆ ತಿಳಿವಳಿಕೆ ನೀಡುವ ಮಖಾಂತರ ಕಡಿಮೆಯಾಗಿದೆ ಎಂದು ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ಡಿವೈಎಸ್ಪಿ ಎಸ್.ಎಂ. ಅಗಡಿ ಹೇಳಿದರು.
ತಾಲೂಕಿನ ಶಿವಪುರ ತಾಂಡಾದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದ ಜನಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದರು.
ಕಳ್ಳಭಟ್ಟಿ ಅಕ್ರಮ ಸಾರಾಯಿಯನ್ನು ಗ್ರಾಮೀಣ ನಾಗರಿಕ ಸಭೆ ನಡೆಸುವ ಮುಖಾಂತರ ಜನರಲ್ಲಿ ತಿಳಿವಳಿಕೆ ಮೂಡಿಸಿ ಯಾರನ್ನು ಶಿಕ್ಷಿಸದೆ ಸಂಪೂರ್ಣ ನಿರ್ಮೂಲನೆ ಮಾಡಬೇಕೆಂಬ ಉದ್ದೇಶವಾಗಿದೆ. ಜನರ ಸಮಸ್ಯೆ ತಿಳಿಯಬೇಕು, ಜನಸ್ನೇಹಿಯಾಗಬೇಕು ಎಂಬ ಉದ್ದೇಶದಿಂದ ಸರ್ಕಾರದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಳ್ಳಭಟ್ಟಿ ಸಾರಾಯಿಯಲ್ಲಿ ಉಪಯೋಗಿಸುವ ಕೆಮಿಕಲ್ಸ್ಗಳು ಪ್ರಾಣಾಪಾಯ ಒಡ್ಡಿ ಜನರ ಬದುಕನ್ನೇ ನಾಶ ಮಾಡುತ್ತವೆ. ಅದಕ್ಕೆ ಬಳಸುವ ಬ್ಯಾಟರಿ ಶೆಲ್ಗಳು ಹಾಗೂ ನವಸಾಗರ ಇನ್ನು ಮುಂತಾದ ಕೆಮಿಕಲ್ಗಳಿಂದ ಕರಳು ಹುಣ್ಣು(ಆಲ್ಸರ್) ಕಾಮಾಲೆ ರೋಗ ಹಾಗೂ ಲಾಡಿಹುಳು ಆಗುವ ಸಂಭವ ಹೆಚ್ಚಾಗಿರುತ್ತದೆ. ಕಳ್ಳಭಟ್ಟಿ ಮಾಡುತ್ತಿದ್ದವರಿಗೆ ಅದನ್ನು ಬಿಡಿಸಿ ಬೇರೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಬ್ಯಾಂಕ್ಗಳಲ್ಲಿ ಸಾಲ ಕೊಡಿಸುವ ಮುಖಾಂತರ ಅದು ನಿಯಂತ್ರಣ ಕಂಡಿದೆ ಎಂದರು.
ಉಪನ್ಯಾಸಕರಾಗಿ ಆಗಮಿಸಿದ್ದ ಶಿಗ್ಗಾಂವಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಟಿ. ಲಮಾಣಿ ಮಾತನಾಡಿ, ತಮ್ಮ ಉಪನ್ಯಾಸದಲ್ಲಿ ಸೇವಾಲಾಲ್ ಸಂಸ್ಕೃತಿ 6 ಶತಮಾನಗಳ ಇತಿಹಾಸ ಹೊಂದಿದೆ. ನಮ್ಮ ಜನಾಂಗ ಕುಡಿಯಬಾರದು. ಸೇವಾಲಾಲ್ ತತ್ವದಲ್ಲಿ ತಾವೆಲ್ಲ ಕುಡಿಯುವುದನ್ನು ಬಿಡಬೇಕು, ಮೂಢನಂಬಿಕೆ ಬಿಟ್ಟು ನಾಗರಿಕತೆಗೆ ಬನ್ನಿ. ಅನಿಷ್ಟ ಕಳ್ಳಭಟ್ಟಿ ತಯಾರಿ ಹಾಗೂ ಕುಡಿತ ಬಿಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಎಂದು ಹೇಳಿದವರು.
ಚಂದಾಪುರ ಆರೋಗ್ಯ ಇಲಾಖೆಯ ಡಾ ಆರ್.ಆರ್. ಪಾಟೀಲ, ಕುಡಿತದಿಂದಾಗುವ ದುಷ್ಪರಿಣಾಮಗಳ ಕುರಿತು ಮಾತನಾಡಿದರು. ನ್ಯಾಯವಾದಿ ಭಾರತಿ, ಸಿ.ಎನ್. ಬಡ್ಡಿ. ಎಸ್.ವೈ. ಕಮ್ಮಾರ ಅಕ್ರಮ ಸಾರಾಯಿ ಮಾರಾಟಕ್ಕೆ ಕಾನೂನು ಯಾವ ರೀತಿ ಶಿಕ್ಷೆ ವಿಧಿಸುತ್ತದೆ ಹಾಗೂ ಅದರಿಂದಾಗುವ ತೊಂದರೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ಪಿಎಸ್ಐ ಕೆ.ಆರ್. ಗೋವಿಂದಪ್ಪ. ಪಿಎಸ್ಐ ಎನ್.ಎಚ್. ಮೈಲಾರ, ಪಿ.ವಿ. ಲಮಾಣಿ, ಚನ್ನಪ್ಪ ಲಮಾಣಿ, ಎಸ್ಡಿಎಂಸಿ ಅಧ್ಯಕ್ಷರು, ಎಸ್ಡಿಎಂಸಿ ಎಸ್.ಎಸ್. ಕಣಕಣ್ಣವರ, ಪರಶುರಾಮ ಲಮಾಣಿ ಮತ್ತು ವಿ.ವೈ. ಬೆಂಡಿಗೇರಿ, ಊರಿನ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಅಬಕಾರಿ ಜಾರಿ ಮತ್ತು ಲಾಟರಿ ನಿಷೇಧ ದಳದ ಸಿಪಿಐ ಟಿ.ಎಚ್. ರಾಜಪ್ಪ ಸ್ವಾಗತಿಸಿದರು. ಶಿಕ್ಷಕ ಪರಮೇಶ್ವರಪ್ಪ ಬಿ. ನಿರೂಪಿಸಿದರು. ವಿ.ಬಿ. ಕಾಳೆ ವಂದಿಸಿದರು.